ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CET: ಪಠ್ಯಕ್ಕೆ ಹೊರತಾದ ಪ್ರಶ್ನೆ ಕೈಬಿಡಲು ತೀರ್ಮಾನ

Published 29 ಏಪ್ರಿಲ್ 2024, 0:10 IST
Last Updated 29 ಏಪ್ರಿಲ್ 2024, 0:10 IST
ಅಕ್ಷರ ಗಾತ್ರ

ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆದಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು (ಸಿಇಟಿ) ಮತ್ತೆ ನಡೆಸುವ ಬದಲು, ಪಠ್ಯಕ್ಕೆ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನ ಪ್ರಕ್ರಿಯೆಯಿಂದ ಕೈಬಿಡಲು ಉನ್ನತ ಶಿಕ್ಷಣ ಇಲಾಖೆಯು ನಿರ್ಧರಿಸಿದೆ.

ಪಠ್ಯಕ್ಕೆ ಹೊರತಾದ ಪ್ರಶ್ನೆಗಳು ಎಷ್ಟು ಸೇರಿವೆ ಎನ್ನುವ ಮಾಹಿತಿ ನೀಡಲು ವಿಷಯವಾರು ತಲಾ ಮೂವರು ತಜ್ಞರಿದ್ದ ನಾಲ್ಕು ಸಮಿತಿಗಳನ್ನು ರಚಿಸಿ ಏಪ್ರಿಲ್‌ 22ರಂದು ಉನ್ನತ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಈ ಸಮಿತಿ ನೀಡಿದ್ದ ವರದಿಯನ್ನು ಆಧರಿಸಿ ಇಲಾಖೆ ಈ ಕ್ರಮ ತೆಗೆದುಕೊಂಡಿದೆ.

ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟು, 2023–24ರ ಪಠ್ಯಕ್ರಮದಿಂದ ಹೊರತಾದ ಪ್ರಶ್ನೆಗಳನ್ನು ಮೌಲ್ಯಮಾಪನದಿಂದ ಕೈಬಿಟ್ಟು, ಉಳಿದ ಪ್ರಶ್ನೆಗಳನ್ನು ಮಾತ್ರ ಪರಿಗಣಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ (ಕೆಇಎ) ನಿರ್ದೇಶನ ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಎಂ.ಎಸ್‌.ಶ್ರೀಕರ್‌ ತಿಳಿಸಿದ್ದಾರೆ.

ಕೆಇಎ ಏ.18 ಮತ್ತು 19ರಂದು ಸಿಇಟಿ ನಡೆಸಿತ್ತು. ಸುಮಾರು 3 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಪರೀಕ್ಷೆಯಲ್ಲಿ ಭೌತವಿಜ್ಞಾನ ವಿಷಯದ 9, ರಸಾಯನ ವಿಜ್ಞಾನ ಮತ್ತು ಗಣಿತ ವಿಷಯದ ತಲಾ 15, ಜೀವವಿಜ್ಞಾನ ವಿಷಯದ 11 ಪ್ರಶ್ನೆಗಳು ಪಠ್ಯಕ್ಕೆ ಹೊರತಾಗಿದ್ದವು ಎಂದೂ ಅವರು ತಿಳಿಸಿದ್ದಾರೆ.

ಪಿಯುಸಿ–2 ಮತ್ತು ಪಿಯುಸಿ–3 ಪರೀಕ್ಷೆಗಳು, ಕಾಮೆಡ್‌–ಕೆ,  ಜೆಇಇ ಮುಖ್ಯಪರೀಕ್ಷೆ, ನೀಟ್‌ ಸೇರಿ ವಿವಿಧ ಪರೀಕ್ಷೆಗಳು ಮೇ ಮತ್ತು ಜೂನ್‌ ತಿಂಗಳಲ್ಲಿ ನಡೆಯಲಿವೆ. ಸಿಇಟಿ ಮರು ಪರೀಕ್ಷೆ ನಡೆಸಿದರೆ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹೊರೆಯ ಜೊತೆಗೆ, ವೃತ್ತಿಪರ ಕೋರ್ಸ್‌ಗಳ ಶೈಕ್ಷಣಿಕ ವೇಳಾಪಟ್ಟಿಯ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಮರು ಪರೀಕ್ಷೆ ನಡೆಸದಿರಲು ತೀರ್ಮಾನಿಸಲಾಗಿದೆ ಎಂದೂ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT