ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ | ಹದಿಹರೆಯದ ಗರ್ಭಿಣಿಯರ ಸಂಖ್ಯೆ ತೀವ್ರ ಇಳಿಕೆ: CM ಹಿಮಂತ ಬಿಸ್ವಾ ಶರ್ಮಾ

Published 19 ಡಿಸೆಂಬರ್ 2023, 13:59 IST
Last Updated 19 ಡಿಸೆಂಬರ್ 2023, 13:59 IST
ಅಕ್ಷರ ಗಾತ್ರ

ಗುವಾಹಟಿ: ಬಾಲ್ಯ ವಿವಾಹದ ವಿರುದ್ಧ ರಾಜ್ಯ ಸರ್ಕಾರ ತೆಗೆದುಕೊಂಡ ಕಠಿಣ ಕ್ರಮದ ಪರಿಣಾಮ ಅಸ್ಸಾಂನಲ್ಲಿ ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ತೀವ್ರವಾಗಿ ಇಳಿಮುಖವಾಗಿವೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

‘ಬಾಲ್ಯವಿವಾಹ ಮತ್ತು ಹದಿಹರೆಯದ ಗರ್ಭಧಾರಣೆ ವಿರುದ್ಧ ನಮ್ಮ ನಿರಂತರ ಹೋರಾಟ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತಿದೆ. ಇದರಿಂದ ಹಿಂದಿನ ವರ್ಷ 1,05,942 ಪ್ರಕರಣಗಳಿಂದ ಈ ವರ್ಷ 40,012ಕ್ಕೆ ಇಳಿಕೆಯಾಗಿದೆ' ಎಂದು ಮುಖ್ಯಮಂತ್ರಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಶೂನ್ಯಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ:

'2022-23ರಲ್ಲಿ ರಾಜ್ಯದಲ್ಲಿ ನೋಂದಾಯಿತ ಹದಿಹರೆಯದ ಗರ್ಭಿಣಿಯರ ಸಂಖ್ಯೆ 1,05,942 ಇತ್ತು. 2023-24ರಲ್ಲಿ 40,012ಕ್ಕೆ ಇಳಿದಿದೆ. ಈ ಅಂಕಿ ಅಂಶವನ್ನು ಶೂನ್ಯಕ್ಕೆ ತರುವವರೆಗೆ ನಾವು ವಿಶ್ರಮಿಸುವುದಿಲ್ಲ' ಎಂದು ಸಿಎಂ ಹೇಳಿದರು.

ಮುಖ್ಯಮಂತ್ರಿ ನೀಡಿದ ಮಾಹಿತಿಯ ಪ್ರಕಾರ, 'ಧುಬ್ರಿ ಮತ್ತು ದಕ್ಷಿಣ ಸಲ್ಮಾರಾ ಅವಳಿ ಜಿಲ್ಲೆಗಳಲ್ಲಿ ಹಿಂದಿನ ವರ್ಷ 14,769 ಹದಿಹರೆಯದ ಗರ್ಭಧಾರಣೆ ಪ್ರಕರಣಗಳು ವರದಿಯಾಗಿದ್ದವು. ಈ ವರ್ಷ 5,482ಕ್ಕೆ ಇಳಿದಿದೆ. ನಾಗಾನ್ ಮತ್ತು ಹೊಜೈ ಜಿಲ್ಲೆಗಳಲ್ಲಿ 12,107 ರಿಂದ 4,578 ಕ್ಕೆ ಇಳಿದಿವೆ. ಇತ್ತ ಬರ್ಪೇಟಾ ಮತ್ತು ಬಜಾಲಿ ಜಿಲ್ಲೆಗಳಲ್ಲಿ 11,449 ರಿಂದ 4,000ಕ್ಕೆ ಇಳಿಕೆ'ಯಾಗಿದೆ.

ರಾಜ್ಯ ಸರ್ಕಾರ ಈ ವರ್ಷದ ಫೆಬ್ರುವರಿ ಮತ್ತು ಅಕ್ಟೋಬರ್‌ನಲ್ಲಿ ಬಾಲ್ಯವಿವಾಹದ ವಿರುದ್ಧ ಎರಡು ಹಂತಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿತ್ತು. ಈ ವೇಳೆ ಅಲ್ಪಸಂಖ್ಯಾತರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಸುಮಾರು 5,500 ಜನರನ್ನು ಬಂಧಿಸಲಾಗಿತ್ತು.

‘2026ರ ವೇಳೆಗೆ ಈ ಸಾಮಾಜಿಕ ಪಿಡುಗನ್ನು ಸಂಪೂರ್ಣವಾಗಿ ತೊಡೆದುಹಾಕಲಾಗುವುದು. ಎಲ್ಲಾ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳನ್ನು ಬಾಲ್ಯ ವಿವಾಹ ತಡೆ ಅಧಿಕಾರಿಗಳನ್ನಾಗಿ ನೇಮಿಸಲಾಗುವುದು' ಎಂದು ಮುಖ್ಯಮಂತ್ರಿ ಶರ್ಮಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT