ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವೆಗಳ ನಿವೇದನಾ ಗುಣಮಟ್ಟ ಕ್ಷೀಣ: ಹೈಕೋರ್ಟ್ ಕಳವಳ

Published 22 ನವೆಂಬರ್ 2023, 16:48 IST
Last Updated 22 ನವೆಂಬರ್ 2023, 16:48 IST
ಅಕ್ಷರ ಗಾತ್ರ

ಬೆಂಗಳೂರು: ‘ವಕೀಲರು ಕೋರ್ಟ್‌ಗೆ ಸಲ್ಲಿಸುವ ವಕಾಲತ್ತುಗಳಲ್ಲಿನ ನಿವೇದನೆಯ ಪ್ರತಿಪಾದನಾ ಗುಣಮಟ್ಟ ಇತ್ತೀಚೆಗೆ ಕುಸಿಯುತ್ತಿದೆ’ ಎಂದು ಹೈಕೋರ್ಟ್‌ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಎಲ್‌ಒಸಿ (ಲುಕ್‌ ಔಟ್‌ ಸರ್ಕ್ಯುಲರ್‌) ಹಿಂಪಡೆದು ವಿದೇಶ ಪ್ರವಾಸ ಕೈಗೊಳ್ಳಲು ಅನುವಾಗುವಂತೆ ವಲಸೆ ಅಧಿಕಾರಿಗಳಿಗೆ ನಿರ್ದೇಶಿಸಬೇಕು’ ಎಂದು ಕೋರಲಾದ  ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಕೃಷ್ಣ ಎಸ್‌.ದೀಕ್ಷಿತ್‌ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಕರಣದಲ್ಲಿ ಹಾಜರಾಗಿದ್ದ ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನು ಉದ್ದೇಶಿಸಿದ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್‌ ಅವರು, ‘ಇಂದಿನ ದಿನಮಾನಗಳಲ್ಲಿ ಸಾಕಷ್ಟು ದಾವೆಗಳ ಕೋರಿಕೆಗಳಲ್ಲಿ ಗುಣಮಟ್ಟ ಕ್ಷೀಣಿಸುತ್ತಿದೆ. ಇದರಿಂದ ವಕೀಲರ ವಾದ ಪರಿಣಾಮಕಾರಿ ಎನಿಸುತ್ತಿಲ್ಲ. ಹಾಗೆಂದು ಇದನ್ನೆಲ್ಲಾ ಹಿರಿಯ ವಕೀಲರು ಸುಧಾರಿಸಲಾಗದು. ಏಕೆಂದರೆ, ಅವರು ಪ್ರಕರಣಗಳ ವಕಾಲತ್ತು ವಹಿಸಿದ ಕಿರಿಯ ವಕೀಲರ ಕ್ಲುಪ್ತ ಮಾಹಿತಿ ಆಧರಿಸಿ ವಾದ ಮಂಡಿಸಬೇಕಾಗುತ್ತದೆ’ ಎಂದರು.

‘ಈ ವಿಷಯದ ಬಗ್ಗೆ ನಾನು ಮುಕ್ತ ನ್ಯಾಯಾಲಯದಲ್ಲಿ ಪದೇಪದೇ ಹೇಳುತ್ತಲೇ ಬರುತ್ತಿದ್ದೇನೆ. ಪ್ರತಿಬಾರಿಯೂ ಕಳಪೆ ವಕಾಲತ್ತುಗಳನ್ನು ಗಮನಿಸಿದಾಗ ನನಗೆ ಈ ಅಂಶವನ್ನು ಹೇಳದೇ ಇರಲು ಆಗುತ್ತಿಲ್ಲ. ಆದಾಗ್ಯೂ, ಈ ಮಾತಿಗೆ ಅಪವಾದ ಎಂಬಂತಹ ಬಹಳಷ್ಟು ವಕೀಲರಿದ್ದಾರೆ. ಈ ದಾವೆಯಲ್ಲಿ ಪ್ರತಿವಾದಿ ಬ್ಯಾಂಕ್‌ಗಳನ್ನು ಪ್ರತಿನಿಧಿಸಿರುವ ವಕೀಲ ಮನು ಕುಲಕರ್ಣಿ ಅವರ ದಾವೆಯ ನಿವೇದನೆ ಬಗ್ಗೆ ಖುಷಿಯಿದೆ’ ಎಂದು ಶ್ಲಾಘಿಸಿದರು.

‘ನಿವೇದನೆಗಳಲ್ಲಿ ಕಿರಿಯ ವಕೀಲರ ಸಂಶೋಧನಾ ಪ್ರವೃತ್ತಿ ಸೃಜನಾತ್ಮಕ ಸ್ಪರ್ಶವಿಲ್ಲದೆ ಸೊರಗುತ್ತಿದೆ. ನಿವೇದನೆಯನ್ನು ಸರಿಯಾಗಿ ಪ್ರಸ್ತುತಪಡಿಸಲಿಲ್ಲ ಎಂದರೆ ನೀವು ಕಕ್ಷಿದಾರರನ್ನು ಹೇಗೆ ರಕ್ಷಿಸುತ್ತೀರಿ’ ಎಂದು ಕಿರಿಯ ವಕೀಲರನ್ನು ಪ್ರಶ್ನಿಸಿದ ಅವರು, ‘ವಕೀಲರು ಜನರ ಮೂಲಭೂತ ಹಕ್ಕುಗಳ ರಕ್ಷಕರಾಗಿ ವಾದ ಮಂಡಿಸುವ ಜೊತೆ ಜೊತೆಗೇ ದಾವೆಯ ನಿವೇದನಾ ಮಿತಿಗೆ ಒಳಪಟ್ಟಿರಬೇಕಾಗುತ್ತದೆ. ಇಲ್ಲಿ ಸಂಘರ್ಷವಿರುತ್ತದೆ. ಹೀಗಾಗಿ, ಜನರ ಸಾಂವಿಧಾನಿಕ ಹಕ್ಕುಗಳ ರಕ್ಷಕನಾದ ನ್ಯಾಯಾಲಯದ ಪ್ರಯತ್ನ ಋಣಾತ್ಮಕವಾಗಿರಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಕೀಲ ವೃಂದದ (ಬಾರ್‌) ಗುಣಮಟ್ಟ ಸುಧಾರಿಸುವ ಅವಶ್ಯಕತೆ ಇದೆ’  ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT