ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡಿಗರು ಪಾಕ್‌ ಪರ ಸರ್ಕಾರ ಆರಿಸಿಲ್ಲ: ಬಿಜೆಪಿ ನಾಯಕರಿಂದ ರಾಜ್‌ಭವನ್ ಚಲೋ

Published 29 ಫೆಬ್ರುವರಿ 2024, 16:30 IST
Last Updated 29 ಫೆಬ್ರುವರಿ 2024, 16:30 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಘಟನೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ. ಕನ್ನಡಿಗರು ಪಾಕ್‌ ಪರವಾದ ಸರ್ಕಾರವನ್ನು ಆಯ್ಕೆ ಮಾಡಿಲ್ಲ’ ಎಂದು ಬಿಜೆಪಿ ಶಾಸಕ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು.

ರಾಜಭವನ್‌ ಚಲೋ ನಡೆಸಿ, ರಾಜ್ಯಪಾಲರಿಗೆ ಮನವಿ ಪತ್ರ ಅರ್ಪಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ವಿಧಾನಸೌಧದಲ್ಲೇ ಪಾಕಿಸ್ತಾನದ ಪರ ಘೋಷಣೆ ಕೂಗಿದ್ದು, ದೇಶದ ರಕ್ಷಣೆಗೆ ಇದು ಆಪತ್ತು ಉಂಟು ಮಾಡಿದೆ. ಅಧಿವೇಶನ ಮುಗಿದ ತಕ್ಷಣ ಜನರು ಇದನ್ನೆಲ್ಲ ಮರೆಯುತ್ತಾರೆ ಎಂದು ಕಾಂಗ್ರೆಸ್‌ನವರು ಭಾವಿಸಿದ್ದಾರೆ. ಆದರೆ, ಜನರು ಮರೆಯುವುದಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ’ ಎಂದು ಹೇಳಿದರು.

‘ಕಾಂಗ್ರೆಸ್‌ನವರು ಒಂದು ಕಡೆ ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿದ್ದಾರೆ. ಮುಖ್ಯಮಂತ್ರಿ ಮಂಡಿಸಿದ ಬಜೆಟ್‌ ಸತ್ಯಕ್ಕೆ ದೂರವಾಗಿದೆ. ಈಗ ಪಾಕಿಸ್ತಾನ ಪರ ಘೋಷಣೆ ಕೂಗಿದವರ ರಕ್ಷಣೆ ಮಾಡುತ್ತಾ ನೈತಿಕವಾಗಿ ದಿವಾಳಿಯಾಗಿದ್ದಾರೆ. ಇವರು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ’ ಎಂದು ಬೊಮ್ಮಾಯಿ ಆರೋಪಿಸಿದರು.

‘ಪಾಕಿಸ್ತಾನದ ಪರ ಘೋಷಣೆ ಕೂಗಿರುವುದು ಮಾಧ್ಯಮಗಳಲ್ಲಿ ಸ್ಪಷ್ಟವಾಗಿ ತೋರಿಸಲಾಗಿದೆ. ಇವರು ಎಫ್‌ಎಸ್‌ಎಲ್‌ ವರದಿ ಕತೆ ಏಕೆ ಹೇಳುತ್ತಿದ್ದಾರೆ. ಪ್ರಕರಣವನ್ನು ಮುಚ್ಚಿ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಘಟನೆ ನಡೆದು 48 ಗಂಟೆಗಳು ಕಳೆದರೂ ಯಾರನ್ನೂ ಬಂಧಿಸಿಲ್ಲ. ಬೇರೆ ಘಟನೆ ನಡೆದರೆ ಎಫ್‌ಎಸ್‌ಎಲ್‌ ವರದಿಗಾಗಿ ಕಾಯದೇ ಮೊದಲು ಬಂಧಿಸುತ್ತಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರ ಹೇಳಿಕೆಯು ಕಾಂಗ್ರೆಸ್‌ನವರ ಆಂತರಿಕ ಮನಸ್ಥಿತಿ ಏನಿದೆ ಎನ್ನುವುದನ್ನು ತೋರಿಸುತ್ತದೆ. ಪಾಕಿಸ್ತಾನದ ಭಯೋತ್ಪಾದಕರು ಪ್ರತಿ ದಿನ ನಮ್ಮ ಸೈನಿಕರನ್ನು ಕೊಲ್ಲುತ್ತಾರೆ. ಅವರನ್ನು ನಮ್ಮ ಸ್ನೇಹಿತರು ಎಂದು ಹೇಳಲಾಗುತ್ತದೆಯೇ’ ಎಂದೂ ಪ್ರಶ್ನಿಸಿದರು.

‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದವರನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿ ಬಿಜೆಪಿ ನಾಯಕರು ಗುರುವಾರ ರಾಜಭವನ್ ಚಲೋ ನಡೆಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಬಿಜೆಪಿ ಶಾಸಕರು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌
‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದವರನ್ನು ಇನ್ನೂ ಬಂಧಿಸಿಲ್ಲ ಎಂದು ಆರೋಪಿಸಿ ಬಿಜೆಪಿ ನಾಯಕರು ಗುರುವಾರ ರಾಜಭವನ್ ಚಲೋ ನಡೆಸಿದರು. ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ್ ಪೂಜಾರಿ ಹಾಗೂ ಬಿಜೆಪಿ ಶಾಸಕರು ರಾಜಭವನ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ: ಎಂ.ಎಸ್‌.ಮಂಜುನಾಥ್‌

ಉಗ್ರರ ಸ್ಲೀಪರ್‌ ಸೆಲ್‌ ಮಾಡಬೇಡಿ: ಅಶೋಕ

‘ಪಾಕಿಸ್ತಾನದವರನ್ನು ಕರೆತಂದು ವಿಧಾನಸೌಧವನ್ನು ಉಗ್ರರ ಸ್ಲೀಪರ್‌ ಸೆಲ್‌ ಮಾಡಬೇಡಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ  ಹರಿಹಾಯ್ದರು. ‘ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರೂ ಈವರೆಗೂ ಕ್ರಮ ಕೈಗೊಂಡಿಲ್ಲ. ವಿಚಾರಣೆ ಮಾಡದೇ ಬಿಟ್ಟು ಕಳಿಸಿದ್ದಾರೆ’ ಎಂದು ಹೇಳಿದರು. ‘ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಭಯೋತ್ಪಾದನಾ ಚಟುವಟಿಕೆ ಹೆಚ್ಚಿದೆ. ಮುಸ್ಲಿಂ ಮೂಲಭೂತವಾದಿಗಳು ರಾಜ್ಯದ ಎಲ್ಲೆಡೆ ಗಲಾಟೆ ಮಾಡುತ್ತಿದ್ದಾರೆ. ಪಾಕಿಸ್ತಾನಕ್ಕೆ ಜೈಕಾರ ಹಾಕಿದವರನ್ನು ಬಂಧಿಸಿ ಎಂದು ಆಗ್ರಹಿಸಿದರೆ ಸರ್ಕಾರ ಅವರನ್ನು ಬಿಟ್ಟುಬಿಡಿ ಎಂದು ಪೊಲೀಸರಿಗೆ ಸೂಚಿಸಿದೆ. ಎಫ್‌ಎಸ್‌ಎಲ್‌ ವರದಿ ಪರಿಶೀಲನೆ ಎಂದು ಹೇಳಿ ಯಾವುದೋ ವಾಹಿನಿಯ ವಿಡಿಯೊ ಪಡೆದು ಪರೀಕ್ಷೆ ನಡೆಸಿ ಸುಳ್ಳು ವರದಿ ಸಿದ್ಧಪಡಿಸುತ್ತದೆ’ ಎಂದು ಆರೋಪಿಸಿದರು. ‘ಸರ್ಕಾರವನ್ನು ಪ್ರಶ್ನಿಸದೇ ಹೀಗೆ ಬಿಟ್ಟರೆ ವಿಧಾನಸೌಧ ಕೂಡ ಭಯೋತ್ಪಾದಕರ ತಾಣವಾಗಲಿದೆ. ಕೆಂಗಲ್‌ ಹನುಮಂತಯ್ಯ ಅವರು ಕಟ್ಟಿದ ವಿಧಾನಸೌಧ ಉಳಿಸಲು ನಾವು ಹೋರಾಟ ಮಾಡುತ್ತಿದ್ದೇವೆ’ ಎಂದರು. ಅಶೋಕ ಮತ್ತು ಬಸವರಾಜ ಬೊಮ್ಮಾಯಿ ಅವರು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರನ್ನು ಗುರುವಾರ ರಾತ್ರಿ ಭೇಟಿ ಮಾಡಿ ಘಟನೆಯ ವಿವರವನ್ನೂ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT