ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂಟ್ಯೂಬ್‌ನಲ್ಲಿ ಆರೋಪ ಮಾಡುವವರನ್ನೆಲ್ಲ ಜೈಲಿಗೆ ಹಾಕಲು ಸಾಧ್ಯವಿಲ್ಲ: ಕೋರ್ಟ್

Published 8 ಏಪ್ರಿಲ್ 2024, 11:36 IST
Last Updated 8 ಏಪ್ರಿಲ್ 2024, 14:07 IST
ಅಕ್ಷರ ಗಾತ್ರ

ನವದೆಹಲಿ: ಸಾಮಾಜಿಕ ಜಾಲತಾಣಗಳ ಮೂಲಕ ಆರೋಪ ಮಾಡುವವರನ್ನೆಲ್ಲ ಜೈಲಿಗೆ ಕಳುಹಿಸಲು ಆಗದು ಎಂದು ಹೇಳಿರುವ ಸುಪ್ರೀಂ ಕೋರ್ಟ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಬಗ್ಗೆ 2021ರಲ್ಲಿ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಎದುರಿಸುತ್ತಿರುವ ಯೂಟ್ಯೂಬರ್ ಒಬ್ಬರಿಗೆ ನೀಡಿದ್ದ ಜಾಮೀನನ್ನು ಮರುಸ್ಥಾಪಿಸಿದೆ.

‘ಯೂಟ್ಯೂಬ್ ಮೂಲಕ ಆರೋಪ ಮಾಡಿದವರನ್ನೆಲ್ಲ ಚುನಾವಣೆಗೂ ಮೊದಲು ನಾವು ಜೈಲಿಗೆ ಕಳುಹಿಸಲು ಆರಂಭಿಸಿದರೆ, ಎಷ್ಟು ಜನ ಜೈಲು ಪಾಲಾಗುತ್ತಾರೆ ಎಂಬುದನ್ನು ಕಲ್ಪಿಸಿಕೊಳ್ಳಿ’ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್. ಓಕ ಮತ್ತು ಉಜ್ವಲ್ ಭುಇಯಾಂ ಅವರು ಇದ್ದ ವಿಭಾಗೀಯ ಪೀಠವು ತಮಿಳುನಾಡು ಸರ್ಕಾರದ ಪರ ವಕೀಲ ಮುಕುಲ್ ರೋಹಟಗಿ ಅವರನ್ನು ಉದ್ದೇಶಿಸಿ ಹೇಳಿತು.

ಯೂಟ್ಯೂಬರ್ ದೊರೈಮುರುಗನ್ ಸಟ್ಟೈ ಅವರ ಜಾಮೀನು ರದ್ದುಮಾಡಿದ್ದ ಆದೇಶವನ್ನು ಪೀಠವು ಅಸಿಂಧುಗೊಳಿಸಿದೆ. ತಮ್ಮ ಅನಿಸಿಕೆಗಳನ್ನು ಹೇಳಿಕೊಂಡ ದೊರೈಮುರುಗನ್ ಅವರು ತಮ್ಮ ಸ್ವಾತಂತ್ರ್ಯವನ್ನು ದುರುಪಯೋಗ ಮಾಡಿಕೊಂಡಿಲ್ಲ ಎಂದು ಪೀಠ ಹೇಳಿದೆ. ಜಾಮೀನಿನ ಮೇಲೆ ಹೊರಗಿದ್ದ ಸಂದರ್ಭದಲ್ಲಿ ಅವಹೇಳನಕಾರಿಯಾಗಿ ಮಾತನಾಡಬಾರದು ಎಂದು ದೊರೈಮುರುಗನ್ ಅವರಿಗೆ ಷರತ್ತು ವಿಧಿಸಬೇಕು ಎಂದು ಸರ್ಕಾರ ಮಾಡಿಕೊಂಡಿದ್ದ ಮನವಿಯನ್ನು ಪೀಠವು ತಿರಸ್ಕರಿಸಿದೆ.

ನ್ಯಾಯಾಲಯಕ್ಕೆ ನೀಡಿದ್ದ ಮಾತನ್ನು ಉಲ್ಲಂಘಿಸಿ ದೊರೈಮುರುಗನ್ ಅವರು ಸ್ಟಾಲಿನ್ ಅವರನ್ನು ಉದ್ದೇಶಿಸಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಅವರಿಗೆ ನೀಡಿದ್ದ ಜಾಮೀನನ್ನು ಮದ್ರಾಸ್ ಹೈಕೋರ್ಟ್ ರದ್ದುಪಡಿಸಿತ್ತು. ಇದನ್ನು ಪ್ರಶ್ನಿಸಿ ದೊರೈಮುರುಗನ್ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಪ್ರಕರಣವೊಂದರಲ್ಲಿ ಜಾಮೀನು ಕೋರುವ ಸಂದರ್ಭದಲ್ಲಿ ದೊರೈಮುರುಗನ್ ಅವರು ತಾವು ಯಾರ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡುವುದಿಲ್ಲ ಎಂದು ಕೋರ್ಟ್‌ಗೆ ಮಾತುಕೊಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT