ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರದಲ್ಲಿ ಪಕ್ಷಾಂತರ ಪರ್ವದ ಸೂಚನೆ

ಶಿವಸೇನಾದ (ಯುಬಿಟಿ) ಕೆಲವು ಸಂಸದರು ಸಂಪರ್ಕದಲ್ಲಿದ್ದಾರೆ ಎಂದ ಶಿಂದೆ ಬಣ
Published 8 ಜೂನ್ 2024, 16:30 IST
Last Updated 8 ಜೂನ್ 2024, 16:30 IST
ಅಕ್ಷರ ಗಾತ್ರ

ಮುಂಬೈ: ನವದೆಹಲಿಯಲ್ಲಿ ನರೇಂದ್ರ ಮೋದಿ ಅವರು ಸರ್ಕಾರ ರಚನೆಯ ಪ್ರಕ್ರಿಯೆಯಲ್ಲಿ ತೊಡಗಿರುವ ಸಂದರ್ಭದಲ್ಲೇ ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಮ್ಮೆ ಪಕ್ಷಾಂತರ ಪರ್ವ ಆರಂಭವಾಗುವ ಸೂಚನೆಗಳು ಗೋಚರಿಸುತ್ತಿವೆ. ಶಿವಸೇನಾದ (ಯುಬಿಟಿ) ಕೆಲವು ಸಂಸದರು ತಮ್ಮ ಸಂಪರ್ಕದಲ್ಲಿದ್ದು, ಪಕ್ಷಾಂತರಕ್ಕೆ ಸಿದ್ಧರಾಗಿದ್ದಾರೆ ಎಂದು ಶಿವಸೇನಾ (ಶಿಂದೆ ಬಣ) ಪ್ರತಿಪಾದಿಸಿದೆ.

ಇನ್ನೊಂದೆಡೆ, ಶಿವಸೇನಾ (ಯುಬಿಟಿ) ಈ ಸುದ್ದಿಯನ್ನು ನಿರಾಕರಿಸಿದ್ದು, ಶಿಂದೆ ಬಣವು ಮೊದಲು ತಮ್ಮ ಸಂಸದರನ್ನು ಹಿಡಿದಿಟ್ಟುಕೊಳ್ಳಲಿ ಎಂದಿದೆ.

‘ಇಬ್ಬರು ಸಂಸದರು ನಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ. ಅವರು ಶಿಂದೆ ಸಾಹೇಬರೊಂದಿಗೂ ಮಾತನಾಡಿದ್ದಾರೆ. ಆರು ಸಂಸದರು ಒಟ್ಟಾದ ತಕ್ಷಣವೇ ಅವರು ಮೋದಿ ಸರ್ಕಾರವನ್ನು ಬೆಂಬಲಿಸಲಿದ್ದಾರೆ’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಆಪ್ತರು ಮತ್ತು ಪಕ್ಷದ ವಕ್ತಾರರಾದ ಔರಂಗಾಬಾದ್ ಪಶ್ಚಿಮ ಕ್ಷೇತ್ರದ ಶಾಸಕ ಸಂಜಯ್ ಶಿರ್ಸಾತ್ ಮತ್ತು ಹೊಸದಾಗಿ ಆಯ್ಕೆಯಾಗಿರುವ ಸಂಸದ ನರೇಶ್ ಮಸ್ಕೆ ಹೇಳಿದ್ದಾರೆ.  

ಇದಕ್ಕೆ ಪ್ರತಿಕ್ರಿಯಿಸಿರುವ ಶಿವಸೇನಾ (ಯುಬಿಟಿ) ಉಪನಾಯಕಿ ಸುಷ್ಮಾ ಅಂಧಾರೆ, ಮಸ್ಕೆ ಮಾತಿಗೆ ತಾವು ಯಾವ ಬೆಲೆಯನ್ನೂ ನೀಡುವುದಿಲ್ಲ ಎಂದು ಹೇಳಿದ್ದಾರೆ. 

ಶಿಂದೆ ಬಣದ ಕೆಲವು ಸಂಸದರು ತಮ್ಮ ಪಕ್ಷಕ್ಕೆ ಸೇರ್ಪಡೆಯಾಗಲು ಸಿದ್ದರಿದ್ದು, ಸೂಕ್ತ ಅವಕಾಶಕ್ಕಾಗಿ ಕಾಯುತ್ತಿದ್ದೇವೆ ಎಂದು ಠಾಕ್ರೆ ಬಣ ಹಿಂದೆ ಹೇಳಿತ್ತು.

ಸಂಸದೀಯ ಪಕ್ಷದ ನಾಯಕರಾಗಿ ಶ್ರೀಕಾಂತ್ ಶಿಂದೆ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರ ಪುತ್ರ ಡಾ.ಶ್ರೀಕಾಂತ್ ಶಿಂದೆ ಅವರು ಶಿವಸೇನಾದ ಸಂಸದೀಯ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಮೂಳೆತಜ್ಞರಾಗಿದ್ದ ಶ್ರೀಕಾಂತ ಶಿಂದೆ ನಂತರ ತಂದೆಯ ಹಾದಿಯಲ್ಲಿಯೇ ರಾಜಕಾರಣಕ್ಕಿಳಿದಿದ್ದರು. ಅವರು ಮೂರನೇ ಬಾರಿಗೆ ಕಲ್ಯಾಣ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ 15 ಸ್ಥಾನಗಳಲ್ಲಿ ಸ್ಪರ್ಧಿಸಿದ್ದ ಏಕನಾಥ ಶಿಂದೆ ಬಣದ ಶಿವಸೇನಾದಿಂದ 7 ಮಂದಿ ಸಂಸದರು ಆಯ್ಕೆಯಾಗಿದ್ದಾರೆ. ಈ ಏಳು ಸಂಸದರು ಮತ್ತು ರಾಜ್ಯಸಭಾ ಸದಸ್ಯ ಮಿಲಿಂದ್ ದೇವ್ರಾ ನವದೆಹಲಿಯಲ್ಲಿ ಸಭೆ ಸೇರಿ ಶ್ರೀಕಾಂತ್ ಶಿಂದೆ ಅವರನ್ನು ಸಂಸದೀಯ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಿದರು.

ಮರಾಠಾ ಮೀಸಲು: ಮತ್ತೆ ಸತ್ಯಾಗ್ರಹ ಆರಂಭಿಸಿದ ಜರಾಂಗೆ

ಮುಂಬೈ: ಮರಾಠಾ ಮೀಸಲಾತಿಗಾಗಿ ಹೋರಾಟ ನಡೆಸುತ್ತಿರುವ ಮನೋಜ್‌ ಜರಾಂಗೆ ಅವರು, ಬೇಡಿಕೆ ಈಡೇರಿಗಾಗಿ ಸರ್ಕಾರದ ಮೇಲೆ ಒತ್ತಡವನ್ನು ಹೇರಲು ಶನಿವಾರ ಮತ್ತೊಂದು ಸುತ್ತಿನ ಉಪವಾಸ ಸತ್ಯಾಗ್ರಹ ಆರಂಭಿಸಿದರು.

ಇದೇ ವರ್ಷದ ಅಕ್ಟೋಬರ್‌  ತಿಂಗಳಲ್ಲಿ ಮಹಾರಾಷ್ಟ್ರ ವಿಧಾನಸಭೆಗೆ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು ಎಂದೂ ಜರಾಂಗೆ ಅವರು ಎಚ್ಚರಿಸಿದ್ದಾರೆ.

ರಾಜ್ಯದಲ್ಲಿ ಲೋಕಸಭೆ ಚುನಾವಣೆಯಲ್ಲಿ ನೀರಸ ಸಾಧನೆ ತೋರಿರುವ ಏಕನಾಥ ಶಿಂದೆ ನೇತೃತ್ವದ ಬಿಜೆಪಿ, ಶಿವಸೇನೆ ಮತ್ತು ಎನ್‌ಸಿಪಿ ಮೈತ್ರಿ ಸರ್ಕಾರ ಈ ಬೆಳವಣಿಗೆಯು ಹೊಸ ಸವಾಲಾಗಿ ಎದುರಾಗಿದೆ. 

ಈಚೆಗೆ ಮುಕ್ತಾಯವಾದ ಚುನಾವಣೆಯಲ್ಲಿ ಮರಾಠಾ ಮೀಸಲು ಹಾಗೂ ಒಬಿಸಿ ವರ್ಗದವ ವಿರೋಧ ಪರಿಣಾಮ ಬೀರಿದೆ ಎಂದು ವ್ಯಾಖ್ಯಾನಿಸಲಾಗಿದೆ. ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಮಹತ್ವ ಪಡೆದಿದೆ.

ಸುದ್ದಿಗಾರರ ಜೊತೆಗೆ ಮಾತನಾಡಿದ ಶಿವ್ಬಾ ಸಂಘಟನೆಯ ಸ್ಥಾಪಕರೂ ಆದ ಜರಾಂಗೆ ಅವರು, ‘ಮರಾಠಾ ಮೀಸಲಾತಿ ಕುರಿತು ಹೊರಡಿಸಿರುವ ಅಧಿಸೂಚನೆಯನ್ನು ಜಾರಿಗೊಳಿಸಬೇಕು. ನಮ್ಮ ಮೀಸಲಾತಿಗೆ ಸ್ಪಂದನೆ ಸಿಗದಿದ್ದರೆ 288 ಕ್ಷೇತ್ರಗಳಲ್ಲಿಯೂ ಅಭ್ಯರ್ಥಿ ಕಣಕ್ಕಿಳಿಸಲಿದ್ದೇವೆ’ ಎಂದು ತಿಳಿಸಿದರು.

ಮರಾಠಾರಿಗೆ ಶೇ 10ರಷ್ಟು ಮೀಸಲಾತಿ ಕಲ್ಪಿಸಲು ಅವಕಾಶ ಕಲ್ಪಿಸುವ ‘ಮಹಾರಾಷ್ಟ್ರ ರಾಜ್ಯದ ಆರ್ಥಿಕ ಮತ್ತು ಸಾಮಾಜಿಕವಾಗಿ ಹಿಂದುಳಿದವವ ಮೀಸಲಾತಿ ಮಸೂದೆ 2024’ಕ್ಕೆ ಫೆಬ್ರುವರಿಯಲ್ಲಿ ವಿಧಾನಸಭೆ ಅನುಮೋದಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT