ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೀತೆ, ಲಕ್ಷ್ಮಣ, ಆಂಜನೇಯರಿಂದ ರಾಮನನ್ನು ಬೇರ್ಪಡಿಸುವ ಯತ್ನ: ಸಿದ್ದರಾಮಯ್ಯ

Published 22 ಜನವರಿ 2024, 13:51 IST
Last Updated 22 ಜನವರಿ 2024, 13:51 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಜೆಪಿಯವರು ಹೇಳುತ್ತಾರಲ್ಲ ಆ ರಾಮ ನಮ್ಮ ರಾಮ ಅಲ್ಲ. ಮಹಾತ್ಮಗಾಂಧಿಯ ರಾಮ, ರಾಮಾಯಣದ ರಾಮ ನಮ್ಮ ರಾಮ. ಶ್ರೀರಾಮಚಂದ್ರ ಎಲ್ಲರ ದೇವರು. ಅವರನ್ನೇ ನಾವು ಪೂಜಿಸುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಅಯೋಧ್ಯೆ ಇರುವುದು ಉತ್ತರ ಪ್ರದೇಶದಲ್ಲಿ. ಹಾಗಾಗಿ ಬೇರೆ ರಾಜ್ಯಗಳಲ್ಲಿ ರಜೆ ನೀಡಿಲ್ಲ. ನಮ್ಮ ರಾಜ್ಯದಲ್ಲಿಯೂ ರಜೆ ನೀಡಿಲ್ಲ. ಅದಕ್ಕೆ ಕಾಂಗ್ರೆಸಿಗರು ರಾಮನ ವಿರೋಧಿ ಎಂದು ಬಿಜೆಪಿಯವರು ಬಿಂಬಿಸುತ್ತಿರುವುದು ತಪ್ಪು. ರಾಜಕೀಯಕ್ಕೆ ಬಳಸುವುದು ತಪ್ಪು’ ಎಂದು ಸುದ್ದಿಗಾರರಿಗೆ ತಿಳಿಸಿದರು.

‘ಇವತ್ತು ಶ್ರೀರಾಮ ದೇವಸ್ಥಾನವನ್ನು, ಆಂಜನೇಯ ವಿಗ್ರಹವನ್ನೂ ಉದ್ಘಾಟಿಸಿದ್ದೇನೆ. ಇದನ್ನು ರಾಜಕಾರಣಕ್ಕಾಗಿ ಮಾಡಿರುವುದಲ್ಲ. ಸಮಯ ದೊರೆತಾಗ ಅಯೋಧ್ಯೆಗೆ ಹೋಗುತ್ತೇನೆ’ ಎಂದು ಉತ್ತರಿಸಿದರು.

‘ಬಿಜೆಪಿಯವರು ಅಯೋಧ್ಯೆಯಲ್ಲಿ. ರಾಮನನ್ನು ಮಾತ್ರ ಪ್ರತಿಷ್ಠಾಪಿಸಿದ್ದಾರೆ. ರಾಮನೊಂದಿಗೆ ಸೀತಾದೇವಿ, ಲಕ್ಷ್ಮಣ, ಆಂಜನೇಯ ಇದ್ದಾಗ ಮಾತ್ರ ಪರಿಪೂರ್ಣವಾಗುತ್ತದೆ. ಇವರು ಶ್ರೀರಾಮಚಂದ್ರನನ್ನೇ ಬೇರ್ಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.

ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತೇವೆ

ಮಹಾತ್ಮಾಗಾಂಧಿಜಿ ರಘುಪತಿ ರಾಘವ ರಾಜಾರಾಮ್ ಎಂದು ಭಜಿಸುತ್ತಿದ್ದು, ಸಾಯುವಾಗಲೂ ಹೇ ರಾಮ್ ಎಂದೇ ಜೀವ ಬಿಟ್ಟರು. ಕಾಂಗ್ರೆಸ್ ಮಹಾತ್ಮಾಗಾಂಧಿ ಹೇಳಿದ ರಾಮಾಯಣದ ರಾಮನನ್ನು ಪೂಜಿಸುತ್ತದೆ. ಬಿಜೆಪಿ ಹೇಳಿದ ರಾಮನನ್ನು ಅಲ್ಲ ಎಂದರು.

ಅನೇಕ ರಾಜ್ಯಗಳು ರಜೆ ಘೋಷಿಸಿಲ್ಲ

ಕರ್ನಾಟಕದಲ್ಲಿ ಕಾರ್ಯಕ್ರಮದ ಅಂಗವಾಗಿ ರಜೆ ಘೋಷಣೆ ಮಾಡಿಲ್ಲ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕೇಂದ್ರ ಸರ್ಕಾರ ಅರ್ಧ ದಿನ ರಜೆ ಕೊಟ್ಟಿದ್ದಾರೆ. ದೆಹಲಿ, ಪಂಜಾಬ್, ತೆಲಂಗಾಣ, ಪಶ್ಚಿಮ ಬಂಗಾಲ, ತಮಿಳುನಾಡು,ಕೇರಳದಲ್ಲಿಯೂ ರಜೆ ಕೊಟ್ಟಿಲ್ಲ ಎಂದರು.

ಪಿಎಸ್‌ಐ ನೇಮಕಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಬಿ.ವೀರಪ್ಪನವರ ಅಧ್ಯಕ್ಷತೆಯ ಏಕಸದಸ್ಯ ಆಯೋಗ ತನಿಖೆ ಮಾಡಿ ಇಂದು ವರದಿಯನ್ನು ಸಲ್ಲಿಸಿದ್ದಾರೆ, ವರದಿಯನ್ನು ಕೂಲಂಕುಷವಾಗಿ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT