ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛಗನ್ ಭುಜಬಲ್ ರಾಜೀನಾಮೆ ಅಂಗೀಕರಿಸಿಲ್ಲ: ದೇವೇಂದ್ರ ಫಡಣವೀಸ್

Published 4 ಫೆಬ್ರುವರಿ 2024, 15:48 IST
Last Updated 4 ಫೆಬ್ರುವರಿ 2024, 15:48 IST
ಅಕ್ಷರ ಗಾತ್ರ

ಮುಂಬೈ/ಛತ್ರಪತಿ ಸಂಭಾಜಿನಗರ: ಸಂಪುಟ ಸಚಿವ ಹಾಗೂ ಹಿಂದುಳಿದ ಸಮುದಾಯದ ಹಿರಿಯ ಮುಖಂಡ ಛಗನ್ ಭುಜಬಲ್ ಅವರ ರಾಜೀನಾಮೆ ಅಂಗೀಕಾರವಾಗಿಲ್ಲ ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ಮುಖ್ಯಮಂತ್ರಿ ಏಕನಾಥ್ ಶಿಂದೆ ಅವರು ಮಾತ್ರ ಸ್ಪಷ್ಟನೆ ನೀಡಬಲ್ಲರು ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರ ಸರ್ಕಾರವು ಹಿಂದುಳಿದ ಸಮುದಾಯಗಳ ಮೀಸಲಾತಿ ಕೋಟಾದೊಳಗೆ ಮರಾಠಾ ಸಮುದಾಯಕ್ಕೆ ‘ಹಿಂಬಾಗಿಲ ಪ್ರವೇಶ’ಕ್ಕೆ ಅವಕಾಶ ನೀಡುತ್ತಿದೆ ಎಂದು ಆರೋಪಿಸಿದ್ದ ಭುಜಬಲ್, ಕಳೆದ ನವೆಂಬರ್‌ 16ರಂದು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. 

‘ತಾನು ಮರಾಠಾ ಮೀಸಲಾತಿಯ ವಿರೋಧಿಯಲ್ಲ. ಆದರೆ, ಅದಕ್ಕಾಗಿ ಒಬಿಸಿ ಮೀಸಲಾತಿ ವಿಭಜಿಸುವುದನ್ನು ವಿರೋಧಿಸುತ್ತೇನೆ’ ಎಂದು ಎನ್‌ಸಿಪಿಯ ಅಜಿತ್ ಪವಾರ್ ಬಣದ ಮುಖಂಡ ಭುಜಬಲ್ ತಿಳಿಸಿದ್ದರು.

‘ಭುಜಬಲ್‌ರಿಂದ ಫಡಣವೀಸ್, ಪವಾರ್‌ಗೆ ಹಾನಿ’

ಮಹಾರಾಷ್ಟ್ರದ ಸಚಿವ ಛಗನ್ ಭುಜಬಲ್ ಅವರು ತಮ್ಮ ಹೇಳಿಕೆಗಳಿಂದ ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್ ಹಾಗೂ ಅಜಿತ್ ಪವಾರ್ ಅವರಿಗೆ ಹಾನಿ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜಾರಂಗೆ ಭಾನುವಾರ ಹೇಳಿದ್ದಾರೆ.

ನಕಲಿ ಮತ್ತು ತಿದ್ದಿದ ದಾಖಲೆಗಳನ್ನು ಆಧರಿಸಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಒದಗಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಭುಜಬಲ್ ಅವರ ಆರೋಪಗಳನ್ನು ಅಲ್ಲಗಳೆದ ಜಾರಂಗೆ, ‘ಅವರಿಗೆ ಏನೂ ಅರ್ಥವಾಗುವುದಿಲ್ಲ. ಇಲ್ಲಿ ಕಾನೂನಿದೆ, ಸರ್ಕಾರವಿದೆ, ಸಮಿತಿಯಿದೆ. ತಜ್ಞರು ಅದರ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೆ, ಭುಜಬಲ್ ಸರ್ಕಾರದ ಬಗ್ಗೆ ಅನುಮಾನ ಪಡುತ್ತಿದ್ದಾರೆ. ಉಪಮುಖ್ಯಮಂತ್ರಿಗಳಾದ ದೇವೇಂದ್ರ ಫಡಣವೀಸ್, ಅಜಿತ್ ಪವಾರ್ ಅವರಿಗೆ ಹಾನಿ ಮಾಡಲು ಭುಜಬಲ್ ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT