ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿರಣ್‌ ರಿಜಿಜು ವಿರುದ್ಧ ವಿಪಕ್ಷಗಳ ವಾಗ್ದಾಳಿ!

Published 18 ಮೇ 2023, 15:05 IST
Last Updated 18 ಮೇ 2023, 15:05 IST
ಅಕ್ಷರ ಗಾತ್ರ

ನವದೆಹಲಿ: ಕೇಂದ್ರ ಕಾನೂನು ಸಚಿವ ಸ್ಥಾನದಿಂದ ಕಿರಣ್‌ ರಿಜಿಜು ಅವರನ್ನು ತೆಗೆದು ಭೂವಿಜ್ಞಾನಗಳ ಖಾತೆ ನೀಡಿದ ಬೆನ್ನಲ್ಲೇ ವಿರೋಧ ಪಕ್ಷಗಳು ರಿಜಿಜು ವಿರುದ್ಧ ವಾಗ್ದಾಳಿ ನಡೆಸಿವೆ.

‘ರಿಜಿಜು ಅವರು ಕಾನೂನು ಸಚಿವರಾಗಿ ತಮಗೆ ನೀಡಿದ ಖಾತೆಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದರು’ ಎಂದು ಕಾಂಗ್ರೆಸ್‌ ಸಂಸದ ಮಾಣಿಕಂ ಟ್ಯಾಗೋರ್ ಟೀಕಿಸಿದ್ದಾರೆ. ಮಾಣಿಕಂ ಅವರು ಲೋಕಸಭೆಯಲ್ಲಿ  ಸಚೇತಕರೂ ಆಗಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ‘ಕಾನೂನು ಸಚಿವರಾಗಿ ವಿಫಲರಾದವರು ಭೂವಿಜ್ಞಾನಗಳ ಖಾತೆಗೆ ಹೊಣೆ ಹೊತ್ತಿದ್ದಾರೆ. ಅಲ್ಲಿ ಏನು ಮಾಡಬಲ್ಲರು’ ಎಂದು ಪ್ರಶ್ನಿಸಿದ್ದಾರೆ. 

‘ಅವರು (ರಿಜಿಜು) ಈಗ ಕಾನೂನು ಸಚಿವರಲ್ಲ ಭೂವಿಜ್ಞಾನಗಳ ಸಚಿವರು. ಕಾನೂನುಗಳ ಹಿಂದಿರುವ ತತ್ವಗಳನ್ನು ಅರ್ಥ ಮಾಡಿಕೊಳ್ಳುವುದು ಸುಲಭವಲ್ಲ. ಈಗ ಅವರು ವಿಜ್ಞಾನದ ನಿಯಮಗಳೊಂದಿಗೆ ಗುದ್ದಾಡಲಿದ್ದಾರೆ’ ಎಂದು ಹಿರಿಯ ವಕೀಲ ಹಾಗೂ ರಾಜ್ಯಸಭಾ ಸದಸ್ಯರಾದ ಕಪಿಲ್‌ ಸಿಬಲ್‌ ಹೇಳಿದ್ದಾರೆ.

‘ಈ ಬೆಳವಣಿಗೆಯು ಆಡಳಿತ ಪಕ್ಷದಲ್ಲಿ ಪ್ರತಿಭಾವಂತರ ಕೊರತೆ ಇದೆ ಎಂಬುದನ್ನು ಮಾತ್ರವಲ್ಲ ಸರ್ಕಾರ ಅಸಮರ್ಥವಾಗಿದೆ ಎಂಬುದನ್ನೂ ತೋರಿಸುತ್ತದೆ’ ಎಂದು ಕಾಂಗ್ರೆಸ್‌ ಸಂಸದ ಅಭಿಷೇಕ್‌ ಮನು ಸಿಂಘ್ವಿ ಟ್ವೀಟ್‌ ಮಾಡಿದ್ದಾರೆ.

ಜಗತ್ತಿನಲ್ಲಿಯೇ ಅತಿದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಗೆ ಪೂರ್ಣಾವಧಿ ಕಾನೂನು ಸಚಿವರನ್ನು ನೇಮಕ ಮಾಡುವುದು ಸಾಧ್ಯವಾಗಿಲ್ಲ.
ಅಭಿಷೇಕ್‌ ಮನು ಸಿಂಘ್ವಿ, ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ, ಹಿರಿಯ ವಕೀಲ

‘ಮಹಾರಾಷ್ಟ್ರದ ರಾಜಕೀಯ ಕುರಿತು ಇತ್ತೀಚೆಗೆ ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪು ರಿಜಿಜು ಅವರ ಖಾತೆ ಬದಲಾವಣೆಗೆ ಕಾರಣವಿರಬಹುದೇ’ ಎಂದು ಉದ್ಧವ್‌ ಠಾಕ್ರೆ ನೇತೃತ್ವದ ಶಿವಸೇನಾ ನಾಯಕಿ ಹಾಗೂ ರಾಜ್ಯಸಭಾ ಸದಸ್ಯೆ ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ‘ಮಹಾರಾಷ್ಟ್ರದ ರಾಜಕೀಯ ಬೆಳವಣಿಗೆ ಕುರಿತ ತೀರ್ಪಿನಿಂದಾಗಿ ಈ ಬದಲಾವಣೆ ಮಾಡಲಾಗಿದೆಯೇ ಅಥವಾ ಮೋದಾನಿ–ಸೆಬಿ ತನಿಖೆ ಕಾರಣವೇ’ ಎಂದು ಕೇಳಿದ್ದಾರೆ.

‘ಕಿರಣ್‌ ರಿಜಿಜು ಅವರನ್ನು ಕಾನೂನು ಸಚಿವ ಸ್ಥಾನದಿಂದ ತೆಗದಿರುವುದು ದೇಶದ ನ್ಯಾಯಾಂಗ ವ್ಯವಸ್ಥೆಯ ಜಯ’ ಎಂದು ಶಿವಸೇನಾ (ಯುಬಿಟಿ) ನಾಯಕ ರಾಜ್ಯಸಭಾ ಸದಸ್ಯ ಸಂಜಯ್ ರಾವುತ್‌ ಹೇಳಿದ್ದಾರೆ.

ವಿವಾದದ ಕೇಂದ್ರವಾಗಿದ್ದ ರಿಜಿಜು

ಸದಾ ವಿವಾದ ರಿಜಿಜು ಅವರು ಕೇಂದ್ರ ಕಾನೂನು ಸಚಿವರಾಗಿ ಅಧಿಕಾರ ವಹಿಸಿಕೊಂಡ ದಿನದಿಂದಲೂ ಸುಪ್ರೀಂಕೋರ್ಟ್‌ ಕೊಲಿಜಿಯಂ ವ್ಯವಸ್ಥೆಯನ್ನು ಟೀಕಿಸುತ್ತಿದ್ದರು. ಹೈಕೋರ್ಟ್‌ ಹಾಗೂ ಸುಪ್ರೀಂಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳನ್ನು ನೇಮಕ ಮಾಡುವ ಈ ವ್ಯವಸ್ಥೆಯು ‘ಸಂವಿಧಾನಕ್ಕೆ ವಿರುದ್ಧವಾಗಿದೆ’ ಎಂದೇ ರಿಜಿಜು ಹೇಳುತ್ತಿದ್ದರು. ‘ಕೆಲ ನಿವೃತ್ತ ನ್ಯಾಯಮೂರ್ತಿಗಳು ಭಾರತ ವಿರೋಧಿ ಗುಂಪಿನ ಭಾಗವಾಗಿದ್ದಾರೆ. ಭಾರತದ ನ್ಯಾಯಾಂಗ ವ್ಯವಸ್ಥೆಯು ವಿರೋಧ ಪಕ್ಷದಂತೆ ಕಾರ್ಯನಿರ್ವಹಿಸುವಂತೆ ಮಾಡಲು ಈ ಗುಂಪು ಪ್ರಯತ್ನಿಸುತ್ತಿದೆ ’ ಎಂದು ಇತ್ತೀಚೆಗೆ ರಿಜಿಜು ಹೇಳಿದ್ದರು. ಅವರ ಈ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT