ಮಂಗಳವಾರ, 25 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಬಕಾರಿ ನೀತಿ ಪ್ರಕರಣವೇ ತಪ್ಪು ಎಂದರೆ ಬಂಧಿತರನ್ನು ಬಿಡುಗಡೆಗೊಳಿಸಿ: ಕೇಜ್ರಿವಾಲ್

Published 24 ಮೇ 2024, 14:54 IST
Last Updated 24 ಮೇ 2024, 14:54 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿ ಅಬಕಾರಿ ನೀತಿ ಪ್ರಕರಣ ತಪ್ಪು ಎಂದು ಪ್ರಧಾನಿ ನರೇಂದ್ರ ಮೋದಿ ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಬಂಧಿತರಾದವರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಹಾಗೂ ಈ ಪ್ರಕರಣದ ಆರೋಪಿ ಅರವಿಂದ ಕೇಜ್ರಿವಾಲ್ ಆಗ್ರಹಿಸಿದ್ದಾರೆ.

ವರ್ಚುವಲ್ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಶುಕ್ರವಾರ ಮಾತನಾಡಿದ ಅವರು, ‘ಪ್ರಧಾನಿ ಪ್ರಕರಣವೇ ತಪ್ಪು ಎನ್ನುತ್ತಿದ್ದಾರೆ. ಆದರೆ ಬಿಜೆಪಿಯವರು ಇದೊಂದು ಹಗರಣ ಎಂದು ಬೊಬ್ಬೆ ಹಾಕುತ್ತಿದ್ದಾರೆ’ ಎಂದಿದ್ದಾರೆ.

‘ಕಳೆದ ಎರಡು ವರ್ಷಗಳಿಂದ ಅಬಕಾರಿ ನೀತಿ ಹಗರಣ ಎಂದು ಬೊಬ್ಬೆ ಹಾಕುತ್ತಿರುವ ಬಿಜೆಪಿ ಮುಖಂಡರು, ₹100 ಕೋಟಿಯಷ್ಟು ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ ಈವರೆಗೂ ನಯಾಪೈಸೆಯೂ ವಶಪಡಿಸಿಕೊಳ್ಳಲು ಆಗಿಲ್ಲ’ ಎಂದು ಕೇಜ್ರಿವಾಲ್ ಹೇಳಿದ್ದಾರೆ. 

‘ಗುರುವಾರ ನಡೆದ ಸಂದರ್ಶನದಲ್ಲಿ, ಪ್ರಕರಣದಲ್ಲಿ ಯಾವುದೇ ಸಾಕ್ಷಿ ಲಭ್ಯವಾಗಿಲ್ಲ ಎಂದು ಕೇಜ್ರಿವಾಲ್ ಹೇಳುತ್ತಿದ್ದಾರಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ, ‘ಕೇಜ್ರಿವಾಲ್‌ ನುರಿತ ಕಳ್ಳನಾಗಿರುವ ಕಾರಣ, ಯಾವುದೇ ಹಣ ದೊರೆತಿಲ್ಲ. ಈವರೆಗೂ ಯಾವುದೇ ರೀತಿಯ ನಗದು ವಶಪಡಿಸಿಕೊಂಡಿಲ್ಲ ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದಿದ್ದಾರೆ’ ಎಂದು ಕೇಜ್ರಿವಾಲ್ ಹೇಳಿದ್ದಾರೆ.

‘ಪ್ರಧಾನಿ ಅವರ ಈ ಮಾತಿನಿಂದಲೇ ತಪ್ಪಾಗಿ ಬಂಧಿಸಲಾಗಿದೆ ಎಂಬುದು ಸ್ಪಷ್ಟವಾಗಿದೆ. ಅಬಕಾರಿ ನೀತಿ ಹಗರಣವೇ ತಪ್ಪು ಎಂದಿರುವಾಗ, ಅದರ ಉದ್ದೇಶಕ್ಕಾಗಿ ಬಂಧಿತರಾದವರನ್ನು ಕೂಡಲೇ ಬಿಡುಗಡೆ ಮಾಡಬೇಕು’ ಎಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT