ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಖಾಡಕ್ಕೆ ಇಳಿದ ಸಿದ್ದರಾಮಯ್ಯ: ತಣಿದ ಅತೃಪ್ತಿ

ವೇಣುಗೋಪಾಲ್ ನೇತೃತ್ವದಲ್ಲಿ ಮಹತ್ವದ ಸಭೆ ಇಂದು
Last Updated 26 ಡಿಸೆಂಬರ್ 2018, 5:38 IST
ಅಕ್ಷರ ಗಾತ್ರ

ದೆಹಲಿ/ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಸಚಿವ ಸಂಪುಟ ಪುನಾರಚನೆ ವೇಳೆ ಸಚಿವ ಸ್ಥಾನ ಸಿಗದೆ ಮುನಿಸಿಕೊಂಡಿರುವ ಶಾಸಕರನ್ನು ಸಮಾಧಾನಪಡಿಸಲು ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಅಧ್ಯಕ್ಷ ಸಿದ್ದರಾಮಯ್ಯ ಅಖಾಡಕ್ಕೆ ಇಳಿದಿದ್ದಾರೆ.

ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ, ಶಾಸಕರಾದ ಡಾ. ಕೆ.ಸುಧಾಕರ್‌, ಭೀಮಾ ನಾಯ್ಕ ಅವರನ್ನು ಮಂಗಳವಾರ ಕರೆಸಿ ಮನವೊಲಿಸಿದರು. ಸಂಪುಟ ಸೇರ್ಪಡೆ ಆಯ್ಕೆ ಮಾನದಂಡದ ಬಗ್ಗೆ ರಾಮಲಿಂಗಾ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು. ‘ರಾಜ್ಯದಲ್ಲಿ ಮೈತ್ರಿ ಸರ್ಕಾರ ಇದೆ. ಎಲ್ಲರಿಗೂ ಅವಕಾಶ ನೀಡಬೇಕಿದೆ. ಒಳ್ಳೆಯ ದಿನಗಳು ಬರಲಿವೆ. ಅಲ್ಲಿಯವರೆಗೆ ತಾಳ್ಮೆಯಿಂದ ಇರಿ’ ಎಂದು ಸಿದ್ದರಾಮಯ್ಯ ಸಮಾಧಾನಹೇಳಿದರು ಎಂದು ಗೊತ್ತಾಗಿದೆ.

ರಾಮಲಿಂಗಾ ರೆಡ್ಡಿ, ಶಾಮನೂರು ಶಿವಶಂಕರಪ್ಪ ಹಾಗೂ ಬಿ.ಸಿ.‍ಪಾಟೀಲ ಅವರನ್ನು ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಬುಧವಾರ ಕರೆಸಿ ಮಾತನಾಡುವ ಸಾಧ್ಯತೆ ಇದೆ.

ಸಚಿವ ಸ್ಥಾನ ಕಸಿದುಕೊಂಡಿದ್ದರಿಂದ ಸಿಟ್ಟಿಗೆದ್ದಿರುವ ರಮೇಶ ಜಾರಕಿಹೊಳಿ ಹಾಗೂ ಸಚಿವ ಸ್ಥಾನ ಕೈತಪ್ಪಿದ್ದರಿಂದ ಕೋಪಗೊಂಡಿರುವ ಬಿ.ಸಿ. ಪಾಟೀಲ ಅವರು ನಾಯಕರಿಂದ ಅಂತರ ಕಾಯ್ದುಕೊಂಡಿದ್ದಾರೆ. ಅತೃಪ್ತ ಶಾಸಕರ ಜತೆ ಚರ್ಚಿಸಿ ಮುಂದಿನ ಹೆಜ್ಜೆ ಇಡುವುದಾಗಿ ಪಾಟೀಲ ಹೇಳಿಕೊಂಡಿದ್ದಾರೆ.

ಅತೃಪ್ತಿಯ ಕಿಡಿಯಿಂದ ಸರ್ಕಾರಕ್ಕೇನೂ ಅಪಾಯ ಇಲ್ಲ ಎಂಬುದು ಪಕ್ಷದ ವರಿಷ್ಠರ ವಿಶ್ವಾಸ. ‘ಸಿದ್ದರಾಮಯ್ಯ ಅವರ ಬಹುತೇಕ ಸಲಹೆಗಳನ್ನು ಒಪ್ಪಿ ಸಂಪುಟ ವಿಸ್ತರಣೆ- ನಿಗಮ-ಮಂಡಳಿ ಅಧ್ಯಕ್ಷರ ನೇಮಕದ ಕಸರತ್ತು ಪೂರ್ಣಗೊಳಿಸಲಾಗಿದೆ. ಬಿಕ್ಕಟ್ಟುಗಳೇನಾದರೂ ಇದ್ದಲ್ಲಿ ಅವುಗಳನ್ನು ಅವರೇ ಬಗೆಹರಿಸಲಿದ್ದಾರೆ. ಅತೃಪ್ತ ಮುಖಂಡರೊಂದಿಗೆ ಮಾತಾಡಿ ಭಿನ್ನಮತವನ್ನು ಬಗೆಹರಿಸುವುದಾಗಿ ಸಿದ್ದರಾಮಯ್ಯ ಕೂಡ ವರಿಷ್ಠರಿಗೆ ಮಾತು ಕೊಟ್ಟಿದ್ದಾರೆ' ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

ಮುಂಬರುವ ಲೋಕಸಭಾ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ವರಿಷ್ಠರು, ಬಹುತೇಕ ಸಚಿವ ಹುದ್ದೆಗಳು ಮತ್ತು ನಿಗಮ ಮಂಡಳಿ ಅಧ್ಯಕ್ಷ ಸ್ಥಾನಗಳನ್ನು ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ-ಪಂಗಡ ಹಾಗೂ ಅಲ್ಪಸಂಖ್ಯಾತ ಕೋಮಿನ ಶಾಸಕರಿಗೆ ನೀಡಿದ್ದಾರೆ. ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂಬ ದೂರು ಬಾರದಂತೆ ಲಿಂಗಾಯತರೂ ಸೇರಿದಂತೆ ಆ ಭಾಗದ ಹಲವು ವರ್ಗಗಳ ಜನಪ್ರತಿನಿಧಿಗಳಿಗೆ ಸ್ಥಾನಮಾನ ಕಲ್ಪಿಸಿದ್ದಾರೆ. ಅಡ್ಡ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಲೋಕಸಭಾ ಚುನಾವಣೆಗಳ ನಂತರವೇ ಸಂಪುಟ ವಿಸ್ತರಣೆಯನ್ನು ನಡೆಸಬೇಕೆಂಬುದು ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್‌ನ ಉನ್ನತ ನಾಯಕರ ಇರಾದೆ ಆಗಿತ್ತು.

ಹೊರಗಿನವರಿಗೆ ಬೆಂಗಳೂರು ಹೊಣೆ: ರೆಡ್ಡಿ ಕಿಡಿ

ರಾಜಧಾನಿ ಕುರಿತು ಮಾಹಿತಿ ಇಲ್ಲದವರಿಗೆ ಬೆಂಗಳೂರಿನ ಜವಾಬ್ದಾರಿ ನೀಡಿದ್ದು ಸರಿಯೇ ಎಂದು ರಾಮಲಿಂಗಾ ರೆಡ್ಡಿ ಅವರು ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದ್ದಾರೆ.

‘ಮೇಯರ್‌ ಹುದ್ದೆ ಬಿಜೆಪಿ ಪಾಲಾಗದಂತೆ ತಡೆದಿದ್ದೇನೆ. ಗೊಂದಲ ಸೃಷ್ಟಿಯಾದಾಗ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡರ ಮನೆಗೆ ಹೋಗಲು ನಾನೇ ಬೇಕು. ಆಗ ಯಾವ ನಾಯಕರೂ ಬರಲಿಲ್ಲ. ನಗರದಲ್ಲಿ ಸಮಸ್ಯೆ ಉಲ್ಬಣಗೊಂಡಾಗ ಬಗೆಹರಿಸುವುದು ನಾನೇ. ಪಕ್ಷ ನಿಷ್ಠೆ ತೋರಿದ್ದಕ್ಕೆ ಈಗ ಫಲ ಸಿಕ್ಕಿದೆ’ ಎಂದು ಬೇಸರ ವ್ಯಕ್ತಪಡಿಸಿದರು ಎಂದು ಗೊತ್ತಾಗಿದೆ.

‘ಕಳೆದ ಸಂಪುಟದಲ್ಲಿ ಇದ್ದ ಹಿರಿಯರಿಗೆ ಸ್ಥಾನ ಇಲ್ಲ ಎಂಬ ಮಾನದಂಡದ ಕಾರಣ ನನ್ನನ್ನು ಪರಿಗಣಿಸಿಲ್ಲ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಉಳಿದ ಹಿರಿಯ ನಾಯಕರಿಗೆ ಸಚಿವ ಸ್ಥಾನ ನೀಡಿದ್ದು ಏಕೆ’ ಎಂದು ಅವರು ಕೇಳಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರೆಡ್ಡಿ, ‘ಕೆಲವು ಸಮಸ್ಯೆಗಳಿದ್ದವು. ಅವೆಲ್ಲ ಬಗೆಹರಿದಿವೆ. ಕಾಂಗ್ರೆಸ್‌ ಸರ್ಕಾರ ಇದ್ದಿದ್ದರೆ ಈ ಸಮಸ್ಯೆ ಬರುತ್ತಿರಲಿಲ್ಲ’ ಎಂದು ಪ್ರತಿಕ್ರಿಯಿಸಿದರು.

***

ಸಂ‍‍ಪುಟ ಪುನಾಚರಣೆ ವೇಳೆ ಸಾದರ ಲಿಂಗಾಯತರಿಗೆ ಅನ್ಯಾಯವಾಗಿದೆ. ಅತೃಪ್ತರ ಜತೆಗೆ ಸಮಾಲೋಚನೆ ನಡೆಸಿ ಮುಂದಿನ ನಡೆ ಇಡುತ್ತೇನೆ.
– ಬಿ.ಸಿ.‍ಪಾಟೀಲ, ಹಿರೇಕೆರೂರ ಶಾಸಕ

ನನ್ನದು ರಾಹುಲ್‌ ಗಾಂಧಿ, ಸಿದ್ದರಾಮಯ್ಯ ಗುಂಪು ಅಷ್ಟೇ. ಬೇರೆ ಯಾವ ಟೀಮ್‌ನಲ್ಲೂ ನಾನಿಲ್ಲ.
– ಡಾ .ಕೆ. ಸುಧಾಕರ್‌, ಚಿಕ್ಕಬಳ್ಳಾಪುರ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT