ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೈಗಾರಿಕಾ ಪ್ರದೇಶ: ದಲಿತರಿಗೆ ಶೇ 24.1ರಷ್ಟು ಜಾಗ ಕಡ್ಡಾಯ

Published 26 ಫೆಬ್ರುವರಿ 2024, 15:54 IST
Last Updated 26 ಫೆಬ್ರುವರಿ 2024, 15:54 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಅಭಿವೃದ್ಧಿಪಡಿಸಿದ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ ಶೇ 24.1ರಷ್ಟು ಜಾಗವನ್ನು ಕಡ್ಡಾಯವಾಗಿ ಮೀಸಲಿಡಲಾಗುವುದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು.

ಖನಿಜ ಭವನದಲ್ಲಿ ಸೋಮವಾರ ತಮ್ಮನ್ನು ಭೇಟಿಯಾದ ಕರ್ನಾಟಕ ದಲಿತ ಉದ್ದಿಮೆದಾರರ ಸಂಘದ ಕಾರ್ಯಾಧ್ಯಕ್ಷ ಶ್ರೀನಿವಾಸನ್‌ ನೇತೃತ್ವದ ನಿಯೋಗಕ್ಕೆ ಅವರು ಭರವಸೆ ನೀಡಿದರು.

‘ಕೆಐಎಡಿಬಿ ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಗಳಿಗೆ ನಿಯಮದಂತೆ ಶೇ 24.1ರಷ್ಟು ಜಾಗ ಮೀಸಲಿಡಬೇಕು. ಆದರೆ, ವಾಸ್ತವದಲ್ಲಿ ಶೇ 16ರಷ್ಟು ನೀಡಲಾಗುತ್ತಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಕೋಲಾರ ಜಿಲ್ಲೆಯ 12 ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ 653 ಎಕರೆ ಜಾಗ ಬಿಟ್ಟುಕೊಡುವುದು ಬಾಕಿ ಇದೆ’ ಎಂಬುದನ್ನು ಸಚಿವರ ಗಮನಕ್ಕೆ ಶ್ರೀನಿವಾಸನ್‌ ತಂದರು.

‘ಈಗಾಗಲೇ ಉದ್ದಿಮೆಗಳು ನೆಲೆಯೂರಿರುವ ಕೈಗಾರಿಕಾ ಪ್ರದೇಶಗಳಲ್ಲಿ ಜಾಗ ಉಳಿದಿಲ್ಲ. ಹಿಂದಿನ ಸರ್ಕಾರದ ನಡೆಯಿಂದಾಗಿ ಇಂತಹ ಲೋಪವಾಗಿದೆ.  ಭವಿಷ್ಯದಲ್ಲಿ ಅಭಿವೃದ್ಧಿಪಡಿಸುವ ಕೈಗಾರಿಕಾ ಪ್ರದೇಶಗಳಲ್ಲಿ ದಲಿತ ಉದ್ಯಮಿಗಳಿಗೆ ನಿಯಮಾನುಸಾರ ಜಾಗ ನೀಡಲಾಗುವುದು. ಈ ಕುರಿತು ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು’ ಎಂದು ಸಚಿವ ಪಾಟೀಲ ಹೇಳಿದರು.   

ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್‌, ಕೆಐಎಡಿಬಿ ಸಿಇಒ ಮಹೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT