ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನೌಷಧ ಕೇಂದ್ರ ತೆರೆಯುವವರಿಗೆ SIDBI ಸಾಲ ಯೋಜನೆ ಪರಿಚಯಿಸಿದ ಮಾಂಡವಿಯಾ

Published 12 ಮಾರ್ಚ್ 2024, 13:10 IST
Last Updated 12 ಮಾರ್ಚ್ 2024, 13:10 IST
ಅಕ್ಷರ ಗಾತ್ರ

ನವದೆಹಲಿ: ‘ಜನೌಷಧ ಕೇಂದ್ರ ತೆರೆಯುವವರ ಕೈಗಳನ್ನು ಬಲಪಡಿಸಲು ಹಾಗೂ ಅವರ ವ್ಯಾವಹಾರಿಕ ಜಾಲವನ್ನು ಇನ್ನಷ್ಟು ವಿಸ್ತರಿಸಲು ನೆರವಾಗುವಂತೆ SIDBI ಸಾಲ ಯೋಜನೆ ಪರಿಚಯಿಸಲಾಗುತ್ತಿದೆ’ ಎಂದು ಕೇಂದ್ರ ಆರೋಗ್ಯ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಮನ್ಸುಖ್ ಮಾಂಡವಿಯಾ ಮಂಗಳವಾರ ಘೋಷಿಸಿದ್ದಾರೆ.

ಈ ಯೋಜನೆಗಾಗಿ ಆರಂಭಿಸಲಾದ ಪ್ರತ್ಯೇಕ ಅಂತರ್ಜಾಲ ತಾಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಈ ಸಾಲ ಯೋಜನೆಯು ಸಣ್ಣ ಪ್ರಮಾಣದಲ್ಲಿ ಜನೌಷಧ ಕೇಂದ್ರಗಳನ್ನು ಆರಂಭಿಸುವವರಿಗೆ ಯಾವುದೇ ಮೇಲಾಧಾರವಿಲ್ಲದೆ ನೀಡಲಾಗುತ್ತದೆ. ಮೂಲ ಬಂಡವಾಳ ಅಥವಾ ಟರ್ಮ್ ಲೋನ್ ಮೇಲೆ ಈ ಸಾಲದ ಗ್ಯಾರಂಟಿಯನ್ನು ಸೂಕ್ಷ್ಮ ಹಾಗೂ ಸಣ್ಣ ಬಂಡವಾಳಗಾರರ ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್‌ನಿಂದ ನೀಡಲಾಗುತ್ತದೆ’ ಎಂದರು.

‘ಯಾವುದೇ ಸಮಾಜದಲ್ಲಿ ಔಷಧವು ಕೈಗೆಟಕುವ ಬೆಲೆ ಮತ್ತು ಸುಲಭವಾಗಿ ದೊರಕುವಂತಿರಬೇಕು. 2014ರಲ್ಲಿ 80 ಜನೌಷಧ ಕೇಂದ್ರಗಳೊಂದಿಗೆ ಆರಂಭವಾದ ಈ ಯೋಜನೆಯು, ಈಗ ದೇಶದಾದ್ಯಂತ 11 ಸಾವಿರ ಮಳಿಗೆಗಳು ಕಾರ್ಯಾರಂಭ ಮಾಡಿವೆ’ ಎಂದು ಮಾಂಡವಿಯಾ ಹೇಳಿದ್ದಾರೆ.

‘ಪ್ರತಿದಿನ ಜನೌಷಧ ಕೇಂದ್ರಗಳಿಗೆ 10ರಿಂದ 12 ಲಕ್ಷ ಜನ ಭೇಟಿ ನೀಡುತ್ತಿದ್ದಾರೆ. ಇವರೆಲ್ಲರಿಗೂ ಸಾಕಷ್ಟು ಹಣ ಉಳಿತಾಯವಾಗುತ್ತಿದೆ ಮತ್ತು ಅವರಿಗೆ ಅಗತ್ಯವಿರುವ ಔಷಧಗಳೂ ಸಿಗುತ್ತಿವೆ. ಜನೌಷಧ ಕೇಂದ್ರಗಳಿಗೆ ಔಷಧ ಪೂರೈಕೆ ಹಾಗೂ ವಿವಿಧ ಬಗೆಯ ಔಷಧಗಳ ಲಭ್ಯತೆ ಹೆಚ್ಚಿಸುವುದು, ಇರುವ ಔಷಧಗಳ ದಾಸ್ತಾನು ಕಾಪಾಡುವುದು ಸೇರಿದಂತೆ ಅವುಗಳ ಬಲವನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಿಟ್ಟ ಕ್ರಮ ವಹಿಸಿದೆ’ ಎಂದು ತಿಳಿಸಿದರು.

‘2026ರ ಮಾರ್ಚ್‌ 31ರೊಳಗೆ ದೇಶದಲ್ಲಿ 25 ಸಾವಿರ ಜನೌಷಧ ಕೇಂದ್ರಗಳನ್ನು ಪ್ರಾರಂಭಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. 2024ರ ಜ. 31ರವರೆಗೆ 10,624 ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. 2022–23ರಲ್ಲಿ ಒಟ್ಟು ₹1,235 ಕೋಟಿ ವಹಿವಾಟು ನಡೆದಿದ್ದು, ಇದರಿಂದ ನಾಗರಿಕರಿಗೆ ₹7,416 ಕೋಟಿ ಉಳಿತಾಯವಾಗಿದೆ ಎಂದು ಔಷಧ ಮತ್ತು ವೈದ್ಯಕೀಯ ಸಾಧನಗಳ ಭಾರತೀಯ ಬ್ಯೂರೊ ತಿಳಿಸಿದೆ. 1,965 ಜೆನರಿಕ್ ಔಷಧ ಹಾಗೂ 293 ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಔಷಧಗಳು ಕೈಗೆಟಕುವ ದರದಲ್ಲಿ ಲಭ್ಯ. ಈ ಯೋಜನೆ ಮೂಲಕ ಕಳೆದ 10 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ನಾಗರಿಕರ ₹28 ಸಾವಿರ ಕೋಟಿಯಷ್ಟು ಉಳಿಸಿದೆ’ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT