ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೇಶವಾನಂದ ಭಾರತಿ’ ತೀರ್ಪು: ಕನ್ನಡದಲ್ಲಿ ಲಭ್ಯ

Published 7 ಡಿಸೆಂಬರ್ 2023, 15:59 IST
Last Updated 7 ಡಿಸೆಂಬರ್ 2023, 15:59 IST
ಅಕ್ಷರ ಗಾತ್ರ

ನವದೆಹಲಿ: ಸಂವಿಧಾನದ ಮೂಲ ಸ್ವರೂಪದ ತಾತ್ವಿಕತೆಯನ್ನು ವಿವರಿಸಿ, ಕೇಶವಾನಂದ ಭಾರತಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ಐತಿಹಾಸಿಕ ತೀರ್ಪು ಈಗ ಕನ್ನಡ ಸೇರಿದಂತೆ ದೇಶದ ಹತ್ತು ಭಾಷೆಗಳಲ್ಲಿ ಲಭ್ಯವಿದೆ.

ಈ ತೀರ್ಪು ಬಂದು ಐವತ್ತು ವರ್ಷಗಳು ಸಂದಿರುವ ಈ ಹೊತ್ತಿನಲ್ಲಿ, ತೀರ್ಪಿನ ಪ್ರತಿಯನ್ನು ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ 10 ಭಾಷೆಗಳಲ್ಲಿ ನೀಡಲಾಗಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ಅವರು ಗುರುವಾರ ಹೇಳಿದರು.

1973ರಲ್ಲಿ ಬಂದ ಈ ತೀರ್ಪು, ಸಂವಿಧಾನಕ್ಕೆ ತಿದ್ದುಪಡಿ ತರುವ ವಿಚಾರದಲ್ಲಿ ಸಂಸತ್ತಿಗೆ ಇದ್ದ ವ್ಯಾಪಕ ಅಧಿಕಾರವನ್ನು ಮೊಟಕುಗೊಳಿಸಿತು. ಅಲ್ಲದೆ, ಸಂವಿಧಾನಕ್ಕೆ ತರುವ ಯಾವುದೇ ತಿದ್ದುಪಡಿಯನ್ನು, ಅದು ಸಂವಿಧಾನದ ಮೂಲ ಸ್ವರೂಪಕ್ಕೆ ಅನುಗುಣವಾಗಿ ಇದೆಯೇ ಎಂಬ ಆಧಾರದಲ್ಲಿ ಪರಿಶೀಲನೆಗೆ ಒಳಪಡಿಸುವ ಅಧಿಕಾರವನ್ನು ನ್ಯಾಯಾಂಗಕ್ಕೆ ನೀಡಿತು.

‘ಕೇಶವಾನಂದ ಭಾರತಿ ಪ್ರಕರಣದ ತೀರ್ಪು ಪ್ರಕಟವಾಗಿ ಐವತ್ತು ವರ್ಷಗಳ ಸಂದ ನೆನಪಿಗಾಗಿ ನಾವು ಒಂದು ವೆಬ್‌ ಪುಟವನ್ನು ಸೃಷ್ಟಿಸಿದ್ದೆವು. ಸಮಾಜದ ಇನ್ನಷ್ಟು ಜನರನ್ನು ತಲುಪಬೇಕು ಎಂಬ ಉದ್ದೇಶದಿಂದ, ತೀರ್ಪನ್ನು ಭಾರತದ ಇತರ ಭಾಷೆಗಳಿಗೆ ಅನುವಾದಿಸಬಹುದು ಎಂಬ ಆಲೋಚನೆ ನನಗೆ ಬಂತು’ ಎಂದು ಸಿಜೆಐ ಅವರು ಗುರುವಾರ ಹೇಳಿದರು.

ಈಗ ತೀರ್ಪಿನ ಪ್ರತಿಯು ಹಿಂದಿ, ತೆಲುಗು, ತಮಿಳು, ಒಡಿಯಾ, ಮಲಯಾಳ, ಗುಜರಾತಿ, ಕನ್ನಡ, ಬಂಗಾಳಿ, ಅಸ್ಸಾಮಿ ಮತ್ತು ಮರಾಠಿ ಭಾಷೆಗಳಲ್ಲಿ ಲಭ್ಯವಿದೆ ಎಂದು ತಿಳಿಸಿದರು. ಸುಪ್ರೀಂ ಕೋರ್ಟ್‌ನ 20 ಸಾವಿರ ತೀರ್ಪುಗಳು ಭಾರತದ ಇತರ ಭಾಷೆಗಳಿಗೆ ಅನುವಾದಗೊಂಡಿವೆ ಎಂದರು.

ಆದೇಶಗಳು ಪ್ರಾದೇಶಿಕ ಭಾಷೆಗೆ ಅನುವಾದ ಆಗುವಂತೆ ನೋಡಿಕೊಳ್ಳಲು ಸಿದ್ಧವಿರುವುದಾಗಿ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ತಮಗೆ ಈಚೆಗೆ ತಿಳಿಸಿದ್ದಾರೆ ಎಂದು ಸಿಜೆಐ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT