ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ 150 ಸ್ಥಾನಕ್ಕೆ ಕುಸಿಯಲಿದೆ: ರಾಹುಲ್‌ ಗಾಂಧಿ

ಶೆಮಿನ್‌ ಜಾಯ್
Published 17 ಏಪ್ರಿಲ್ 2024, 21:13 IST
Last Updated 17 ಏಪ್ರಿಲ್ 2024, 21:13 IST
ಅಕ್ಷರ ಗಾತ್ರ

ಗಾಜಿಯಾಬಾದ್‌: ‘ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳಲ್ಲಿ ಮಾತ್ರ ಗೆಲ್ಲಲಿದೆ’ ಎಂದು ಭವಿಷ್ಯ ನುಡಿದಿರುವ ವಿಪಕ್ಷಗಳ ನಾಯಕರಾದ ರಾಹುಲ್‌ ಗಾಂಧಿ ಹಾಗೂ ಅಖಿಲೇಶ್‌ ಯಾದವ್‌, ‘ಕೊಳ್ಳೆ ಹೊಡೆಯುವುದು ಹಾಗೂ ಸುಳ್ಳುಗಳನ್ನು ಹೇಳುವುದೇ ಕೇಸರಿ ಪಕ್ಷದ ಗುರುತಾಗಿದೆ’ ಎಂದು ಬುಧವಾರ ವಾಗ್ದಾಳಿ ನಡೆಸಿದ್ದಾರೆ.

ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಉಭಯ ನಾಯಕರು,‘ಚುನಾವಣಾ ಬಾಂಡ್‌ಗಳ ರದ್ದತಿ, ರೈತರು ಮತ್ತು ಯುವಕರು ಎದುರಿಸುತ್ತಿರುವ ಸಮಸ್ಯೆಗಳು ಈ ಚುನಾವಣೆಯ ವಿಷಯಗಳಾಗಿವೆ. ಮತ ವಿಭಜನೆಯಾಗುವುದನ್ನು ತಡೆದು, ಒಂದೇ ಒಂದು ಮತ ಕೂಡ ಬಿಜೆಪಿಗೆ ಬೀಳುವುದಿಲ್ಲ ಎಂಬುದನ್ನು ಖಾತ್ರಿಪಡಿಸುವಂತೆ ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇವೆ’ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ,‘ಬಿಜೆಪಿ 180 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು 15–20 ದಿನಗಳ ಹಿಂದೆ ನನಗೆ ಅನಿಸಿತ್ತು. ಆದರೆ, ಈಗ ಆ ಪರಿಸ್ಥಿತಿ ಇಲ್ಲ. ಬಿಜೆಪಿ 150 ಸ್ಥಾನಗಳನ್ನು ಗೆಲ್ಲಬಹುದಷ್ಟೆ’ ಎಂದು ಹೇಳಿದರು.

‘ಪ್ರಧಾನಿ ಮೋದಿ ಅವರು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿರುವ ‘ದೀರ್ಘ’ ಮತ್ತು ‘ಪೂರ್ವ ಯೋಜಿತ’ ಸಂದರ್ಶನದಲ್ಲಿ ಚುನಾವಣಾ ಬಾಂಡ್‌ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಅಂತಿಮವಾಗಿ ಇದೊಂದು ವ್ಯರ್ಥ ಕಸರತ್ತು ಎಂಬುದು ಗೊತ್ತಾಯಿತು’ ಎಂದು ಟೀಕಿಸಿದರು.

‘ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಚುನಾವಣಾ ಬಾಂಡ್‌ ಯೋಜನೆಯನ್ನು ಜಾರಿಗೊಳಿಸಲಾಗಿತ್ತು ಎಂದು ಮೋದಿ ಆ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು ಹೇಳುವುದೇ ನಿಜವಿದ್ದಲ್ಲಿ, ಈ ಯೋಜನೆಯನ್ನು ಸುಪ್ರೀಂ ಕೋರ್ಟ್‌ ಯಾಕೆ ರದ್ದುಪಡಿಸಿತು’ ಎಂದು ಪ್ರಶ್ನಿಸಿದರು.

‘ಈ ಯೋಜನೆಯಲ್ಲಿ ಪಾರದರ್ಶಕತೆಯನ್ನು ತರಲು ಬಯಸಿದ್ದಲ್ಲಿ, ಬಿಜೆಪಿ ದೇಣಿಗೆ ನೀಡಿದವರ ಹೆಸರುಗಳನ್ನು, ಯಾವ ದಿನಾಂಕದಂದು ಅವರು ನಿಮಗೆ ಹಣ ನೀಡಿದ್ದರು ಎಂಬ ಮಾಹಿತಿಯನ್ನು ಯಾಕೆ ಮುಚ್ಚಿಟ್ಟಿದ್ದೀರಿ’ ಎಂದು ಪ್ರಶ್ನಿಸಿದ ಅವರು, ‘ಚುನಾವಣಾ ಬಾಂಡ್‌ ಯೋಜನೆ ವಿಶ್ವದ ಅತ್ಯಂತ ದೊಡ್ಡ ಸುಲಿಗೆ ಯೋಜನೆಯಾಗಿದೆ’ ಎಂದು ಟೀಕಿಸಿದರು.

‘ಎಲ್ಲ ಉದ್ಯಮಿಗಳು ಈ ಯೋಜನೆಯನ್ನು ಅರ್ಥ ಮಾಡಿಕೊಂಡಿದ್ದಾರೆ. ಈ ಯೋಜನೆ ಬಗ್ಗೆ ಅವರು (ಪ್ರಧಾನಿ ಮೋದಿ) ಎಷ್ಟೇ ಸ್ಪಷ್ಟೀಕರಣ ನೀಡಿದರೂ ಅದು ಯಾವುದೇ ಪರಿಣಾಮ ಬೀರುವುದಿಲ್ಲ. ಪ್ರಧಾನಿ ಮೋದಿ ಭ್ರಷ್ಟಾಚಾರದ ಚಾಂಪಿಯನ್‌’ ಎಂಬುದು ಇಡೀ ದೇಶಕ್ಕೆ ಗೊತ್ತು’ ಎಂದು ರಾಹುಲ್‌ ಗಾಂಧಿ ಹೇಳಿದರು.

‘ಈ ಬಾರಿಯ ಚುನಾವಣೆ ಆರ್‌ಎಸ್‌ಎಸ್‌–ಬಿಜೆಪಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ಸಿದ್ಧಾಂತಗಳ ನಡುವಿನ ಹೋರಾಟವಾಗಿದೆ. ದೇಶ ಎದುರಿಸುತ್ತಿರುವ ದೊಡ್ಡ ಸಮಸ್ಯೆಗಳ ಬಗ್ಗೆ ಬಿಜೆಪಿಯಾಗಲಿ ಅಥವಾ ಪ್ರಧಾನಿಯಾಗಲಿ ಮಾತನಾಡುತ್ತಿಲ್ಲ’ ಎಂದ ರಾಹುಲ್‌, ‘ನಿರುದ್ಯೋಗ ಮತ್ತು ಹಣದುಬ್ಬರ ಈ ಬಾರಿಯ ಚುನಾವಣೆಯ ಎರಡು ಪ್ರಮುಖ ವಿಷಯಗಳಾಗಿವೆ. ಆದರೆ, ಬಿಜೆಪಿ ಈ ವಿಷಯಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದೆ’ ಎಂದು ಟೀಕಿಸಿದರು.

ಕಾಂಗ್ರೆಸ್‌ ಹಾಗೂ ‘ಇಂಡಿಯಾ’ ಮೈತ್ರಿಕೂಟದ ಕಾರ್ಯಸೂಚಿ ಕುರಿತು ಪ್ರಸ್ತಾಪಿಸಿದ ರಾಹುಲ್‌, ‘ಬಡತನವನ್ನು ಒಮ್ಮೆಗೇ ಯಾರೂ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಆದರೆ, ಆ ನಿಟ್ಟಿನಲ್ಲಿ ಪ್ರಯತ್ನಗಳನ್ನು ಮಾಡಬೇಕು ಎಂಬುದೇ ನಮ್ಮ ನಿಲುವು’ ಎಂದರು.

‘ಈ ಬಾರಿ ಕಾಂಗ್ರೆಸ್‌ನಿಂದ ಕಡಿಮೆ ಸಂಖ್ಯೆಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದ್ದು, ಇದು ಪಕ್ಷ ದುರ್ಬಲವಾಗಿರುವುದೇ ಇದಕ್ಕೆ ಕಾರಣವೇ’ ಎಂಬ ಪ್ರಶ್ನೆಗೆ,‘ಕಾಂಗ್ರೆಸ್‌ ಪಕ್ಷ ಮುಕ್ತ ಮನಸು ಹೊಂದಿದ್ದು, ಹೊಂದಾಣಿಕೆಗೆ ಸಿದ್ಧವಿತ್ತು. ಇದೇ ಕಾರಣಕ್ಕಾಗಿಯೇ ಮಿತ್ರ ಪಕ್ಷಗಳಿಗೆ ಸೀಟುಗಳನ್ನು ಬಿಟ್ಟುಕೊಟ್ಟಿತು. ಇದು ದೌರ್ಬಲ್ಯದ ಪ್ರಶ್ನೆಯಲ್ಲ’ ಎಂದು ಪ್ರತಿಕ್ರಿಯಿಸಿದರು.

ಬದಲಾವಣೆ ಗಾಳಿ ಬೀಸಲು ಆರಂಭವಾಗಲಿದೆ: ಅಖಿಲೇಶ್

‘ಉತ್ತರ ಪ್ರದೇಶದಲ್ಲಿ ಈ ಬಾರಿ ಬದಲಾವಣೆಯ ಗಾಳಿ ಬೀಸಲು ಆರಂಭವಾಗಲಿದೆ. ಪಶ್ಚಿಮ ಭಾಗದ ಗಾಜಿಯಾಬಾದ್‌ನಿಂದ ಪೂರ್ವದಲ್ಲಿರುವ ಗಾಜಿಪುರವರೆಗೆ ಬೀಸಲಿರುವ ಈ ಬದಲಾವಣೆ ಗಾಳಿಯು ಬಿಜೆಪಿಗೆ ದೊಡ್ಡದಾದ ಬೀಳ್ಕೊಡುಗೆಯನ್ನೇ ನೀಡಲಿದೆ’ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹೇಳಿದರು. ‘ಬಿಜೆಪಿಯು ಎಲ್ಲ ಭ್ರಷ್ಟ್ರ ವ್ಯಕ್ತಿಗಳಿಂದ ತುಂಬಿದ ಗೋದಾಮಿನಂತಾಗಿದೆ. ಬಿಜೆಪಿ ನಾಯಕರು ಭ್ರಷ್ಟರನ್ನು ಮಾತ್ರ ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಅವರು ಭ್ರಷ್ಟಾಚಾರದ ಮೂಲಕ ಗಳಿಸಿರುವ ಹಣವನ್ನು ಸಹ ತಾವೇ ಇಟ್ಟುಕೊಳ್ಳುತ್ತಿದ್ದಾರೆ’ ಎಂದು ಟೀಕಿಸಿದರು. ‘ವಿಪಕ್ಷಗಳ ಒಕ್ಕೂಟದಲ್ಲಿ ಕುಟುಂಬವಾದವೇ ವಿಜೃಂಭಿಸುತ್ತಿದೆ’ ಎಂಬ ಮೋದಿ ಅವರ ಟೀಕೆ ಕುರಿತ ಪ್ರಶ್ನೆಗೆ ‘ಹಾಗಾದರೆ ಈಗ ಬಿಜೆಪಿಯವರು ಯಾವ ಕುಟುಂಬದ ಸದಸ್ಯರಿಗೂ ಟಿಕೆಟ್‌ ನೀಡುವುದಿಲ್ಲ ಇಲ್ಲವೇ ಅವರಿಂದ ಮತ ಕೇಳುವುದಿಲ್ಲ ಎಂಬ ಪ್ರತಿಜ್ಞೆ ಕೈಗೊಳ್ಳಬೇಕು’ ಎಂದು ಪ್ರತಿಕ್ರಿಯಿಸಿದರು.

ನಾಳೆಯಿಂದ ಜಂಟಿ ಪ್ರಚಾರ

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್ ಅವರು ಶುಕ್ರವಾರರಿಂದ ಜಂಟಿಯಾಗಿ ಪ್ರಚಾರ ಕಾರ್ಯ ಆರಂಭಿಸಲಿದ್ದಾರೆ. ಅಮ್ರೋಹ ಕ್ಷೇತ್ರದಿಂದ ಮತ ಯಾಚನೆ ಮಾಡಲಿರುವ ಉಭಯ ನಾಯಕರು ಕಾಂಗ್ರೆಸ್‌ ಅಭ್ಯರ್ಥಿ ಡ್ಯಾನಿಶ್‌ ಅಲಿ ಅವರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ. ಬಿಎಸ್‌ಪಿ ತೊರೆದು ಕಾಂಗ್ರೆಸ್‌ ಸೇರಿರುವ ಅಲಿ ಮರು ಆಯ್ಕೆ ಬಯಸಿದ್ದಾರೆ. ಇಲ್ಲಿ ಏಪ್ರಿಲ್‌ 26ರಂದು ಮತದಾನ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT