ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಲ ಧಗೆ: ವಿಚಾರಣಾ ಕೋರ್ಟ್‌ ವಕೀಲರ ಕೋಟ್‌ಗೆ ಹೈಕೋರ್ಟ್ ವಿನಾಯಿತಿ

Published 16 ಏಪ್ರಿಲ್ 2024, 14:11 IST
Last Updated 16 ಏಪ್ರಿಲ್ 2024, 14:11 IST
ಅಕ್ಷರ ಗಾತ್ರ

ಬೆಂಗಳೂರು: ‘ಜನಸಾಮಾನ್ಯರು ಧಗೆಯ ದಿನಗಳ ತಾಪದಲ್ಲಿ ತತ್ತರಿಸುತ್ತಿರುವ ಬೆನ್ನಲ್ಲೇ, ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರು ಕೋಟ್‌ ಧರಿಸಿ ನ್ಯಾಯಾಲಯಗಳಿಗೆ ಹಾಜರಾಗುವುದರಿಂದ ವಿನಾಯಿತಿ ನೀಡಲು ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಸಮ್ಮತಿ ಸೂಚಿಸಿದ್ದಾರೆ’ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ತಿಳಿಸಿದರು.

ಕೇವಲ ಎರಡು ಗಂಟೆಗಳ ಕಾಲ ಕರ್ನಾಟಕ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸಿದ ಅನಿಲ್‌ ಬಿ.ಕಟ್ಟಿ ಅವರಿಗೆ ಮಂಗಳವಾರ ಹೈಕೋರ್ಟ್‌ನಲ್ಲಿ ನೀಡಲಾದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ಬೇಸಿಗೆ ದಿನಗಳು ಮುಗಿಯುವ ತನಕ ಈ ವಿನಾಯಿತಿಗೆ ಸಮ್ಮತಿ ದೊರೆತಿದೆ’ ಎಂದರು.

'ನ್ಯಾಯಾಂಗದಲ್ಲೂ ಪ್ರಾಮಾಣಿಕತೆ ಅಪರೂಪ ಎನ್ನುವಂತಾಗಿರುವ ಇಂದಿನ ದಿನಗಳಲ್ಲಿ ನ್ಯಾಯಮೂರ್ತಿ ಅನಿಲ್ ಬಿ.ಕಟ್ಟಿ ಅಂತಹವರ ನಿಸ್ಪೃಹ ಸೇವೆ ಮತ್ತು ಪ್ರಾಮಾಣಿಕತೆಯಿಂದ ನ್ಯಾಯಾಂಗದ ಘನತೆ ಜೀವಂತವಾಗಿದೆ. ಕಟ್ಟಿ ಅವರ ಸತ್ಯನಿಷ್ಠೆ, ಬದ್ಧತೆ ಮತ್ತು ಪ್ರಾಮಾಣಿಕತೆ ಶ್ಲಾಘನೀಯ’ ಎಂದರು.

ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ, ನ್ಯಾಯಮೂ‌ರ್ತಿ ಅನಿಲ್ ಬಿ.ಕಟ್ಟಿ, ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೂಳೂರು ಅರವಿಂದ ಕಾಮತ್‌ ಮಾತನಾಡಿದರು.

ಪರಿಚಯ: ಗ್ರಾಮೀಣ ಹಿನ್ನೆಲೆಯ ಕಟ್ಟಿ ಅವರು 1995ರಲ್ಲಿ ಮುನ್ಸೀಫ್‌ ಆಗಿ ನ್ಯಾಯಾಂಗ ಸೇವೆ ಆರಂಭಿಸಿದರು. ನಂತರ ವಿವಿಧೆಡೆ ಜಿಲ್ಲಾ ನ್ಯಾಯಾಧೀಶರಾಗಿ ಕೆಲಸ ನಿರ್ವಹಿಸಿದರು. ಬೆಂಗಳೂರು ನಗರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾಗಿ ನಿವೃತ್ತಿ ಹೊಂದಿದ ಮರುಗಳಿಗೆಯಲ್ಲೇ 2022ರ ಆಗಸ್ಟ್‌ 16ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿದರು. ಮಂಗಳವಾರ (ಏ.16) ಬೆಳಗ್ಗೆಯಷ್ಟೇ ಕಾಯಂ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. 

ಪ್ರಮಾಣ: ಈತನಕ ಹೆಚ್ಚುವರಿ ನ್ಯಾಯಮೂರ್ತಿಗಳಾಗಿದ್ದ ಸಿ.ಎಂ.ಪೂಣಚ್ಚ, ಚಂದ್ರಶೇಖರ್ ಮೃತ್ಯಂಜಯ ಜೋಶಿ, ಉಮೇಶ್ ಎಂ.ಅಡಿಗ ಮತ್ತು ಟಿ.ಜಿ.ಶಿವಶಂಕರೇ ಗೌಡ ಅವರ ನೇಮಕಾತಿ ಕಾಯಂಗೊಂಡ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ಅಂಜಾರಿಯಾ ಎಲ್ಲರಿಗೂ ಪ್ರಮಾಣ ವಚನ ಬೋಧಿಸಿದರು. 

ನ್ಯಾಯಮೂರ್ತಿ ಜಿ.ಬಸವರಾಜ ಅವರನ್ನು 2024ರ ಆಗಸ್ಟ್ 16ರಿಂದ ಅನ್ವಯವಾಗುವಂತೆ ಪುನಃ ಒಂದು ವರ್ಷ ಹೆಚ್ಚುವರಿ ನ್ಯಾಯಮೂರ್ತಿ ಹುದ್ದೆಯಲ್ಲಿ ಮುಂದುವರಿಸಲಾಗಿದೆ. 

ಕರ್ನಾಟಕ ಹೈಕೋರ್ಟ್‌ನ ಒಟ್ಟು ನ್ಯಾಯಮೂರ್ತಿಗಳ ಮಂಜೂರಾತಿ ಸಂಖ್ಯೆ 62. ಈತನಕ 50 ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದರು. ಅನಿಲ್ ಬಿ.ಕಟ್ಟಿ ಅವರ ನಿವೃತ್ತಿಯಿಂದಾಗಿ ಈ ಸಂಖ್ಯೆ ಈಗ 49ಕ್ಕೆ ಇಳಿದಿದೆ. ಇದೇ ವರ್ಷದ ಮೇ 31ಕ್ಕೆ ನ್ಯಾಯಮೂರ್ತಿ ರಾಜೇಂದ್ರ ಬಾದಾಮಿಕರ ನಿವೃತ್ತಿ ಹೊಂದಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT