ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಖಂಡ: ಮತ್ತೆ ಭೂಕುಸಿತ; ಕಾರ್ಮಿಕರ ರಕ್ಷಣೆಗೆ ಅಡ್ಡಿ

ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ: ಕಾರ್ಯಾಚರಣೆ ನಿರತ ಇಬ್ಬರು ಕಾರ್ಮಿಕರಿಗೆ ಗಾಯ
Published 15 ನವೆಂಬರ್ 2023, 11:31 IST
Last Updated 15 ನವೆಂಬರ್ 2023, 11:31 IST
ಅಕ್ಷರ ಗಾತ್ರ

ಉತ್ತರಕಾಶಿ (ಉತ್ತರಾಖಂಡ): ಉತ್ತರಾಖಂಡ ರಾಜ್ಯದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದಲ್ಲಿ ಮತ್ತೆ ಭೂಕುಸಿತ ಸಂಭವಿಸಿದ್ದು, ಅದರೊಳಗೆ ಸಿಲುಕಿರುವ 40 ಕಾರ್ಮಿಕರ ಸುರಕ್ಷಿತ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಗಿದೆ.

ಅಲ್ಲದೇ, ರಂಧ್ರ ಕೊರೆಯುವ ಯಂತ್ರದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಕಾರ್ಯಾಚರಣೆ ಮತ್ತಷ್ಟು ವಿಳಂಬವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆ. ಅವರಿಗೆ ಆಮ್ಲಜನಕ, ಔಷಧ, ಆಹಾರ, ಕುಡಿಯುವ ನೀರು ಸೇರಿದಂತೆ ವಿದ್ಯುತ್ ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಿರ್ಮಾಣ ಹಂತದ ವೇಳೆ ಕುಸಿದಿರುವ ಸುರಂಗದೊಳಗೆ ಕಾರ್ಮಿಕರು ಸಿಲುಕಿ ಮೂರು ದಿನಗಳು ಕಳೆದಿವೆ. ಸುರಂಗ ಕುಸಿದ ತಕ್ಷಣವೇ ಸರ್ಕಾರ ರಕ್ಷಣಾ ಕಾರ್ಯಾಚರಣೆ ಆರಂಭಿಸಿತ್ತು. ಮಂಗಳವಾರ ರಾತ್ರಿ ಉಕ್ಕಿನ ಕೊಳವೆಗಳನ್ನು ಅವಶೇಷದ ಅಡಿಯ ಮೂಲಕ ಸೇರಿಸಿ ಕಾರ್ಮಿಕರು ಹೊರಬರಲು ಅನುವಾಗುವಂತೆ ಸುರಕ್ಷಿತ ಮಾರ್ಗ ರೂಪಿಸುವ ಕೆಲಸ ಕೈಗೊಳ್ಳಲಾಗಿತ್ತು.

ಈ ವೇಳೆ ಭೂಕುಸಿತ ಸಂಭವಿಸಿದ್ದು, ಕಾರ್ಯಾಚರಣೆಯಲ್ಲಿ ತೊಡಗಿದ್ದ ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ನವದೆಹಲಿಯಿಂದ ಯಂತ್ರ:

ರಂಧ್ರ ಕೊರೆಯುವ ಹೊಸ ಯಂತ್ರವನ್ನು ನವದೆಹಲಿಯಿಂದ ವಿಮಾನದ ಮೂಲಕ ತರಲಾಗುತ್ತಿದೆ. ಸ್ಥಳದಲ್ಲಿಯೇ ಪೊಲೀಸ್‌ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಅಲ್ಲದೇ, ಕಾರ್ಯಾಚರಣೆಗೆ ಅಗತ್ಯವಿರುವ ಮತ್ತಷ್ಟು ಉಪಕರಣಗಳನ್ನು ತರಿಸಲಾಗುತ್ತಿದೆ ಎಂದು ರಾಜ್ಯ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

‘ರಂಧ್ರ ಕೊರೆಯುವ ದೊಡ್ಡ ಉಪಕರಣವನ್ನು ನವದೆಹಲಿಯಿಂದ ರವಾನಿಸುವುದಕ್ಕೆ ಸಂಬಂಧಿಸಿದಂತೆ ಭಾರತೀಯ ವಾಯುಪಡೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಾಗಿದೆ’ ಎಂದು ಉತ್ತರಾಖಂಡದ ಡಿಜಿಪಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT