ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಮುರಿ: ಮಸಾಲ ನ್ಯೂಸ್‌!

Published 15 ಮೇ 2024, 19:41 IST
Last Updated 15 ಮೇ 2024, 19:41 IST
ಅಕ್ಷರ ಗಾತ್ರ

‘ನಾವು ಚಿಕ್ಕವರಿದ್ದಾಗಿನಿಂದ ನೋಡ್ಕೊಂಡ್‌ ಬೆಳೆದಿದ್ದ ಸಿನಿಮಾ ಥಿಯೇಟರ್‌ಗಳನ್ನೆಲ್ಲ ಮುಚ್ಚುತ್ತಿದ್ದಾರೆ. ಅದನ್ನು ನೋಡಿದಾಗೆಲ್ಲ ಏನೋ ಒಂಥರಾ ಬೇಜಾರಾಗುತ್ತೆ’ ಸಪ್ಪೆ ಮೋರೆ ಮಾಡಿಕೊಂಡು ಹೇಳಿದ ಮುದ್ದಣ್ಣ. 

‘ಜನ ಥಿಯೇಟರ್‌ಗಳಿಗೇ ಹೋಗದಿದ್ದರೆ ಅವರಾದರೂ ಏನು ಮಾಡ್ತಾರೆ ಪಾಪ’ ಸಮಾಧಾನದ ಧ್ವನಿಯಲ್ಲಿ ಹೇಳಿದ ವಿಜಿ.

‘ಸಿಂಗಲ್‌ ಸ್ಕ್ರೀನ್‌ ಕ್ಲೋಸ್‌ ಮಾಡಿದ ಮೇಲೆ, ಎಂಟರ್‌ಟೇನ್‌ಮೆಂಟೇ ಇಲ್ಲದಂತಾಗಿದೆ ನಮಗೆ’. 

‘ಎಂಟರ್‌ಟೇನ್‌ಮೆಂಟ್‌ಗಾಗಿ ಥಿಯೇಟರ್‌ಗೇ ಹೋಗಬೇಕಂತೇನಾದರೂ ಇದೆಯಾ?’

‘ಮತ್ತೆ?’ 

‘ಈಗ ನ್ಯೂಸ್‌ ಚಾನೆಲ್‌ ನೋಡು ಸಾಕು, ಎಷ್ಟು ಬೇಕು ನಿನಗೆ ಎಂಟರ್‌ಟೇನ್‌ಮೆಂಟ್‌?’ 

‘ಆದರೆ, ನ್ಯೂಸ್‌ ನೋಡೋವಾಗ ಹೀರೊ, ವಿಲನ್, ಕಮಿಡಿಯನ್‌ಗಳೆಲ್ಲ ಇರೋದಿಲ್ವಲ್ಲ’. 

‘ನಿನಗೆ ಇದೆಲ್ಲ ನ್ಯೂಸ್‌ ಚಾನೆಲ್‌ ನೋಡಿದರೂ ಸಿಗುತ್ತೆ. ರೇಪ್, ಕಿಡ್ನ್ಯಾಪ್‌, ಪರಾರಿ, ಪಿತೂರಿ, ಬ್ಲ್ಯಾಕ್‌ಮೇಲ್‌, ಏಟು–ತಿರುಗೇಟು... ಹೀಗೆ ಪಕ್ಕಾ ಕಮರ್ಷಿಯಲ್‌ ಫಿಲ್ಮ್‌ ಒಂದರಲ್ಲಿ ಏನೇನಿರುತ್ತೋ ಎಲ್ಲವೂ ಸಿಗುತ್ತೆ’ ನಕ್ಕ ವಿಜಿ. 

‘ಆದರೂ ಒಳ್ಳೊಳ್ಳೆ ಲೊಕೇಷನ್‌ಗಳಲ್ಲಿ, ಸಖತ್‌ ಆಗಿರೋ ಕಾಸ್ಟ್ಯೂಮ್‌ ಹಾಕ್ಕೊಂಡು ಹೀರೊ–ಹೀರೊಯಿನ್‌ ಡಾನ್ಸ್‌ ಮಾಡೋ ಸೀನ್‌ಗಳನ್ನೆಲ್ಲ ಸಿನಿಮಾದಲ್ಲಿ ನೋಡೋಕೆ ಎಷ್ಟು ಚೆನ್ನಾಗಿರುತ್ತೆ’. 

‘ಅಯ್ಯೋ, ನ್ಯೂಸ್‌ ಚಾನೆಲ್‌ಗಳಲ್ಲಿ ಇದೂ ಇರುತ್ತೆ. ಆದರೆ, ಒಂದೇ ಡಿಫರೆನ್ಸ್‌, ಜೊತೆಗೆ ಹೀರೊಯಿನ್‌ ಇರಲ್ಲ. ಬೆಳಿಗ್ಗೆ, ಸಂಜೆ, ರಾತ್ರಿಗೊಂದೊಂದು ಕಾಸ್ಟ್ಯೂಮ್‌ ಹಾಕಿಕೊಂಡು ಸ್ಕ್ರೀನ್‌ ತುಂಬಾ ಓಡಾಡ್ತಿರೋ ಹೀರೊನೂ ಕಾಣ್ತಾರೆ ನಿನಗೆ’. 

‘ಆದರೆ, ಅಣ್ಣಾವ್ರ ಫಿಲಮ್‌ಗಳು ಹೇಗಿರ್ತಿದ್ವು, ಆ ಸಿನಿಮಾದ ಕಥೆ, ಸಂದೇಶ ಈಗ ಟಿ.ವಿಯಲ್ಲಿ ಸಿಗುತ್ತಾ ನಿನಗೆ?’ ಕೇಳಿದ ಮುದ್ದಣ್ಣ. 

‘ಅಣ್ಣಾವ್ರು ಸಿನಿಮಾಗಳಲ್ಲಿ ಹಾಕಿದ ವೇಷಭೂಷಣ ಬೇಕಾದರೆ ಫಾಲೊ ಮಾಡ್ತಾರೆ. ಆದರೆ, ಅವರ ಮತ್ತು ಅವರ ಪಾತ್ರಗಳ ವ್ಯಕ್ತಿತ್ವ ಅನುಸರಿಸಿ ಅಂದರೆ, ಊಹೂಂ, ಚಾನ್ಸೇ ಇಲ್ಲ’ ಮತ್ತೆ ನಕ್ಕ ವಿಜಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT