ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಸ್ಸಾಂ ಸರ್ಕಾರದ ವಿರುದ್ಧ ಗುಡುಗಿದ ರಾಹುಲ್‌

‘ಬೇಕಾದಷ್ಟು ಎಫ್‌ಐಆರ್‌ ದಾಖಲಿಸಿ;ನನ್ನನ್ನು ಬೆದರಿಸಲಾಗದು’: ವಾಗ್ದಾಳಿ
Published 24 ಜನವರಿ 2024, 16:31 IST
Last Updated 24 ಜನವರಿ 2024, 16:31 IST
ಅಕ್ಷರ ಗಾತ್ರ

ಬರ್ಪೇಟ(ಅಸ್ಸಾಂ): ‘ಹಿಂಸಾಚಾರ ನಡೆಸಲು ಗುಂಪೊಂದಕ್ಕೆ ಪ್ರಚೋದನೆ’ ನೀಡಿದ ಆರೋಪದಡಿ ಪಕ್ಷದ ನಾಯಕರ ವಿರುದ್ಧ ಗುವಾಹಟಿ ಪೊಲೀಸರು ಪ್ರಕರಣ ದಾಖಲಿಸಿದ ಬೆನ್ನಲ್ಲೇ, ಅಸ್ಸಾಂ ಸರ್ಕಾರದ ವಿರುದ್ಧ ಬುಧವಾರ ಗುಡುಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ‘ತಮ್ಮ ವಿರುದ್ಧ ಎಷ್ಟು ಬೇಕಾದರೂ ಎಫ್‌ಐಆರ್‌ಗಳನ್ನು ದಾಖಲಿಸಿ. ಇಂತಹ ಕ್ರಮಗಳಿಂದ ನನ್ನನ್ನು ಬೆದರಿಸಲು ಸಾಧ್ಯವಿಲ್ಲ’ ಎಂದಿದ್ದಾರೆ.

ಭಾರತ ಜೋಡೊ ನ್ಯಾಯ ಯಾತ್ರೆಯ ಏಳನೇ ದಿನವಾದ ಬುಧವಾರ ಇಲ್ಲಿ ಹಮ್ಮಿಕೊಂಡಿದ್ದ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ ವಿರುದ್ಧ ವಾಗ್ದಾಳಿ ನಡೆಸಿದರು.

‘ಹಿಮಂತ ಬಿಸ್ವ ಶರ್ಮ, ದೇಶದಲ್ಲಿಯೇ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ. ಭೂ ಹಾಗೂ ಅಡಿಕೆ ಸಾಗಣೆಗೆ ಸಂಬಂಧಿಸಿದ ಹಗರಣ ಸೇರಿದಂತೆ ಹಲವು ಆರೋಪಗಳನ್ನು ಎದುರಿಸುತ್ತಿದ್ದಾರೆ’ ಎಂದು ಟೀಕಿಸಿದರು.

‘ಶರ್ಮ ನಿಮ್ಮೊಂದಿಗೆ ಮಾತನಾಡುತ್ತಿರುವಂತೆಯೇ ನಿಮ್ಮ ಜಮೀನನ್ನು ಕಳುವು ಮಾಡುತ್ತಾರೆ. ನೀವು ಜಗಿಯುವ ಅಡಿಕೆಯ ವ್ಯಾಪಾರವನ್ನು ಅವರೇ ನಿಯಂತ್ರಿಸುತ್ತಾರೆ. ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿಯೂ ಶರ್ಮ ಜಮೀನು ಪಡೆದುಕೊಂಡಿದ್ದಾರೆ’ ಎಂದು ಆರೋಪಿಸಿದರು.

‘ಶರ್ಮ ಅವರ ದಿನ ಶುರುವಾಗುವುದೇ ದ್ವೇಷದೊಂದಿಗೆ. ಎಲ್ಲರನ್ನೂ ಅವರು ದ್ವೇಷಿಸುತ್ತಾರೆ. ಆದರೆ, ನಮ್ಮ ಹೋರಾಟ ಶರ್ಮ ವಿರುದ್ಧ ಅಲ್ಲ, ಅವರ ಹೃದಯದಲ್ಲಿರುವ ದ್ವೇಷ ಭಾವನೆ ವಿರುದ್ಧ’ ಎಂದೂ ಹೇಳಿದರು.

‘ಎಫ್‌ಐಆರ್‌ಗಳನ್ನು ದಾಖಲಿಸುವ ಮೂಲಕ ನನ್ನನ್ನು ಬೆದರಿಸಲು ಸಾಧ್ಯ ಎಂಬ ವಿಚಾರ ಹಿಮಂತ ಬಿಸ್ವ ಶರ್ಮ ಅವರಿಗೆ ಅದು ಹೇಗೆ ಹೊಳೆಯಿತೋ ನನಗೆ ತಿಳಿದಿಲ್ಲ. ಆದರೆ, ನನ್ನ ವಿರುದ್ಧ ಎಷ್ಟು ಬೇಕಾದರೂ ಎಫ್‌ಐಆರ್‌ಗಳನ್ನು ದಾಖಲಿಸಲಿ. ಇನ್ನೂ 25ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಲಿ. ಇದರಿಂದ ನಾನು ಹೆದರುವುದಿಲ್ಲ. ಬಿಜೆಪಿ–ಆರ್‌ಎಸ್‌ಎಸ್‌ ನನ್ನನ್ನು ಹೆದರಿಸಲು ಸಾಧ್ಯ ಇಲ್ಲ’ ಎಂದು ರಾಹುಲ್‌ ಗಾಂಧಿ ಹೇಳಿದರು.

‘ನರೇಂದ್ರ ಮೋದಿ ಅವರ ವಿಶೇಷ ಮಿತ್ರನ (ಗೌತಮ್‌ ಅದಾನಿ) ವಿರುದ್ಧ ನಾನು ಮಾತನಾಡಿದೆ. ಅದಕ್ಕಾಗಿ ನನ್ನ ವಿರುದ್ಧ ಪ್ರಕರಣ ದಾಖಲಿಸಲಾಯಿತು, ನಂತರ ಸಂಸತ್ತಿನ ಸದಸ್ಯತ್ವದಿಂದ ಅನರ್ಹಗೊಳಿಸಲಾಯಿತು. ನನಗೆ ನೀಡಿದ್ದ ಸರ್ಕಾರಿ ಬಂಗ್ಲೆಯನ್ನು ವಾಪಸು ಪಡೆಯಲಾಯಿತು. ನನಗೆ ಸರ್ಕಾರಿ ಬಂಗ್ಲೆ ಬೇಕಿರಲಿಲ್ಲ, ಸ್ವತಃ ನಾನೇ ಅದರ ಬೀಗದ ಕೈಗಳನ್ನು ಮರಳಿಸಿದೆ’ ಎಂದು ಹೇಳಿದರು.

‘ಪ್ರತಿಯೊಬ್ಬ ಭಾರತೀಯ ಪ್ರಜೆಯ ಹೃದಯದಲ್ಲಿ ನನ್ನ ಮನೆ ಇದೆ. ಅಲ್ಲಿಯೇ ನನ್ನ ವಾಸ. ಅಸ್ಸಾಂ, ಒಡಿಶಾ, ಉತ್ತರಪ್ರದೇಶ ಸೇರಿದಂತೆ ಎಲ್ಲ ರಾಜ್ಯಗಳಲ್ಲಿ ನಾನು ಲಕ್ಷಾಂತರ ಮನೆಗಳನ್ನು ಹೊಂದಿದ್ದೇನೆ’ ಎಂದು ಬಹಿರಂಗ ಸಭೆಯಲ್ಲಿ ಜಮಾಯಿಸಿದ್ದ ಭಾರಿ ಜನಸ್ತೋಮದ ಕರತಾಡನದ ನಡುವೆ ರಾಹುಲ್‌ ಹೇಳಿದರು.

ರೋಡ್‌ ಶೋ: ಬರ್ಪೇಟಾ ತಲುಪುವುದಕ್ಕೂ ಮುನ್ನ, ಮಂಗಳವಾರ ರಾತ್ರಿ ವಿಷ್ಣುಪುರದಲ್ಲಿ ರಾಹುಲ್‌ ಗಾಂಧಿ ಅವರು ವಾಸ್ತವ್ಯ ಹೂಡಿದ್ದರು. ನಂತರ ಬೊಂಗೈಗಾಂವ್‌ ಮೂಲಕ ಯಾತ್ರೆ ಸಾಗಿತು.

ಬರ್ಪೇಟಾದಲ್ಲಿ ರೋಡ್‌ ಶೋ ಬಳಿಕ, ಬಸ್‌ ನಿಲ್ದಾಣದ ಬಳಿ ಸಾರ್ವಜನಿಕ ಸಭೆ ನಡೆಸಿದರು. ಯಾತ್ರೆ ಅಂಗವಾಗಿ ತಾವು ಬಳಸುತ್ತಿರುವ ವಾಹನದ ಚಾವಣಿಯಿಂದಲೇ ಅವರು ಜನರನ್ನು ಉದ್ದೇಶಿಸಿ ಮಾತನಾಡಿದರು.

ಇದಕ್ಕೂ ಮುನ್ನ ಅವರು ದಾರಿಯುದ್ದಕ್ಕೂ, ಜನರು ಹಾಗೂ ಮಕ್ಕಳೊಂದಿಗೆ ಸಂವಾದ ನಡೆಸಿದರು. ಅಸ್ಸಾಂನ ಸಾಂಪ್ರದಾಯಿಕ ಶಿರವಸ್ತ್ರಗಳನ್ನು (ಗಾಮೋಚಾ) ರಾಹುಲ್‌ ಗಾಂಧಿ ಅವರಿಗೆ ಜನರು ನೀಡಿ, ಸಂಭ್ರಮಿಸಿದರು.

ಭಾರತ ಜೋಡೊ ನ್ಯಾಯ ಯಾತ್ರೆಯು ಅಸ್ಸಾಂನ ಬೊಂಗೈಗಾಂವ್ ಜಿಲ್ಲೆಯಲ್ಲಿ ಬುಧವಾರ ಸಾಗಿದ ವೇಳೆ ಜನರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೈಕುಲುಕಲು ಹಾತೊರೆಯುತ್ತಿದ್ದರು  –ಪಿಟಿಐ ಚಿತ್ರ 
ಭಾರತ ಜೋಡೊ ನ್ಯಾಯ ಯಾತ್ರೆಯು ಅಸ್ಸಾಂನ ಬೊಂಗೈಗಾಂವ್ ಜಿಲ್ಲೆಯಲ್ಲಿ ಬುಧವಾರ ಸಾಗಿದ ವೇಳೆ ಜನರು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಕೈಕುಲುಕಲು ಹಾತೊರೆಯುತ್ತಿದ್ದರು  –ಪಿಟಿಐ ಚಿತ್ರ 
ಹಿಮಂತ ಬಿಸ್ವ ಶರ್ಮ ಅವರು ಅಮಿತ್ ಶಾ ನಿಯಂತ್ರಣದಲ್ಲಿದ್ದಾರೆ. ಶಾ ವಿರುದ್ಧ ಮಾತನಾಡುವವರನ್ನು ಎರಡು ನಿಮಿಷದೊಳಗೆ ಶರ್ಮ ಹೊರಹಾಕುತ್ತಾರೆ.
-ರಾಹುಲ್‌ ಗಾಂಧಿ, ಕಾಂಗ್ರೆಸ್‌ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT