ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಗೋಸಾಗಾಟದ ಅನುಮಾನ: ರಾಜಸ್ಥಾನದಲ್ಲಿ ವ್ಯಕ್ತಿಯ ಹತ್ಯೆ

Last Updated 21 ಜುಲೈ 2018, 20:16 IST
ಅಕ್ಷರ ಗಾತ್ರ

ಅಲ್ವಾರ್ (ರಾಜಸ್ಥಾನ): ಹಸು ಕಳ್ಳ ಎಂಬ ಶಂಕೆಯ ಮೇಲೆ ರಾಜಸ್ಥಾನದ ಅಲ್ವರ್‌ನಲ್ಲಿ ಶುಕ್ರವಾರ ರಾತ್ರಿ ಅಕ್ಬರ್ ಖಾನ್ (25) ಎಂಬುವವರನ್ನು ಗೋರಕ್ಷಕರು ಹೊಡೆದು ಕೊಂದಿದ್ದಾರೆ.

ಆದರೆ ಮೃತ ಅಕ್ಬರ್‌ ಹಸುವನ್ನು ಕದ್ದಿದ್ದರೇ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ದೊರೆತಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

‘ಗೋರಕ್ಷಣೆ ಹೆಸರಿನಲ್ಲಿ ಜನರನ್ನು ಕೊಲ್ಲುವುದು ಅಪರಾಧವೇ ಹೊರತು ಕಾನೂನು ಮತ್ತು ಸುವ್ಯಸ್ಥೆಯ ಸಮಸ್ಯೆ ಅಲ್ಲ. ರಾಜ್ಯ ಸರ್ಕಾರಗಳೇ ಇವಕ್ಕೆ ಕಡಿವಾಣ ಹಾಕಬೇಕು. ಯಾರೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು’ ಎಂದು ಸುಪ್ರೀಂ ಕೋರ್ಟ್ ನಾಲ್ಕು ದಿನಗಳ ಹಿಂದಷ್ಟೇ ಹೇಳಿತ್ತು. ಅದರ ಬೆನ್ನಲ್ಲೇ ಈ ಘಟನೆ ನಡೆದಿದೆ.

‘ಮೃತ ಅಕ್ಬರ್‌ ಖಾನ್‌ ಅವರು ಹರಿಯಾಣದ ಗಡಿ ಜಿಲ್ಲೆಯವರೆಂದು ಗುರುತಿಸಲಾಗಿದೆ. ಅಕ್ಬರ್‌ ತಮ್ಮ ಊರಿಗೆ ಎರಡು ಹಸುಗಳನ್ನು ತೆಗೆದುಕೊಂಡು ಹೋಗುತ್ತಿದ್ದರು. ಅಲ್ವರ್‌ನ ಲಾಲಾವಾಂಡಿ ಎಂಬಲ್ಲಿನ ಅರಣ್ಯ ಪ್ರದೇಶವನ್ನು ಹಾದುಹೋಗುವಾಗ ಅವರ ಮೇಲೆ ದಾಳಿ ನಡೆದಿದೆ. ದಾಳಿ ಬಗ್ಗೆ ಮಾಹಿತಿ ದೊರೆತು ಸ್ಥಳಕ್ಕೆ ತೆರಳಿದಾಗ ಗಾಯಾಳು ಅಕ್ಬರ್‌ ರಸ್ತೆಯಲ್ಲೇ ಬಿದ್ದಿದ್ದರು. ಎರಡು ಹಸುಗಳೂ ಅಲ್ಲೇ ಇದ್ದವು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ದಾಳಿ ನಡೆದಾಗ ಅಕ್ಬರ್‌ ಜತೆಯಲ್ಲಿ ಅವರ ಗೆಳೆಯರೊಬ್ಬರು ಇದ್ದರಂತೆ. ಆದರೆ ಅವರು ಅಲ್ಲಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಹಲ್ಲೆಕೋರರು ‘ಹಸು ಕಳ್ಳ–ಹಸು ಕಳ್ಳ’ ಎಂದು ಕೂಗುತ್ತಿದ್ದರು ಎಂದು ಅಕ್ಬರ್ ಮಾಹಿತಿ ನೀಡಿದ್ದಾರೆ. ಆದರೆ ಆಸ್ಪತ್ರೆ ತಲುಪುವ ವೇಳೆಗೆ ಅವರು ಮೃತಪಟ್ಟಿದ್ದರು. ಅವರ ಗೆಳೆಯನ ಬಗ್ಗೆ ಮಾಹಿತಿ ದೊರೆತಿಲ್ಲ’ ಎಂದು ಪೊಲೀಸರು ವಿವರಿಸಿದ್ದಾರೆ.

‘ದಾಳಿಗೆ ಸಂಬಂಧಿಸಿದಂತೆ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿ ನಡೆದ ಸ್ಥಳದ ಸಮೀಪದ ಹಳ್ಳಿಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರಲ್ಲಿ ಇಬ್ಬರು ಹಲ್ಲೆಯ ನಡೆಸಿದ ಗುಂಪಿನಲ್ಲಿ ಇದ್ದರು ಎಂಬುದು ದೃಢಪಟ್ಟಿದೆ. ಅವರಿಬ್ಬರನ್ನೂ ಬಂಧಿಸಲಾಗಿದೆ. ವಿಚಾರಣೆ ನಡೆಯುತ್ತಿದೆ. ಮತ್ತಷ್ಟು ಜನರನ್ನು ಶೀಘ್ರವೇ ಬಂಧಿಸಲಾಗುತ್ತದೆ’ ಎಂದು ಪೊಲೀಸರು ಹೇಳಿದ್ದಾರೆ.
**
ಭುಗಿಲೆದ್ದ ಆಕ್ರೋಶ
ಅಲ್ವರ್‌ ಗುಂಪುದಾಳಿ ಹತ್ಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅರ್ಜುನ್ ರಾಮ್ ಮೇಘ್ವಾಲ್ ನೀಡಿದ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ಗುಂಪುದಾಳಿ ಹತ್ಯೆಯನ್ನು ನಾನೂ ಖಂಡಿಸುತ್ತೇನೆ. ಆದರೆ ಇದು ಪ್ರತ್ಯೇಕ ಘಟನೆ ಅಲ್ಲ. ಇಂತಹ ಹತ್ಯೆಗಳ ಮೂಲ 1984ರ ಸಿಖ್ ನರಮೇಧದವರೆಗೂ ಹೋಗುತ್ತದೆ. ಅದು ದೇಶದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಗುಂಪುದಾಳಿ ಹತ್ಯೆ. ಇದೆಲ್ಲಾ ಏಕೆ ನಡೆಯುತ್ತಿದೆ? ಇದನ್ನು ನಿಲ್ಲಿಸುವವರು ಯಾರು?’ ಎಂದು ಅಲ್ವರ್‌ ಹತ್ಯೆಗೆಮೇಘ್ವಾಲ್ ಪ್ರತಿಕ್ರಿಯೆ ನೀಡಿದ್ದರು.

ಅವರ ಈ ಹೇಳಿಕೆಯನ್ನು ಟ್ವಿಟರ್‌ನಲ್ಲಿ ಹಲವು ಮಂದಿ ಖಂಡಿಸಿದ್ದಾರೆ. ‘ಭಾರತದಲ್ಲಿ ಗುಂಪು ದಾಳಿಯ ಇತಿಹಾಸ 1984ರ ಸಿಖ್ ನರಮೇಧದಿಂದ ಆರಂಭವಾಗುತ್ತದೆ’ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಲೋಕಸಭೆಯಲ್ಲಿ ಶುಕ್ರವಾರ ನೀಡಿದ್ದ ಹೇಳಿಕೆಗೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

‘ಸುಪ್ರೀಂ ಕೋರ್ಟ್‌ ಸಲಹೆ ನೀಡಿದ ವಾರದಲ್ಲೇ ಅಲ್ವರ್‌ನಲ್ಲಿ ಗುಂಪುದಾಳಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ತಮ್ಮ ರಾಜ್ಯದೊಳಗಿನ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ರಾಜಸ್ಥಾನ ಪೊಲೀಸರಿಗೆ ಏಕೆ ಸಾಧ್ಯವಾಗುತ್ತಿಲ್ಲ. ಸಮಾಜವನ್ನು ರಕ್ಷಿಸಲು ಗುಂಪುದಾಳಿಯ ವಿರುದ್ಧ ಕಾನೂನನ್ನು ರೂಪಿಸಲೇಬೇಕು’ ಎಂದು ದೀಪಾಲಿ ದ್ವಿವೇದಿ ಎಂಬುವವರು ಟ್ವೀಟ್‌ ಮಾಡಿದ್ದಾರೆ.
**
ಗೃಹಸಚಿವರು ಗುಂಪುದಾಳಿಗಳನ್ನು ಖಂಡಿಸಿದರೂ, ಅವಕ್ಕೂ 1984ರ ಸಿಖ್ ನರಮೇಧಕ್ಕೂ ಸಂಬಂಧ ಕಲ್ಪಿಸಿ ಮಾತನಾಡಿದರು. ಆದರೆ ಅದೇ ವೇಳೆ ರಾಜಸ್ಥಾನದಲ್ಲಿ ವ್ಯಕ್ತಿಯೊಬ್ಬನನ್ನು ಗುಂಪುದಾಳಿಯಲ್ಲಿ ಕೊಲ್ಲಲಾಗಿದೆ. ಸರ್ಕಾರಕ್ಕೆ ನಾಚಿಕೆಯಾಗಬೇಕು.
ಹಿಸಾಮುದ್ದೀನ್ ಖಾನ್
**

ಇಂತಹ ಗುಂಪುದಾಳಿ ಹತ್ಯೆಗಳನ್ನು ಹಸುಕಳವಿನೊಂದಿಗೆ ಏಕೆ ತಳಕು ಹಾಕಲಾಗುತ್ತದೆ? ಇವೆಲ್ಲಾ ಯೋಜಿತ ದಾಳಿಗಳೇ? ಗುಂಪುದಾಳಿ ನಡೆಸಿ, ಜನರನ್ನು ಕೊಲ್ಲಲಾಗುತ್ತದೆ ಮತ್ತು ತಕ್ಷಣವೇ ಹಸುಕಳವು ಎಂದು ಬೊಬ್ಬೆ ಹೊಡೆಯಲಾಗುತ್ತದೆ. ಇದರಲ್ಲೇನೋ ಸಂಚು ಇದೆ.
ಬಶ್ರೀತ್

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT