ಸರ್ಕಾರಿ ಒಡೆತನದ ವಿದ್ಯುತ್ ಜಾಲ ನಿಗಮವು (ಪಿಜಿಸಿಎಲ್), ಉತ್ತರ ಮತ್ತು ದಕ್ಷಿಣ ಗ್ರಿಡ್ಗೆ ಸಂಪರ್ಕ ಕಲ್ಪಿಸಿದೆ. ರಾಯಚೂರು ಸೋಲಾಪುರ 765 ಕೆವಿ ಮಾರ್ಗವು ಈಗ ರಾಷ್ಟ್ರೀಯ ವಿದ್ಯುತ್ ಪೂರೈಕೆ ಜಾಲಕ್ಕೆ ಸೇರ್ಪಡೆಯಾಗಿದೆ. ಏಕರೂಪದ ವಿದ್ಯುತ್ ಜಾಲ ನಿರ್ಮಾಣಕ್ಕೆ ರೂ 815 ಕೋಟಿ ವೆಚ್ಚವಾಗಿದೆ.
ಈ ಮೂಲಕ ಒಂದು ದೇಶ - ಒಂದು ವಿದ್ಯುತ್ ಜಾಲ ಮತ್ತು ಒಂದು ವ್ಯವಸ್ಥೆ ಜಾರಿಗೆ ಬಂದಂತೆ ಆಗಿದೆ. ಇದರಿಂದ ಹೆಚ್ಚುವರಿ ವಿದ್ಯುತ್ ಉತ್ಪಾದಿಸುವ ರಾಜ್ಯಗಳಿಂದ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯಗಳು ಅದರಲ್ಲೂ ದಕ್ಷಿಣದ ರಾಜ್ಯಗಳಿಗೆ ಸುಲಭವಾಗಿ ವಿದ್ಯುತ್ ಸರಬರಾಜು ಮಾಡಲು ಸಾಧ್ಯವಾಗಲಿದೆ.
ದಕ್ಷಿಣದ ವಿದ್ಯುತ್ ಪೂರೈಕೆ ಜಾಲವನ್ನು ರಾಷ್ಟ್ರೀಯ ವಿದ್ಯುತ್ ಜಾಲದ ಜೊತೆ ಸೇರ್ಪಡೆ ಮಾಡುವುದರಿಂದ ದಕ್ಷಿಣದ ರಾಜ್ಯಗಳ ಪ್ರಾದೇಶಿಕ ವಿದ್ಯುತ್ ಸಾಗಣೆ ಸಾಮರ್ಥ್ಯ ಹೆಚ್ಚಳಗೊಳ್ಳುವುದರ ಜತೆಗೆ, ಕೆಲ ಮಾರ್ಗಗಳಲ್ಲಿನ ದಟ್ಟಣೆಯೂ ತಗ್ಗಲಿದೆ.
ಪ್ರಯೋಜನಗಳು: ಕೈಗಾರಿಕಾ ಚಟುವಟಿಕೆಗಳಿಗೂ ಅಗತ್ಯವಾದ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗಿ ಆರ್ಥಿಕ ಬೆಳವಣಿಗೆಗೆ ನೆರವಾಗಲಿದೆ.
ಇದುವರೆಗೆ ತೀವ್ರ ವಿದ್ಯುತ್ ಕೊರತೆ ಕಾರಣಕ್ಕೆ ದಕ್ಷಿಣದ ರಾಜ್ಯಗಳು ವಿದ್ಯುತ್ ಖರೀದಿ ಸಮಸ್ಯೆ ಎದುರಿಸುತ್ತಿದ್ದವು. ಹೆಚ್ಚುವರಿ ಉತ್ಪಾದನೆ ಮಾಡುತ್ತಿದ್ದ ರಾಜ್ಯಗಳು ಪ್ರತ್ಯೇಕ ವಿದ್ಯುತ್ ಸಾಗಾಣಿಕೆ ವ್ಯವಸ್ಥೆ ಹೊಂದಿದ್ದರಿಂದ ಈ ರಾಜ್ಯಗಳು ನೇರವಾಗಿ ವಿದ್ಯುತ್ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಹೆಚ್ಚುವರಿ ವಿದ್ಯುತ್ ಉತ್ಪಾದಿಸುತ್ತಿದ್ದ ರಾಜ್ಯಗಳೂ ವಿದ್ಯುತ್ ಮಾರಾಟ ಮಾಡಲು ಹಲವು ಅಡೆತಡೆ ಎದುರಿಸುತ್ತಿದ್ದವು. ಇನ್ನುಮುಂದೆ ಒಂದೇ ಸಾಗಾಣಿಕೆ ಮಾರ್ಗದಲ್ಲಿ ವಿದ್ಯುತ್ ಪೂರೈಕೆ ಮಾಡುವುದರಿಂದ ಸೋರಿಕೆ ತಡೆಗಟ್ಟಲು ಮತ್ತು ಪೂರೈಕೆಯಲ್ಲಿ ಇದಕ್ಕೂ ಮೊದಲು ಎದುರಾಗುತ್ತಿದ್ದ ದೋಷ ಪರಿಹರಿಸಲು ಸಾಧ್ಯವಾಗಲಿದೆ.
ವಿದ್ಯುತ್ ಅಗ್ಗ?: ಸದ್ಯ ಬೇರೆ, ಬೇರೆ ರಾಜ್ಯಗಳಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ ಭಿನ್ನವಾಗಿದೆ. ಕೆಲ ರಾಜ್ಯಗಳಲ್ಲಿ ಪ್ರತಿ ಯೂನಿಟ್ಗೆ ರೂ 5 ಇದ್ದರೆ, ಇತರ ಕೆಲ ರಾಜ್ಯಗಳಲ್ಲಿ ಇದು ರೂ 15ರಿಂದ ರೂ 20ರವರೆಗೆ ಇದೆ. ಈ ವ್ಯತ್ಯಾಸ ಇನ್ನು ಮುಂದೆ ಕಡಿಮೆಯಾಗಲಿದೆ. ದೇಶದಲ್ಲಿ ಉತ್ಪಾದನೆಯಾಗುವ ಒಟ್ಟು ವಿದ್ಯುತ್, ಈಗ ಒಂದೇ ಪೂರೈಕೆ ಜಾಲಕ್ಕೆ ಸೇರ್ಪಡೆಯಾಗುವುದರಿಂದ ದೇಶದ ಒಟ್ಟು ವಿದ್ಯುತ್ ಉತ್ಪಾದನಾ ಸಾಮರ್ಥ್ಯವು 2,32,000 ಮೆ.ವಾ. ತಲುಪಲಿದೆ.
ರಾಜ್ಯಗಳಿಗೆ ಹೆಚ್ಚು ಲಾಭ: ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ಹೆಚ್ಚು ಪ್ರಯೋಜನ ಪಡೆಯಲಿವೆ. ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ದಕ್ಷಿಣದ ರಾಜ್ಯಗಳಲ್ಲಿ ವಿದ್ಯುತ್ ಸಾಗಣೆ ವ್ಯವಸ್ಥೆ ಚೆನ್ನಾಗಿದೆ. ಈ ಕಾರಣಕ್ಕೆ ವಿದ್ಯುತ್ ಜಾಲ ನಿಗಮವು ದೇಶದಲ್ಲಿನ ಇತರ ವಲಯಗಳನ್ನು ರಾಷ್ಟ್ರೀಯ ಜಾಲಕ್ಕೆ ಸೇರ್ಪಡೆ ಮಾಡಲು ಮೊದಲ ಆದ್ಯತೆ ನೀಡಿತ್ತು.
5 ವಿದ್ಯುತ್ ಜಾಲ: ದೇಶದಲ್ಲಿ ಸದ್ಯಕ್ಕೆ ಒಟ್ಟು 5 ವಿದ್ಯುತ್ ಜಾಲಗಳು ಕಾರ್ಯನಿರ್ವಹಿಸುತ್ತಿವೆ. ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಮತ್ತು ಈಶಾನ್ಯ ಜಾಲಗಳು. ಈಗ ದಕ್ಷಿಣದ ಜಾಲವು ಅಂತಿಮವಾಗಿ ರಾಷ್ಟ್ರೀಯ ಜಾಲಕ್ಕೆ ಸೇರ್ಪಡೆಯಾಗಿದೆ. ಇದರಿಂದ ದೇಶಿ ವಿದ್ಯುತ್ ಪೂರೈಕೆ ವ್ಯವಸ್ಥೆಯು ವಿಶ್ವದ ಅತಿದೊಡ್ಡ ವಿದ್ಯುತ್ ಪೂರೈಕೆ ವ್ಯವಸ್ಥೆಗಳಲ್ಲಿ ಒಂದಾಗಲಿದ್ದು, ಒಟ್ಟು ಸಾಮರ್ಥ್ಯ 232 ಗಿಗಾ ವಾಟ್ಗಳಷ್ಟಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.