ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜ್ಯೇಷ್ಠತಾ ಪಟ್ಟಿ ಪ್ರಕಟಣೆಗೆ ಪಿಡಿಒಗಳ ಗಡುವು

Published 8 ಜೂನ್ 2024, 16:22 IST
Last Updated 8 ಜೂನ್ 2024, 16:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಎಲ್ಲ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ (ಪಿಡಿಒ) ಜ್ಯೇಷ್ಠತಾ ಪಟ್ಟಿಯನ್ನು ಸೋಮವಾರದೊಳಗೆ ಪ್ರಕಟಿಸುವಂತೆ ರಾಜ್ಯ ‍ಪಿಡಿಒ ಕ್ಷೇಮಾಭಿವೃದ್ಧಿ ಸಂಘ ಪಂಚಾಯತ್‌ ರಾಜ್‌ ಇಲಾಖೆ ಆಯುಕ್ತರಿಗೆ ಗಡುವು ನೀಡಿದೆ.

ಪಿಡಿಒಗಳ ಜ್ಯೇಷ್ಠತಾ ಪಟ್ಟಿಯನ್ನು ಎರಡು ತಿಂಗಳೊಳಗೆ ಸಿದ್ಧಪಡಿಸಿ ಪ್ರಕಟಿಸುವಂತೆ ಹೈಕೋರ್ಟ್‌ 2023ರ ಜೂನ್‌ನಲ್ಲಿ ಆದೇಶಿಸಿತ್ತು. ಇದಕ್ಕಾಗಿ ಪಂಚಾಯತ್‌ ರಾಜ್‌ ಆಯುಕ್ತರ ಅಧ್ಯಕ್ಷತೆಯಲ್ಲಿ ಜ್ಯೇಷ್ಠತಾ ಪಟ್ಟಿ ಸಮಿತಿಯನ್ನೂ ರಚಿಸಲಾಗಿತ್ತು. ಈವರೆಗೆ ಪಟ್ಟಿ ಪ್ರಕಟಿಸದೇ ಇರುವ ಕ್ರಮಕ್ಕೆ ಆಕ್ಷೇಪಿಸಿರುವ ಸಂಘ, ಸೋಮವಾರದೊಳಗೆ ಪಟ್ಟಿ ಪ್ರಕಟಿಸದಿದ್ದರೆ ರಾಜ್ಯದಾದ್ಯಂತ ಮುಷ್ಕರ ಆರಂಭಿಸುವುದಾಗಿ ತಿಳಿಸಿದೆ.

ಪಂಚಾಯತ್‌ ರಾಜ್‌ ಆಯುಕ್ತಾಲಯದ ಎದುರು ಮೂರು ದಿನಗಳ ಕಾಲ ಸಾಂಕೇತಿಕ ಧರಣಿ ನಡೆಸಿದ ಪಿಡಿಒಗಳು, ಸೋಮವಾರದವರೆಗೆ ಗಡುವು ನೀಡಿ ಶನಿವಾರ ಪ್ರತಿಭಟನೆ ಅಂತ್ಯಗೊಳಿಸಿದರು. ಪಂಚಾಯತ್‌ ರಾಜ್‌ ಆಯುಕ್ತೆ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌ ಅವರಿಗೆ ಮನವಿ ಸಲ್ಲಿಸಿರುವ ಸಂಘದ ಪದಾಧಿಕಾರಿಗಳು, ಗಡುವಿನೊಳಗೆ ಪಟ್ಟಿ ಪ್ರಕಟಿಸದಿದ್ದರೆ ರಾಜ್ಯದಾದ್ಯಂತ ಹೋರಾಟ ಆರಂಭಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ರಾಜ್ಯ ಪಿಡಿಒಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಜು ವಾರದ, ‘ಪಿಡಿಒಗಳ ಜ್ಯೇಷ್ಠತಾ ಪಟ್ಟಿ ಪ್ರಕಟಣೆಗೆ ಸಂಬಂಧಿಸಿದ ಕಡತ ಆಯುಕ್ತಾಲಯದಲ್ಲೇ ಬಾಕಿ ಇದೆ. ಪಟ್ಟಿ ಪ್ರಕಟವಾಗುವವರೆಗೂ ಹೋರಾಟ ಮುಂದುವರಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಸೋಮವಾರ ಪಟ್ಟಿ ಪ್ರಕಟಿಸುವುದಾಗಿ ಆಯುಕ್ತರು ಭರವಸೆ ನಿಡಿದ್ದಾರೆ. ಅದನ್ನು ಈಡೇರಿಸದೇ ಇದ್ದರೆ ಸೋಮವಾರದಿಂದ ರಾಜ್ಯದಾದ್ಯಂತ ಪಿಡಿಒಗಳು ಹೋರಾಟ ಆರಂಭಿಸುತ್ತಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT