ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಳು ಕ್ಷೇತ್ರಗಳ ಉಪಚುನಾವಣೆ | ಮೂರರಲ್ಲಿ ಬಿಜೆಪಿ ಗೆಲುವು; ‘ಇಂಡಿಯಾ’ಕ್ಕೂ ಸಮಾಧಾನ

Published 8 ಸೆಪ್ಟೆಂಬರ್ 2023, 15:41 IST
Last Updated 8 ಸೆಪ್ಟೆಂಬರ್ 2023, 15:41 IST
ಅಕ್ಷರ ಗಾತ್ರ

ನವದೆಹಲಿ: ಆರು ರಾಜ್ಯಗಳಲ್ಲಿ ಏಳು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟಗೊಂಡಿದೆ. ಬಿಜೆಪಿ ಮೂರು ಕ್ಷೇತ್ರಗಳಲ್ಲಿ ಹಾಗೂ ‘ಇಂಡಿಯಾ’ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಪಕ್ಷಗಳು ನಾಲ್ಕು ಕ್ಷೇತ್ರಗಳಲ್ಲಿ ಜಯ ಗಳಿಸಿವೆ.

‘ಇಂಡಿಯಾ’ ಮೈತ್ರಿಕೂಟವು ಉತ್ತರಪ್ರದೇಶದ ಘೋಸಿ ಹಾಗೂ ಜಾರ್ಖಂಡ್‌ನ ಡುಮ್ರಿ ಕ್ಷೇತ್ರಗಳಲ್ಲಿನ ಕಠಿಣ ಸ್ಪರ್ಧೆಗಳನ್ನು ಸುಲಭವಾಗಿ ಮೆಟ್ಟಿ ನಿಲ್ಲುವ ಮೂಲಕ ಭವಿಷ್ಯದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಿದೆ. ಸಮಾಜವಾದಿ ಪಕ್ಷವು ಘೋಸಿ ಕ್ಷೇತ್ರವನ್ನು ಉಳಿಸಿಕೊಂಡಿದೆ. ಡುಮ್ರಿ ಕ್ಷೇತ್ರದಲ್ಲಿ ಜಾರ್ಖಂಡ್‌ ಮುಕ್ತಿ ಮೋರ್ಚಾವು ಮತ್ತೊಮ್ಮೆ ಗೆಲುವು ಸಾಧಿಸಿದೆ. ಪಶ್ಚಿಮ ಬಂಗಾಳದ ಧುಪ್ಗುರಿಯಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವು (ಟಿಎಂಸಿ) ಕಾಂಗ್ರೆಸ್‌ ಬೆಂಬಲಿತ ಸಿಪಿಎಂ ಹಾಗೂ ಬಿಜೆಪಿ ಸವಾಲನ್ನು ಎದುರಿಸಿ ಜಯ ಗಳಿಸಿದೆ. 

ತ್ರಿಪುರದ ಬೊಕ್ಸಾನಗರ ಹಾಗೂ ಧನ್‌ಪುರ ಕ್ಷೇತ್ರಗಳಲ್ಲಿ ಸಿಪಿಎಂ ಕಳಪೆ ಪ್ರದರ್ಶನ ನೀಡಿದೆ. ಇಲ್ಲಿ ಸಿಪಿಎಂಗೆ ಕಾಂಗ್ರೆಸ್‌ ಬೆಂಬಲ ನೀಡಿತ್ತು. ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಕೇರಳದ ಪುತ್ತುಪಲ್ಲಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯು ಸಿಪಿಎಂ ಅಭ್ಯರ್ಥಿ ವಿರುದ್ಧ ವಿಜಯ ಸಾಧಿಸಿದ್ದಾರೆ. ಉತ್ತರಾಖಂಡದ ಬಾಗೇಶ್ವರ ಕ್ಷೇತ್ರದಲ್ಲಿ ಬಿಜೆಪಿ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. 

ಒಟ್ಟಾರೆಯಾಗಿ ಬಿಜೆಪಿ ಒಂದು ಕ್ಷೇತ್ರವನ್ನು ಕಳೆದುಕೊಂಡಿದೆ. ಕಾಂಗ್ರೆಸ್‌ ಕೇರಳದ ಕ್ಷೇತ್ರವನ್ನು ಉಳಿಸಿಕೊಂಡಿದೆ. ಬಿಜೆಪಿ ಕ್ಷೇತ್ರವನ್ನು ಟಿಎಂಸಿ ಕಿತ್ತುಕೊಂಡಿದೆ. ಹಾಲಿ ಶಾಸಕರು ನಿಷ್ಠೆ ಬದಲಾಯಿಸಿದರೂ ಸಮಾಜವಾದಿ ಪಕ್ಷವು ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಘೋಸಿ ಕ್ಷೇತ್ರದಲ್ಲಿ ಎಸ್‌ಪಿಗೆ ಕಾಂಗ್ರೆಸ್‌ ಹಾಗೂ ಆರ್‌ಎಲ್‌ಡಿ ಬೆಂಬಲ ನೀಡಿದ್ದವು. 

ಎಸ್‌ಪಿ ಶಾಸಕರಾಗಿದ್ದ ದಾರಾ ಸಿಂಗ್ ಚೌಹಾನ್‌ ಅವರು ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದ್ದರು. ಹೀಗಾಗಿ, ಇದು ಪ್ರತಿಷ್ಠೆಯ ಕ್ಷೇತ್ರವಾಗಿ ಮಾರ್ಪಟ್ಟಿತ್ತು. ಎಸ್‌ಪಿ ಅಭ್ಯರ್ಥಿ ಸುಧಾಕರ್ ಸಿಂಗ್‌ 42,759 ಮತಗಳ ಅಂತರದಿಂದ ಜಯ ಗಳಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT