ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಸಭೆಗೆ ಐಯುಎಂಎಲ್ ಅಭ್ಯರ್ಥಿಯಾಗಿ ವಕೀಲ ಹ್ಯಾರಿಸ್‌ ಬೀರನ್ ಆಯ್ಕೆ

Published 10 ಜೂನ್ 2024, 16:30 IST
Last Updated 10 ಜೂನ್ 2024, 16:30 IST
ಅಕ್ಷರ ಗಾತ್ರ

ತಿರುವನಂತಪುರ: ರಾಜ್ಯಸಭೆ ಚುನಾವಣೆಗೆ ತನ್ನ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ ವಕೀಲ ಹ್ಯಾರಿಸ್ ಬೀರನ್ ಅವರನ್ನು ಇಂಡಿಯನ್‌ ಯೂನಿಯನ್‌ ಮುಸ್ಲಿಂ ಲೀಗ್ (ಐಯುಎಂಎಲ್) ಆಯ್ಕೆ ಮಾಡಿದೆ.

ಮೈತ್ರಿಪಕ್ಷಗಳ ಒತ್ತಡಕ್ಕೆ ಮಣಿದಿರುವ ಸಿಪಿಎಂ ಪಕ್ಷವು ಸಿಪಿಐ ಮತ್ತು ಕೇರಳ ಕಾಂಗ್ರೆಸ್ (ಎಂ) ಪಕ್ಷಗಳಿಗೂ ಸೀಟು ಬಿಟ್ಟುಕೊಡಲು ತೀರ್ಮಾನಿಸಿದೆ. 

ಪಕ್ಷದ ಸಹ ಕಾರ್ಯದರ್ಶಿ ಪಿ.ಪಿ.ಸುನೀರ್ ಅವರನ್ನು ಅಭ್ಯರ್ಥಿಯಾಗಿಸಲು ಸಿಪಿಐ ನಿರ್ಧರಿಸಿದ್ದರೆ, ಕೇರಳ ಕಾಂಗ್ರೆಸ್‌ (ಎಂ) ಪಕ್ಷವು ಜೋಸ್‌ ಕೆ.ಮಣಿ ಅವರನ್ನೇ ಮತ್ತೊಂದು ಅವಧಿಗೆ ಆಯ್ಕೆ ಮಾಡುವ ಸಂಭವವಿದೆ.

ಸಿಪಿಎಂ ಪಕ್ಷದ ಎಲಮಾರಂ ಕರೀಂ, ಸಿಪಿಐ ರಾಜ್ಯ ಕಾರ್ಯದರ್ಶಿ ಬಿನೊಯ್ ವಿಶ್ವಂ ಮತ್ತು ಜೋಸ್ ಕೆ. ಮಣಿ ಅವರ ರಾಜ್ಯಸಭೆ ಅಧಿಕಾರವಧಿಯು ಜುಲೈ 1ಕ್ಕೆ ಮುಗಿಯಲಿದೆ. ಪ್ರಸ್ತುತ ಇರುವ ಸ್ಥಾನಬಲದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ ಒಂದು ಮತ್ತು ಎಲ್‌ಡಿಎಫ್‌ ಎರಡು ಸ್ಥಾನ ಗೆಲ್ಲಬಹುದಾಗಿದೆ.

ಕಾಂಗ್ರೆಸ್ ಈ ಹಿಂದೆ ಐಯುಎಂಎಲ್‌ಗೆ ಒಂದು ಸ್ಥಾನ ಬಿಡಲು ನಿರ್ಧರಿಸಿತ್ತು. ಐಯುಎಂಎಲ್ ಪಕ್ಷ ಸೋಮವಾರ ಬೀರನ್‌ ಹೆಸರನ್ನು ಪ್ರಕಟಿಸಿತು. ಬೀರನ್ ಸದ್ಯ ಪಕ್ಷದ ದೆಹಲಿ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನೊಂದೆಡೆ, ಎಲ್‌ಡಿಎಫ್‌ನಲ್ಲಿ ಎರಡು ರಾಜ್ಯಸಭಾ ಸ್ಥಾನಗಳಿಗೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಸಿಪಿಎಂ ಒಂದು ಸ್ಥಾನಕ್ಕೆ ಅಭ್ಯರ್ಥಿ ಹಾಕಲು ಚಿಂತನೆ ನಡೆಸಿದ್ದು, ಕೇರಳ ಕಾಂಗ್ರೆಸ್‌ (ಎಂ) ಮತ್ತು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ಇನ್ನೊಂದು ಸ್ಥಾನಕ್ಕೆ ಹಕ್ಕು ಪ್ರತಿಪಾದಿಸಿದೆ.

ಹಲವು ಸುತ್ತಿನ ಮಾತುಕತೆಯ ಬಳಿಕ ಎಲ್‌ಡಿಎಫ್‌ ನಾಯಕತ್ವವು ಸಿಪಿಐ ಮತ್ತು ಕೆಸಿ (ಎಂ) ಪಕ್ಷಕ್ಕೆ ಸೀಟು ಬಿಟ್ಟುಕೊಡಲು ತೀರ್ಮಾನಿಸಿತು. ಆರ್‌ಜೆಡಿ ತನ್ನ ತೀವ್ರ ಪ್ರತಿರೋಧವನ್ನು ದಾಖಲಿಸಿದೆ ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT