ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

189 ಎಕರೆ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆ ರದ್ದು

Last Updated 17 ಏಪ್ರಿಲ್ 2017, 19:46 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಸಿಟಿ ಕೋ ಆಪರೇಟಿವ್‌ ಹೌಸಿಂಗ್ ಸೊಸೈಟಿ’ಗಾಗಿ ಕನಕಪುರ ರಸ್ತೆಯ ವಾಜರಹಳ್ಳಿ ಹಾಗೂ ರಘುವನಹಳ್ಳಿ ವ್ಯಾಪ್ತಿಯಲ್ಲಿ ಸ್ವಾಧೀನಪಡಿಸಿಕೊಂಡಿದ್ದ 189 ಎಕರೆ ಕೃಷಿ ಭೂಮಿ ಸ್ವಾಧೀನ ಪ್ರಕ್ರಿಯೆಯನ್ನು ಹೈಕೋರ್ಟ್‌ ಅನೂರ್ಜಿತಗೊಳಿಸಿದೆ.

ಈ ಸಂಬಂಧ ಸೀತಾರಾಂ ಸೇರಿದಂತೆ 216  ರೈತರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಕೆ.ಮುಖರ್ಜಿ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.

‘ವಸತಿ ಸಚಿವ ಕೃಷ್ಣಪ್ಪ ಅವರು ಭೂಮಿ ಸ್ವಾಧೀನ ಪ್ರಕ್ರಿಯೆಯಲ್ಲಿ ಅನಕ್ಷರಸ್ಥ ರೈತರಿಗೆ ಮೋಸ ಮಾಡಿದ್ದಾರೆ’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಅರ್ಜಿದಾರರ ಆರೋಪವೇನು?: ‘ಕೃಷ್ಣಪ್ಪ ಅವರು ರಾಜೇಂದ್ರ ಎಂಟರ್‌ಪ್ರೈಸಸ್‌ ಸಹಕಾರ ಸಂಘದ ಮುಖಾಂತರ ಜಮೀನುಗಳ ಮಾಲೀಕರ ಜತೆ ಒಪ್ಪಂದ ಮಾಡಿಕೊಂಡು ಕೃಷಿ ಜಮೀನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ. ಇದು ಸಾರ್ವಜನಿಕ ಉದ್ದೇಶಕ್ಕಾಗಿ ನಡೆದ ಸ್ವಾಧೀನ ಪ್ರಕ್ರಿಯೆ ಅಲ್ಲ ಹಾಗೂ ಭೂ ಸ್ವಾಧೀನ ಕಾಯ್ದೆ–1894ಕ್ಕೆ ವಿರುದ್ಧವಾಗಿದೆ’ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

ಮೋಸ ಮಾಡಿದ್ದಾರೆ: ‘ಕೃಷ್ಣಪ್ಪ ನಮ್ಮಿಂದ ಜನರಲ್ ಪವರ್ ಆಫ್‌ ಅಟಾರ್ನಿ (ಜಿಪಿಎ) ಮತ್ತು ಪ್ರಮಾಣ ಪತ್ರ ಬರೆಸಿಕೊಂಡಿದ್ದಾರೆ. ಭೂಮಿ ಬಿಟ್ಟುಕೊಟ್ಟ ಬಹುತೇಕ ಮಾಲೀಕರು  ಅನಕ್ಷರಸ್ಥರು. ದಾಖಲೆಗಳಿಗೆ ಇವರು ಹೆಬ್ಬೆರಳ ಗುರುತು ಒತ್ತಿದ್ದಾರೆ. ರಾಜೇಂದ್ರ ಎಂಟರ್‌ ಪ್ರೈಸಸ್‌ ಸಹಕಾರ ಸಂಘದ ನಿರ್ವಹಣಾ ಪಾಲುದಾರರೂ ಆದ ಕೃಷ್ಣಪ್ಪ ಎಲ್ಲರಿಗೂ  ಮೋಸ ಮಾಡಿದ್ದಾರೆ’ ಎಂದು ಆಕ್ಷೇಪಿಸಿದ್ದರು.

‘ಸರ್ಕಾರ ನೀಡಿದ ಪರಿಹಾರದ ಹಣವನ್ನು ಸಹಕಾರ ಸಂಘದ ಮೂಲಕ ನೇರವಾಗಿ ಕೃಷ್ಣಪ್ಪ ತಾವೇ ಪಡೆದಿದ್ದಾರೆ’  ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ಭೂ ಸ್ವಾಧೀನ ಪ್ರಕ್ರಿಯೆಗೆ ಕೃಷ್ಣಪ್ಪ ರಾಜಕೀಯ   ಪ್ರಭಾವ ಬಳಸಿಕೊಂಡಿರುವುದೂ ಕಂಡು ಬಂದಿದೆ’ ಎಂದು ನ್ಯಾಯಪೀಠ ಆದೇಶದಲ್ಲಿ ತಿಳಿಸಿದೆ.

ಆದೇಶದಲ್ಲಿ ಅವಕಾಶ: 189 ಎಕರೆ ಪ್ರದೇಶದಲ್ಲಿ 155 ಎಕರೆಯನ್ನು ನಿವೇಶನಗಳನ್ನಾಗಿ ಪರಿವರ್ತಿಸಿ 2005ಕ್ಕೂ ಮುನ್ನ ಹಾಗೂ ಆ ನಂತರದಲ್ಲಿ ಮಾರಾಟ ಮಾಡಲಾಗಿದೆ.

‘ವಿವಾದಿತ ಪ್ರದೇಶದಲ್ಲಿ ನಿವೇಶನ ಹೊಂದಿರುವವರು   ಮೂಲ ಮಾಲೀಕರ ಜೊತೆ ಚಾಲ್ತಿ ಮಾರುಕಟ್ಟೆ ದರ ಪಾವತಿಸಿ ಸಂಧಾನದ ಮೂಲಕ ಕಾಯಂ ಮಾಡಿಕೊಳ್ಳಬಹುದು’ ಎಂದು ಆದೇಶದಲ್ಲಿ ತಿಳಿಸಲಾಗಿದೆ.

**

ಈ ಪ್ರಕರಣದಲ್ಲಿ ನನ್ನ ಪಾತ್ರವೇನೂ ಇಲ್ಲ. ಇದರಲ್ಲಿ ನಾನು ಪ್ರತಿವಾದಿಯೂ ಅಲ್ಲ ಅಥವಾ ಮೇಲ್ಮನವಿದಾರನೂ ಅಲ್ಲ.
ಎಂ.ಕೃಷ್ಣಪ್ಪ, ವಸತಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT