ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಜ್ಯಕ್ಕೆ ₹1.90 ಲಕ್ಷ ಕೋಟಿ ಹೊರೆ ‘ಸಿದ್ಧನಾಮಿಕ್ಸ್‌’ ಕೊಡುಗೆ: ಅರವಿಂದ ಬೆಲ್ಲದ

ಪರಿಶಿಷ್ಟರು, ಹಿಂದುಳಿದವರಿಗೆ ಅನುದಾನ ಕಡಿತ: ಅರವಿಂದ ಬೆಲ್ಲದ ಟೀಕಾ ಪ್ರಹಾರ
Published 22 ಫೆಬ್ರುವರಿ 2024, 15:32 IST
Last Updated 22 ಫೆಬ್ರುವರಿ 2024, 15:32 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 16 ನೇ ವಿಧಾನಸಭೆಯ ಎರಡು ಬಜೆಟ್‌ಗಳಿಂದ ₹1.90 ಲಕ್ಷ ಕೋಟಿ ಸಾಲದ ಹೊರೆಯನ್ನು ರಾಜ್ಯದ ಜನರ ಮೇಲೆ ಹೊರಿಸಿದ್ದಾರೆ. ಇದು ‘ಸಿದ್ದನಾಮಿಕ್ಸ್‌ನ’ ಕೊಡುಗೆ ಎಂದು ವಿಧಾನಸಭೆಯ ವಿರೋಧ ‍ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದರು.

ಬಜೆಟ್‌ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ‘ಅಧಿಕಾರಕ್ಕೆ ಬಂದ ಕೇವಲ 9 ತಿಂಗಳಲ್ಲಿ ಇಷ್ಟು ಪ್ರಮಾಣದ ಸಾಲವನ್ನು ಈ ಹಿಂದೆ ಯಾವುದೇ ಮುಖ್ಯಮಂತ್ರಿ ಮಾಡಿರಲಿಲ್ಲ. ಇದನ್ನು ಕೇಳಿ ನಿಮಗೂ ಅಚ್ಚರಿ ಆಗುತ್ತದೆ ಅಲ್ಲವೇ. ಕಳೆದ ಬಜೆಟ್‌ನಲ್ಲಿ ₹85,000 ಕೋಟಿ, ಈ ಬಜೆಟ್‌ನಲ್ಲಿ ₹1,05,246 ಕೋಟಿ ಸಾಲ ಮಾಡಿದ್ದಾರೆ’ ಎಂದರು. ‘ನೀವು ಸುಳ್ಳು ಮಾಹಿತಿ ನೀಡುತ್ತಿದ್ದೀರಿ’  ಎಂದು ಸಚಿವ ಬೈರತಿ ಸುರೇಶ್‌ ಪ್ರತಿಕ್ರಿಯಿಸಿದರು.

’ಪರಿಶಿಷ್ಟಜಾತಿ, ಪಂಗಡ, ಹಿಂದುಳಿದವರ ನಿಗಮಗಳಿಗೆ ಅನುದಾನವನ್ನು ಕಡಿತಗೊಳಿಸಲಾಗಿದೆ. ಅಂಬೇಡ್ಕರ್‌ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ₹60 ಕೋಟಿ ನೀಡಿತ್ತು, ಈಗಿನ ಸರ್ಕಾರ ₹40 ಕೋಟಿ ಕೊಟ್ಟಿದೆ. ತಾಂಡಾ ಅಭಿವೃದ್ಧಿ ನಿಗಮಕ್ಕೆ ನಮ್ಮ ಸರ್ಕಾರ ₹110 ಕೋಟಿ ನೀಡಿದ್ದರೆ, ಈಗಿನ ಸರ್ಕಾರ ಅದನ್ನು ₹60 ಕೋಟಿಗೆ ಇಳಿಸಿದೆ. ಇದೇ ರೀತಿ ಆದಿಜಾಂಬವ, ಬೋವಿ, ವಿಶ್ವಕರ್ಮ, ಅಂಬಿಗರ ಚೌಡಯ್ಯ, ವೀರಶೈವ–ಲಿಂಗಾಯತ, ಒಕ್ಕಲಿಗರ ಅಭಿವೃದ್ಧಿ ನಿಗಮಗಳಿಗೆ ಭಾರಿ ಪ್ರಮಾಣದಲ್ಲಿ ಅನುದಾನ ಕಡಿತ ಮಾಡಲಾಗಿದೆ. ಈ ರೀತಿ ಕಡಿತ ಮಾಡಿರುವ ಹಣವನ್ನು ಅಲ್ಪಸಂಖ್ಯಾತರಿಗೆ ನೀಡಲಾಗಿದೆ. ಸುಮಾರು ₹3,000 ಕೋಟಿ ನೀಡಲಾಗಿದೆ. ಅವರಿಗೆ ಹಣ ಕೊಡುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ, ಪರಿಶಿಷ್ಟರು ಮತ್ತು ಹಿಂದುಳಿದವರ ಹಣವನ್ನು ಕಡಿತಗೊಳಿಸಿ ನೀಡಿದ್ದು ಸರಿಯಲ್ಲ’ ಎಂದು ಅವರು ಆಕ್ಷೇಪ ವ್ಯಕ್ತಪಡಿಸಿದರು.

‘ಅಬಕಾರಿ ತೆರಿಗೆ ಸಂಗ್ರಹದಲ್ಲಿ ಬಡ ವರ್ಗದ ಪಾಲೇ ಹೆಚ್ಚು, ಈ ವರ್ಗದ ಮೇಲೆ ತೆರಿಗೆ ಇನ್ನೂ ಹೆಚ್ಚಿಸುವ ಮೂಲಕ ಪ್ರಹಾರಕ್ಕೆ ಮುಂದಾಗಿದೆ’ ಎಂದು ಆರೋಪಿಸಿದರು.

’ಒಟ್ಟು 18 ತೆರಿಗೆ ಸ್ಲ್ಯಾಬ್‌ಗಳಿದ್ದು, ಈ ಪೈಕಿ ಶೇ 85 ರಷ್ಟು ಸ್ಲ್ಯಾಬ್‌ಗಳ ತೆರಿಗೆ ಬಡ ವರ್ಗದವರು ಕುಡಿಯುವ ಮದ್ಯಗಳಿಗೆ ಅನ್ವಯವಾಗುತ್ತಿದೆ’ ಎಂದು ವಿವರಿಸಿದರು.

ಗೃಹಲಕ್ಷ್ಮಿ’ :ಆಶಾ ಅಂಗನವಾಡಿ ಕಾರ್ಯಕರ್ತೆಯರು ಹೊರಕ್ಕೆ?

ಗ್ಯಾರಂಟಿಯ ‘ಗೃಹಲಕ್ಷ್ಮಿ’ ಯೋಜನೆಯಿಂದ ಅಂಗನವಾಡಿ ಕಾರ್ಯಕರ್ತೆಯರು ಆಶಾ ಕಾರ್ಯಕರ್ತೆಯರು ಅತಿಥಿ ಶಿಕ್ಷಕಿಯರು ಹೊರಗುತ್ತಿಗೆ/ ಗುತ್ತಿಗೆ ಕೆಲಸಗಾರರು ಗ್ರಾಮ ಸಹಾಯಕರನ್ನು ಕೈಬಿಡುವ ಪ್ರಸ್ತಾವನೆಯನ್ನು ಆರ್ಥಿಕ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಅರವಿಂದ ಬೆಲ್ಲದ ಹೇಳಿದರು. ಇದಕ್ಕೆ ಪೂರಕವಾಗಿ ಆರ್ಥಿಕ ಇಲಾಖೆಯ ಪ್ರಸ್ತಾವನೆಯ ಪತ್ರವನ್ನು ಅವರು ಸದನದಲ್ಲಿ ಪ್ರದರ್ಶಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸದಸ್ಯರು ಹಣಕಾಸು ಇಲಾಖೆ ಪತ್ರ ಬರೆದಿದ್ದರೂ ಅಂತಿಮ ತೀರ್ಮಾನ ತೆಗೆದುಕೊಳ್ಳುವುದು ಮುಖ್ಯಮಂತ್ರಿಯವರೇ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT