ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವಾಲ್ಮೀಕಿ ನಿಗಮದ ಹಗರಣದ ಹಿಂದೆ ಕಾಂಗ್ರೆಸ್ ಹೈಕಮಾಂಡ್‌: ಎಚ್‌ಡಿಕೆ

‘ಸಾಕ್ಷ್ಯ ನಾಶಕ್ಕಾಗಿ ಎಸ್‌ಐಟಿ ರಚನೆ’
Published 3 ಜೂನ್ 2024, 16:24 IST
Last Updated 3 ಜೂನ್ 2024, 16:24 IST
ಅಕ್ಷರ ಗಾತ್ರ

ಬೆಂಗಳೂರು: ‘ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್‌ ಖಾತೆಯಿಂದ ಅಕ್ರಮವಾಗಿ ಹಣ ವರ್ಗಾವಣೆ ಮಾಡಿರುವ ಹಗರಣದ ಹಿಂದೆ ಕಾಂಗ್ರೆಸ್‌ ಹೈಕಮಾಂಡ್‌ ಇದೆ. ಚುನಾವಣೆಗೆ ವೆಚ್ಚಕ್ಕೆ ಬೇರೆ ರಾಜ್ಯಗಳಿಗೆ ಹಣ ಪೂರೈಸಲು ಈ ಅಕ್ರಮ ನಡೆದಿದೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದರು.

ಸುದ್ದಿಗಾರರ ಜತೆ ಸೋಮವಾರ ಮಾತನಾಡಿದ ಅವರು, ‘ಕಾಂಗ್ರೆಸ್‌ ಹೈಕಮಾಂಡ್‌ ಮೂಗಿನ ನೇರದಲ್ಲೇ ಹಣ ವರ್ಗಾವಣೆ ನಡೆದಿದೆ. ಕಾಂಗ್ರೆಸ್‌ ಪಕ್ಷವು ವಿವಿಧ ರಾಜ್ಯಗಳ ಚುನಾವಣೆಗೆ ಕರ್ನಾಟಕದಿಂದ ಹಣ ಪೂರೈಸುತ್ತಿದೆ ಎಂಬ ಆರೋಪಕ್ಕೆ ಇದು ಸಾಕ್ಷ್ಯ ಒದಗಿಸಿದೆ’ ಎಂದರು.

‘ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಹಗರಣದ ನೇರ ಹೊಣೆ ಹೊತ್ತುಕೊಳ್ಳಬೇಕು. ಈ ಹಗರಣದಲ್ಲಿ ಇಡೀ ಸಂಪುಟವೇ ಭಾಗಿಯಾಗಿದೆ. ಎಲ್ಲವನ್ನೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ಬಿ. ನಾಗೇಂದ್ರ ಅವರೊಬ್ಬರ ತಲೆಗೆ ಕಟ್ಟುವ ಷಡ್ಯಂತ್ರ ನಡೆಯುತ್ತಿದೆ’ ಎಂದು ದೂರಿದರು.

ತನಿಖೆಗೆ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಎಸ್‌ಐಟಿ ಆಮೆ ವೇಗದಲ್ಲಿ ಹೋಗುತ್ತಿದೆ. ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರನ್‌ ಮರಣ ಪತ್ರದಲ್ಲಿ ನಾಗೇಂದ್ರ ಹೆಸರು ಉಲ್ಲೇಖಿಸಿಲ್ಲ. ಸಂಪುಟದಲ್ಲಿರುವ ಯಾವ ಸಚಿವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಭಾವಿಸಬೇಕು ಎಂದು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಮಾತ್ರ ಹಣ ವರ್ಗಾವಣೆ ಆಗಿರಲು ಸಾಧ್ಯವಿಲ್ಲ. ಬೇರೆ ಬೇರೆ ಇಲಾಖೆಗಳ ನಿಗಮ, ಮಂಡಳಿಗಳ ಖಾತೆಗಳಿಂದ ಹಣ ವರ್ಗಾವಣೆ ಆಗಿರುವ ಸಾಧ್ಯತೆ ಇದೆ. ತೆಲಂಗಾಣ ಚುನಾವಣೆಗೆ ರಾಜ್ಯದಿಂದ ಉಸ್ತುವಾರಿಗಳಾಗಿ ಯಾರೆಲ್ಲ ಇದ್ದರು ಎಂಬುದನ್ನು ಗಮನಿಸಬೇಕು. ಆ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಅಧೀನದಲ್ಲಿರುವ ಎಲ್ಲ ನಿಗಮ, ಮಂಡಳಿಗಳ ಹಣ ಎಲ್ಲಿದೆ ಎಂಬುದನ್ನು ಸರ್ಕಾರ ಬಹಿರಂಗಪಡಿಸಬೇಕು. ಎಲ್ಲ ನಿಗಮ, ಮಂಡಳಿಗಳ ಹಣಕಾಸು ವಹಿವಾಟುಗಳ ಕುರಿತು ತನಿಖೆ ನಡೆಸಿದರೆ ಮತ್ತಷ್ಟು ಹಗರಣಗಳು ಬಯಲಾಗುತ್ತವೆ ಎಂದರು.

ಎಸ್‌ಐಟಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನಾಶ ಮಾಡುತ್ತಿದೆ. ಯೂನಿಯನ್‌ ಬ್ಯಾಂಕ್‌ ಸಿಬಿಐಗೆ ದೂರು ನೀಡಿದ್ದರೂ ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್‌ಐಟಿ ರಚಿಸಿದೆ. ಸಾಕ್ಷ್ಯ ನಾಶ ಮಾಡುವುದಕ್ಕಾಗಿಯೇ ಎಸ್‌ಐಟಿ ರಚಿಸಲಾಗಿದೆ ಎಂದು ಆರೋಪಿಸಿದರು.

‘ವಾಮಾಚಾರಕ್ಕೂ ಎಸ್‌ಐಟಿ ರಚಿಸುತ್ತೀರಾ?’

‘ಎಲ್ಲದರ ಬಗ್ಗೆಯೂ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವ ರಾಜ್ಯ ಸರ್ಕಾರ ಕೇರಳದಲ್ಲಿ ಕೋಳಿ ಕುರಿ ಎಮ್ಮೆ ಬಲಿ ಕೊಟ್ಟು ವಾಮಾಚಾರ ನಡೆಸಲಾಗಿದೆ ಎಂಬ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಆರೋಪದ ಕುರಿತು ತನಿಖೆಗೂ ಎಸ್‌ಐಟಿ ರಚಿಸುತ್ತದೆಯೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು. ‘ನಮ್ಮ ಕುಟುಂಬ ಆ ರೀತಿ ಪ್ರಾಣಿಬಲಿ ನೀಡುವುದಿಲ್ಲ. ಶಿವಕುಮಾರ್‌ ಅವರು ರಾಜರಾಜೇಶ್ವರ ದೇವರಿಗೆ ಅವಮಾನ ಮಾಡಿದ್ದಾರೆ’ ಎಂದು ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT