ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರ್ಯಾಚ್ಯುಟಿಗೆ ದಿನಗುತ್ತಿಗೆ ಅವಧಿಯೂ ಅರ್ಹ: ಹೈಕೋರ್ಟ್

Published 1 ಜನವರಿ 2024, 16:37 IST
Last Updated 1 ಜನವರಿ 2024, 16:37 IST
ಅಕ್ಷರ ಗಾತ್ರ

ಬೆಂಗಳೂರು: ‘ಸರ್ಕಾರಿ ಸೇವೆ ಕಾಯಂಗೊಳ್ಳುವುದಕ್ಕೂ ಮುನ್ನ ಉದ್ಯೋಗಿಯು ದಿನಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿದ್ದರೆ ಅಂತಹ ಅವಧಿಗೂ ಗ್ರ್ಯಾಚ್ಯುಟಿ ಪಾವತಿಸಬೇಕು‘ ಎಂದು ಹೈಕೋರ್ಟ್ ಆದೇಶಿಸಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ ಬಸವೇಗೌಡ (75) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

‘ಗ್ರ್ಯಾಚ್ಯುಟಿ ಪಾವತಿ ಕಾಯ್ದೆ–1972ರ ಅನುಸಾರ ಕಾಯಂ ನೌಕರ ಮತ್ತು ಗುತ್ತಿಗೆ ಅಡಿ ಕಾರ್ಯ ನಿರ್ವಹಿಸುವ ಸರ್ಕಾರಿ ನೌಕರನ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಹೀಗಾಗಿ, ಅರ್ಜಿದಾರರಿಗೆ ನಾಲ್ಕು ವಾರಗಳಲ್ಲಿ ಬಾಕಿ ಗ್ರ್ಯಾಚ್ಯುಟಿ ಹಣಕ್ಕೆ ₹ 50 ಸಾವಿರ ವ್ಯಾಜ್ಯದ ವೆಚ್ಚವೂ ಸೇರಿದಂತೆ ಒಟ್ಟು ₹ 2.44 ಲಕ್ಷ ಪಾವತಿ ಮಾಡಬೇಕು‘ ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಪ್ರಕರಣವೇನು?: ಅರ್ಜಿದಾರರು ಮಂಡ್ಯ ಜಿಲ್ಲೆಯ ಜಿ.ಮಲ್ಲಿಗೆರೆ ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಗುತ್ತಿಗೆ ಆಧಾರದಡಿ ‘ಡಿ‘ ದರ್ಜೆ ಉದ್ಯೋಗಿಯಾಗಿ 1971ರಲ್ಲಿ ನೇಮಕಗೊಂಡಿದ್ದರು. ಸರ್ಕಾರ ಅವರ ಸೇವೆಯನ್ನು 1990 ರಲ್ಲಿ ಕಾಯಂಗೊಳಿಸಿ ಶಿಕ್ಷಕ ಹುದ್ದೆ ನೀಡಿತ್ತು. ಅವರು 2013ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದ್ದರು.

ಸೇವೆ ಕಾಯಂ ಆದ ದಿನದಿಂದ ಅಂದರೆ, 1990 ರಿಂದ 2013ರ ಮಧ್ಯದ ಅವಧಿಯನ್ನು ಮಾತ್ರವೇ ಪರಿಗಣಿಸಿದ್ದ ಸರ್ಕಾರ ₹ 1.92 ಲಕ್ಷ ಗ್ರ್ಯಾಚ್ಯುಟಿ ಪಾವತಿ ಮಾಡಿತ್ತು. ಸೇವೆ ಕಾಯಂಗೊಳ್ಳುವುದಕ್ಕೂ ಮೊದಲಿನ ಅಂದರೆ 1971ರಿಂದ 1999ರ ಮಧ್ಯದಲ್ಲಿ ಮಾಡಿದ ದಿನಗುತ್ತಿಗೆ ಆಧಾರದಡಿಯ ಕೆಲಸಕ್ಕೆ ಗ್ರ್ಯಾಚ್ಯುಟಿ ಪಾವತಿಸಲು ನಿರಾಕರಿಸಿತ್ತು. ಇದನ್ನು ಪ್ರಶ್ನಿಸಿ ಬಸವೇಗೌಡ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT