ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಾರ್ಟ್‌ಮೆಂಟ್‌ ನಿರ್ವಹಣೆ ಸಂಘ; ಸೊಸೈಟಿ ಕಾಯ್ದೆಯಡಿ ನೋಂದಣಿ ಸಲ್ಲ –ಹೈಕೋರ್ಟ್‌

Published 7 ಮಾರ್ಚ್ 2024, 16:00 IST
Last Updated 7 ಮಾರ್ಚ್ 2024, 16:00 IST
ಅಕ್ಷರ ಗಾತ್ರ

ಬೆಂಗಳೂರು: ‘ವಸತಿ ಫ್ಲಾಟ್‌ಗಳನ್ನು ಹೊಂದಿದ ಅಪಾರ್ಟ್‌ಮೆಂಟ್ ಸಂಕೀರ್ಣದ ನಿರ್ವಹಣೆಗಾಗಿ ಅವುಗಳ ಮಾಲೀಕರು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ (ನಿರ್ಮಾಣ ಉತ್ತೇಜನ, ಮಾರಾಟ, ನಿರ್ವಹಣೆ ಮತ್ತು ವರ್ಗಾವಣೆ ನಿಯಂತ್ರಣ) ಕಾಯ್ದೆ–1972ರ ಅಡಿಯಲ್ಲಿ ಮಾತ್ರವೇ ತಮ್ಮ ಸಂಘವನ್ನು ನೋಂದಣಿ ಮಾಡಿಕೊಳ್ಳಬೇಕು’ ಎಂದು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಕೆಂಗೇರಿಯ ಕೊಮ್ಮಘಟ್ಟ ಮುಖ್ಯ ರಸ್ತೆಯಲ್ಲಿರುವ ಎಸ್‌ಎಂವಿ ಲೇ ಔಟ್‌ನಲ್ಲಿರುವ, ‘ಡಿ.ಎಸ್‌–ಮ್ಯಾಕ್ಸ್‌ ಸ್ಟಾರ್‌ನೆಸ್ಟ್‌ ಅಪಾರ್ಟ್‌ಮೆಂಟ್‌’ನ ಆರ್‌.ಅರುಣ್‌ಕುಮಾರ್‌ ಸೇರಿದಂತೆ ಒಟ್ಟು 13 ಮಾಲೀಕರು ಸಲ್ಲಿಸಿದ್ದ ರಿಟ್‌ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ, ‘ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ–1959ರಡಿ ನೋಂದಣಿ ಮಾಡಿಸುವುದು ಅನುಮತಿ ಯೋಗ್ಯವಲ್ಲ’ ಎಂದು ಸ್ಪಷ್ಟಪಡಿಸಿದೆ.

‘ಅರ್ಜಿದಾರರು ಸಂಘವನ್ನು ನೋಂದಣಿ ಮಾಡಿಕೊಳ್ಳಲು ಬಿಲ್ಡರ್‌ ಮತ್ತು ಪ್ರಕರಣದ ಪ್ರತಿವಾದಿಗಳು ಸಹಕಾರ ನೀಡಬೇಕು’ ಎಂದು ನಿರ್ದೇಶಿಸಿರುವ ನ್ಯಾಯಪೀಠ, ಸೊಸೈಟಿ ಕಾಯ್ದೆಯಡಿ ಸಂಘದ ನೋಂದಣಿಗೆ ಸಹಕಾರ ಸಂಘಗಳ ರಿಜಿಸ್ಟ್ರಾರ್‌ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದೆ.

‘ಅರ್ಜಿದಾರರದು ವಸತಿ ಸಂಕೀರ್ಣದ ಯೋಜನೆ. ಇವರ ಜಾಗದಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಯ ಉದ್ದೇಶವಿಲ್ಲ. ಫ್ಲಾಟ್‌ಗಳನ್ನು ಖರೀದಿಸಿದವರಿಗೆ ನೀಡಲಾಗಿರುವ ಕ್ರಯಪತ್ರಗಳಲ್ಲೂ, ಅವುಗಳನ್ನು ಕರ್ನಾಟಕ ಅಪಾರ್ಟ್‌ಮೆಂಟ್ ಮಾಲೀಕತ್ವ ಕಾಯ್ದೆ–1972ರ ಅಡಿಯಲ್ಲೇ (ಕೆಎಒ) ನೋಂದಣಿ ಮಾಡಿಕೊಡಲಾಗಿದೆ. ಹಾಗಾಗಿ, ಫ್ಲಾಟ್‌ಗಳ ನಿರ್ವಹಣೆಯನ್ನು ಕೈಗೊಳ್ಳಲು ಅರ್ಜಿದಾರರು ಹಾಗೂ ಉದ್ದೇಶಿತ ಸಂಘದ ಸದಸ್ಯರು ತಮ್ಮ ಅಸೋಸಿಯೇಷನ್ (ಸಂಘ) ಅನ್ನು 1972ರ ಕೆಎಒ ಕಾಯ್ದೆ ಅನ್ವಯವೇ ನೋಂದಣಿ ಮಾಡಿಸಬೇಕಾಗುತ್ತದೆ’ ಎಂದು ನ್ಯಾಯಪೀಠ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT