ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಎಂ. ಆಯ್ಕೆ: ಮೂರು ರಾಜ್ಯಗಳಿಗೆ ವೀಕ್ಷಕರ ನೇಮಿಸಿದ ಬಿಜೆಪಿ ಹೈಕಮಾಂಡ್

ರಾಜನಾಥ್‌, ಮುಂಡಾ, ಖಟ್ಟರ್‌ಗೆ ಹೊಣೆ
Published 8 ಡಿಸೆಂಬರ್ 2023, 16:25 IST
Last Updated 8 ಡಿಸೆಂಬರ್ 2023, 16:25 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢ ರಾಜ್ಯಗಳಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಬಿಜೆಪಿ ಹೈಕಮಾಂಡ್‌ ಶುಕ್ರವಾರ ಒಂಬತ್ತು ಮಂದಿಯನ್ನು ವೀಕ್ಷಕರನ್ನಾಗಿ ನೇಮಿಸಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್‌, ಬಿಜೆಪಿ ಉಪಾಧ್ಯಕ್ಷ ಸರೋಜ್‌ ಪಾಂಡೆ ಮತ್ತು ಪ್ರಧಾನ ಕಾರ್ಯದರ್ಶಿ ವಿನೋದ್‌ ತಾವ್ಡೆ ಅವರನ್ನು ರಾಜಸ್ಥಾನದ ವೀಕ್ಷಕರಾಗಿ ನೇಮಿಸಲಾಗಿದೆ. 

ಹರಿಯಾಣ ಮುಖ್ಯಮಂತ್ರಿ ಮನೋಹರಲಾಲ್‌ ಖಟ್ಟರ್, ಬಿಜೆಪಿ ಒಬಿಸಿ ಮೋರ್ಚಾ ಅಧ್ಯಕ್ಷ ಕೆ.ಲಕ್ಷ್ಮಣ್ ಮತ್ತು ಕಾರ್ಯದರ್ಶಿ ಆಶಾ ಲಾಕ್ರ ಅವರನ್ನು ಮಧ್ಯಪ್ರದೇಶದ ಜವಾಬ್ದಾರಿ ನಿಭಾಯಿಸಲಿದ್ದರೆ, ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಕೇಂದ್ರ ಸಚಿವ ಸರ್ವಾನಂದ ಸೋನೊವಾಲ್ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ದುಶ್ವಂತ್‌ ಕುಮಾರ್‌ ಗೌತಮ್‌ ಅವರಿಗೆ ಛತ್ತೀಸಗಢದ ಜವಾಬ್ದಾರಿ ನೀಡಲಾಗಿದೆ. 

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗುವವರು ನೂತನ ಮುಖ್ಯಮಂತ್ರಿಯಾಗಲಿದ್ದಾರೆ. ವೀಕ್ಷಕರು ಈ ಮೂರು ರಾಜ್ಯಗಳಲ್ಲಿ ಪ್ರತಿಯೊಬ್ಬ ಶಾಸಕರ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.

ರಾಜಸ್ಥಾನದಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ‘ಒತ್ತಡ ತಂತ್ರ’ವನ್ನು ಕಡೆಗಣಿಸಿ, ಸಿ.ಎಂ. ಸ್ಥಾನವನ್ನು ಹೊಸಬರಿಗೆ ನೀಡುವ ಮಾತು ಪಕ್ಷದೊಳಗೆ ಕೇಳಿಬರುತ್ತಿದೆ. 

ಮಧ್ಯಪ್ರದೇಶದಲ್ಲಿ ಶಿವರಾಜ್‌ ಸಿಂಗ್ ಚೌಹಾಣ್‌ ಅವರಿಗೆ ಮತ್ತೊಂದು ಅವಕಾಶ ನೀಡುವುದೇ ಅಥವಾ ಹೊಸಬರಿಗೆ ಮಣೆಹಾಕುವುದೇ ಎಂಬ ಕಾತರ ಹೆಚ್ಚಿದೆ. ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಒಬಿಸಿ ಮುಖಂಡ ಪ್ರಹ್ಲಾದ್‌ ಪಟೇಲ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ, ಮಧ್ಯಪ್ರದೇಶ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ.ಶರ್ಮಾ ಅವರೂ ಆಕಾಂಕ್ಷಿಗಳಾಗಿದ್ದಾರೆ. 

ಛತ್ತೀಸಗಢದಲ್ಲಿ ಒಬಿಸಿ ಅಥವಾ ಬುಡಕಟ್ಟು ಸಮುದಾಯಕ್ಕೆ ಸೇರಿದ ಮುಖಂಡರೊಬ್ಬರಿಗೆ ಮುಖ್ಯಮಂತ್ರಿ ಸ್ಥಾನ ನೀಡಲು ಹೈಕಮಾಂಡ್‌ ಚಿಂತನೆ ನಡೆಸಿದೆ ಎಂದು ಮೂಲಗಳು ಹೇಳಿವೆ. ಪರಿಶಿಷ್ಟ ಪಂಗಡಕ್ಕೆ ಸೇರಿದ ಗೋಮತಿ ಸಾಯ್, ಲತಾ ಉಸೆಂಡೀ ಮತ್ತು ರೇಣುಕಾ ಸಿಂಗ್‌ ಅಲ್ಲದೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಅರುಣ್‌ ಸಾವ್ ಹಾಗೂ ಒ.ಪಿ.ಚೌಧರಿ ಅವರ ಹೆಸರು ಮುಂಚೂಣಿಯಲ್ಲಿದೆ. 

ಮಹಿಳೆಯರ ನೇತೃತ್ವದ ಅಭಿವೃದ್ಧಿಯ ಅಗತ್ಯತೆ ಮತ್ತು ಬಿಜೆಪಿಗೆ ಮಹಿಳಾ ಮತದಾರರ ಬೆಂಬಲದ ಬಗ್ಗೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಗಿಂದಾಗ್ಗೆ ಮಾತನಾಡುವ ಕಾರಣ, ಈ ಮೂರು ರಾಜ್ಯಗಳಲ್ಲಿ ಕನಿಷ್ಠ ಒಂದು ಕಡೆ ಮಹಿಳಾ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT