ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಳೆ: ಗರಿಗೆದರಿದ ರೈತರ ನಿರೀಕ್ಷೆ

ಚಿಕ್ಕಮಗಳೂರು, ಬೆಳಗಾವಿ, ಹಾಸನದಲ್ಲಿ ವರ್ಷಧಾರೆ
Published 12 ಮೇ 2024, 18:32 IST
Last Updated 12 ಮೇ 2024, 18:32 IST
ಅಕ್ಷರ ಗಾತ್ರ

ಮಂಗಳೂರು/ಮೈಸೂರು: ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಭಾನುವಾರ ಉತ್ತಮ ಮಳೆಯಾಗಿದ್ದರೆ ದಕ್ಷಿಣ ಕನ್ನಡದ ಕೆಲವೆಡೆ ಸಾಮಾನ್ಯ ಮಳೆಯಾಗಿದೆ. 

ಮೈಸೂರು ಸುತ್ತಮುತ್ತ ಹಾಗೂ ಹಾಸನ ಜಿಲ್ಲೆಯಾದ್ಯಂತ ಭಾನುವಾರ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಉತ್ತಮ ಮಳೆ ಸುರಿದಿದ್ದು, ರೈತರ ನಿರೀಕ್ಷೆಗಳು ಗರಿಗೆದರಿವೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕಳಸ, ಎನ್‌.ಆರ್‌.ಪುರ ಮತ್ತು ಕೊಪ್ಪ ತಾಲ್ಲೂಕು ವ್ಯಾಪ್ತಿಯಲ್ಲಿ ಭಾನುವಾರ ಉತ್ತಮ ಮಳೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲ್ಲೂಕಿನ ವಿವಿಧೆಡೆ ಭಾನುವಾರ ಮಧ್ಯಾಹ್ನ ಗುಡುಗು ಸಹಿತ ಮಳೆಯಾಗಿದೆ. ಪುತ್ತೂರು ತಾಲ್ಲೂಕಿನಲ್ಲಿ ಸಂಜೆ ಗುಡುಗು, ಗಾಳಿಯೊಂದಿಗೆ ಭಾರಿ ಮಳೆಯಾಗಿದ್ದು, ಮರ ಬಿದ್ದು ಮನೆಗೆ ಹಾನಿಯಾಗಿದೆ.

ಮೈಸೂರು ನಗರದ ಹೊರವಲಯದಲ್ಲಿ ಹಾಗೂ ಹಾಸನ, ಅರಸೀಕೆರೆ, ಅರಕಲಗೂಡು, ಚನ್ನರಾಯಪಟ್ಟಣದಲ್ಲಿ ಹದ ಮಳೆಯಾಗಿದೆ. ಹಳೇಬೀಡು, ಬೇಲೂರು, ಕೊಣನೂರಿನ ಸುತ್ತ ಸಾಧಾರಣ ಮಳೆ ಸುರಿದಿದೆ.

ಸಕಲೇಶಪುರ ತಾಲ್ಲೂಕಿನಲ್ಲೂ ಉತ್ತಮ ಮಳೆಯಾಗಿದ್ದು, ತಾಲ್ಲೂಕಿನ ಹೆಗ್ಗೋವೆ, ಆದರವಳ್ಳಿಯಲ್ಲಿ ಮರ ಹಾಗೂ ವಿದ್ಯುತ್ ಕಂಬ ನೆಲಕ್ಕುರುಳಿವೆ.

ಬೆಳಗಾವಿ ವರದಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಭಾನುವಾರವೂ ಉತ್ತಮ ಮಳೆ ಸುರಿಯಿತು. ಸತತ ಎರಡನೇ ದಿನವೂ ಗುಡುಗು–ಮಿಂಚು ಸಹಿತವಾಗಿ ವರುಣ ಅಬ್ಬರಿಸಿದ್ದರಿಂದ ವಾತಾವರಣ ತಂಪೇರಿತು. ಬೆಳಿಗ್ಗೆಯಿಂದ ಮೋಡ ಕವಿದಿತ್ತು. ಸಂಜೆ ಒಂದು ತಾಸಿಗೂ ಅಧಿಕ ಉತ್ತಮ ಮಳೆ ಸುರಿಯಿತು

ಕಲಬುರಗಿ ವರದಿ: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲ್ಲೂಕಿನ ಹಲವೆಡೆ ಹಾಗೂ ಬೀದರ್ ಜಿಲ್ಲೆಯಾದ್ಯಂತ ಭಾನುವಾರ ಗುಡುಗು, ಸಿಡಿಲು ಸಹಿತ ಮಳೆಯಾಗಿದ್ದು, ವಾತಾವರಣ ತಂಪಾಗಿದೆ.

ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಬಿಸಿಲು ಹೆಚ್ಚಿತ್ತು. ಮಧ್ಯಾಹ್ನದ ನಂತರ ಏಕಾಏಕಿ ಕಾರ್ಮೋಡ ಕವಿದು, ಭಾರಿ ಗುಡುಗಿನ ಸದ್ದಿನೊಂದಿಗೆ ಮಳೆಯಾಯಿತು. ಸಂಜೆಯವರೆಗೆ ಬಿಟ್ಟು ಬಿಟ್ಟು ಮಳೆ ಸುರಿಯಿತು. ಬಿಸಿಲಿನ ಝಳ ದೂರವಾಗಿ ತಂಗಾಳಿ ಬೀಸಲಾರಂಭಿಸಿತು.

ಹುಬ್ಬಳ್ಳಿ ವರದಿ:  ಹೊಸಪೇಟೆ ನಗರ, ತಾಲ್ಲೂಕು ಹಾಗೂ ಜಿಲ್ಲೆಯ ಕೆಲವೆಡೆ ಶನಿವಾರ ರಾತ್ರಿ ರಭಸದ ಮಳೆ ಸುರಿದಿದೆ.

ಎರಡು ಸಾವು: ವಿಜಯನಗರಜಿಲ್ಲೆಯ ಹರಪನಹಳ್ಳಿ  ತಾಲ್ಲೂಕಿನ ಅಡವಿಮಲ್ಲಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಚೌಡಪ್ಪ (33) ಮೃತಪಟ್ಟಿದ್ದಾರೆ. ರಾತ್ರಿ ಮೇವಿನ ಬಣವೆಗೆ ಹೊದಿಕೆ ಹಾಕುತ್ತಿದ್ದಾಗ ಅವರ ಮೇಲೆ ಸಿಡಿಲು ಎರಗಿದೆ.

ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್‌.ಪುರ ತಾಲ್ಲೂಕಿನ ಕಾನೂರು ಗ್ರಾ.ಪಂ. ವ್ಯಾಪ್ತಿಯ ಕಟ್ಟಿನಮನೆ ಎಂಬಲ್ಲಿ ಮರವೊಂದು ಕಾರಿನ ಮೇಲೆ ಬಿದ್ದು, ಕಾರಿನಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ಇನ್ನೊಂದೆಡೆ ಮಾರ್ಗದಲ್ಲಿ ನಡೆದುಕೊಂಡು ಹೋಗುತ್ತಿದ್ದ ಕೊಪ್ಪದ ಸುನೀತಾ (48) ಎಂಬವರ ಮೇಲೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT