ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೆಪಿಎಸ್‌ಸಿ ಅಧ್ಯಕ್ಷ, ಸದಸ್ಯರ ಒತ್ತಡಕ್ಕೆ ಕಾರ್ಯದರ್ಶಿ ಪ್ರತಿತಂತ್ರ!

ಕಾನೂನು ಕೋಶದ ಮುಖ್ಯಸ್ಥ ಹುದ್ದೆ ನೇಮಕಾತಿ ಅಧಿಸೂಚನೆಯೇ ರದ್ದು
Published 10 ಜನವರಿ 2024, 21:21 IST
Last Updated 10 ಜನವರಿ 2024, 21:21 IST
ಅಕ್ಷರ ಗಾತ್ರ

ಬೆಂಗಳೂರು: ಕೆಪಿಎಸ್‌ಸಿ ಕಾನೂನು ಕೋಶದ ಮುಖ್ಯಸ್ಥ (ಎಚ್‌ಸಿಎಲ್‌) ಹುದ್ದೆಗೆ ಶಿಫಾರಸು ಮಾಡಿದ್ದ ಅಭ್ಯರ್ಥಿಯನ್ನು ನೇಮಿಸಿ ಆದೇಶ ಹೊರಡಿಸದಿದ್ದರೆ ಯಾವುದೇ ಆಯ್ಕೆ ಪಟ್ಟಿ ಅಥವಾ ಕಡತಕ್ಕೆ ಅನುಮೋದನೆ ನೀಡುವುದಿಲ್ಲವೆಂಬ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರ ಒತ್ತಡಕ್ಕೆ ಸಡ್ಡು ಹೊಡೆದಿರುವ ಕಾರ್ಯದರ್ಶಿ, ಆ ನೇಮಕಾತಿ ಅಧಿಸೂಚನೆಯನ್ನೇ ರದ್ದುಪಡಿಸಿ ಹೊಸ ಅಧಿಸೂಚನೆ ಹೊರಡಿಸಿದ್ದಾರೆ.

‘ಎಚ್‌ಸಿಎಲ್‌ ನೇಮಕಾತಿ ವಿಷಯ ಇತ್ಯರ್ಥ ಆಗುವವರೆಗೆ ಯಾವುದೇ ಆಯ್ಕೆ ಪಟ್ಟಿ ಅಥವಾ ಕಡತವನ್ನು ಆಯೋಗಕ್ಕೆ ಸಲ್ಲಿಸಬಾರದು. ಆಯೋಗದ ಸೂಚನೆಯನ್ನು ಪದೇ ಪದೇ ನಿರ್ಲಕ್ಷಿಸುವುದು ಸರಿಯಾದ ಕ್ರಮವಲ್ಲ’ ಎಂದು ಸೂಚಿಸಿ ಕೆಪಿಎಸ್‌ಸಿ ಅಧ್ಯಕ್ಷ ಶಿವಶಂಕರಪ್ಪ ಎಸ್‌. ಸಾಹುಕಾರ ಅವರು ಕಾರ್ಯದರ್ಶಿ ಕೆ.ಎಸ್‌ ಲತಾಕುಮಾರಿ ಸಲ್ಲಿಸಿದ್ದ ಕಡತವನ್ನು ಇದೇ 8ರಂದು ಹಿಂದಿರುಗಿಸಿದ್ದರು. ಆ ಬೆನ್ನಲ್ಲೆ, ತಮಗಿರುವ ಅಧಿಕಾರ ಬಳಸಿ ಎಚ್‌ಸಿಎಲ್‌ ನೇಮಕಕ್ಕೆ ನ. 15ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಆಡಳಿತಾತ್ಮಕ ಕಾರಣ ನೀಡಿ ಕಾರ್ಯದರ್ಶಿ ಹಿಂಪಡೆದಿದ್ದಾರೆ.

ಆಯೋಗದ ಅಧ್ಯಕ್ಷರು ಮತ್ತು ಇಬ್ಬರು ಸದಸ್ಯರನ್ನು ಒಳಗೊಂಡ ಆಯ್ಕೆ ಸಮಿತಿಯು, ಎಚ್‌ಸಿಎಲ್‌ ಹುದ್ದೆಗೆ ಅರ್ಜಿ ಸಲ್ಲಿಸಿದ್ದ 10 ಮಂದಿಯನ್ನು ಸಂದರ್ಶನ ಮಾಡಿ ಒಬ್ಬರ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ, ಸಂದರ್ಶನಕ್ಕೆ ಆಯ್ಕೆಯಾದ ಎಲ್ಲ ಅಭ್ಯರ್ಥಿಗಳ ಮೌಲ್ಯಮಾಪನ, ನೀಡಿದ ಅಂಕಗಳ ಮಾಹಿತಿಯನ್ನು ನೀಡಿರಲಿಲ್ಲ. ಈ ಕಾರಣಕ್ಕೆ ನೇಮಕಾತಿ ಆದೇಶ ಹೊರಡಿಸದೆ ಶಿಫಾರಸು ಕಡತವನ್ನು ಕಾರ್ಯದರ್ಶಿ ವಾಪಸು ಮಾಡಿದ್ದರು.

ಇದನ್ನು ‘ಪ್ರತಿಷ್ಠೆ’ಯಾಗಿ ತೆಗೆದುಕೊಂಡ ಆಯೋಗದ ಆರು ಸದಸ್ಯರು, ಅಭ್ಯರ್ಥಿಗೆ ನೇಮಕಾತಿ ಆದೇಶ ಜಾರಿ ಮಾಡುವವರೆಗೂ ಆಯೋಗದ ಸಭೆಗಳಿಗೆ ಹಾಜರಾಗುವುದಿಲ್ಲವೆಂದೂ ಮತ್ತು ಆಯೋಗಕ್ಕೆ ಸಲ್ಲಿಕೆಯಾಗುವ ಯಾವುದೇ ಆಯ್ಕೆ ಪಟ್ಟಿಗಳಿಗೆ ಅನುಮೋದನೆ ನೀಡುವುದಿಲ್ಲ’ ಎಂದು ಅಧ್ಯಕ್ಷರಿಗೆ ಡಿ. 28ರಂದು ಪತ್ರ ನೀಡಿದ್ದರು. ಈ ಪತ್ರಕ್ಕೆ ಸದಸ್ಯರಾದ ವಿಜಯಕುಮಾರ್‌ ಡಿ. ಕುಚನೂರೆ, ಎಂ.ಬಿ. ಹೆಗ್ಗಣ್ಣವರ, ಡಾ. ಶಾಂತಾ ಹೊಸಮನಿ, ಡಾ.ಎಚ್‌.ಎಸ್‌. ನರೇಂದ್ರ, ಬಿ.ವಿ. ಗೀತಾ, ಮುಸ್ತಫಾ ಹುಸೇನ್‌ ಸಯ್ಯದ್‌ ಅಜೀಜ್‌ ಸಹಿ ಹಾಕಿದ್ದರು. 

‘ಎಚ್‌ಸಿಎಲ್‌ ಹುದ್ದೆಯ ಆಯ್ಕೆ ಪ್ರಕ್ರಿಯೆಗೂ ಇತರ ಕಡತಗಳ ನಿರ್ವಹಣೆಗೂ ಯಾವುದೇ ಸಂಬಂಧ ಇಲ್ಲದಿದ್ದರೂ ಎಚ್‌ಸಿಎಲ್‌ ಹುದ್ದೆಗೆ ನೇಮಕಾತಿ ಆದೇಶ ಹೊರಡಿಸುವವರೆಗೂ ಇತರ ಕಡತಗಳಿಗೆ ಅನುಮೋದನೆ ನೀಡುವುದಿಲ್ಲ. ಆಯೋಗದ ಸಭೆಗೆ ಹಾಜರಾಗುವುದಿಲ್ಲವೆಂದು ತಿಳಿಸಿರುವುದು ಕಾರ್ಯದರ್ಶಿಯ ಮೇಲೆ ಒತ್ತಡ ಹೇರುವ ಪ್ರಯತ್ನವಾಗಿದೆ. ಎಚ್‌ಸಿಎಲ್‌ ಹುದ್ದೆಯ ಸಂದರ್ಶನಕ್ಕೆ ಹಾಜರಾದವರ ಮೌಲ್ಯಮಾಪನ ಹಾಗೂ ಅಂಕಗಳ ಬಗೆಗಿನ ದಾಖಲೆಗಳನ್ನು ಕಾರ್ಯದರ್ಶಿಗೆ ನೀಡಿಲ್ಲ. ಮೇಲ್ನೋಟಕ್ಕೆ ನೇಮಕಾತಿ ಪಾರದರ್ಶಕವಾಗಿ ನಡೆದಿದೆ ಎಂದು ಸಾಬೀತುಪಡಿಸುವ ಯಾವುದೇ ದಾಖಲೆಗಳು ಲಭ್ಯ ಇಲ್ಲ’ ಎಂದು ಕೆಪಿಎಸ್‌ಸಿ ಮೂಲಗಳು ತಿಳಿಸಿವೆ.

‘ಅಸಾಂವಿಧಾನಿಕ ಆಯ್ಕೆ?

‘ಕಾನೂನು ಕೋಶದ ಮುಖ್ಯಸ್ಥರ ಆಯ್ಕೆಗೆ ಸಂಬಂಧಿಸಿದ ನಡಾವಳಿಯಲ್ಲಿ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದೇ ಇರುವುದರಿಂದ ಇದು ಅಸಾಂವಿಧಾನಿಕ ಆಯ್ಕೆ. ಆಯ್ಕೆ ಪ್ರಕ್ರಿಯೆಯಲ್ಲಿ ಆಗಿರುವ ಲೋಪಗಳನ್ನು ಆಯೋಗದ ಗಮನಕ್ಕೆ ತರಲು ಕಾರ್ಯದರ್ಶಿ ಪ್ರಯತ್ನಿಸಿದರೂ ಅದನ್ನು ಸರಿಪಡಿಸಿಕೊಳ್ಳುವ ಬದಲು ಆಯೋಗದ ಸಭೆಗಳಲ್ಲಿ ಮತ್ತು ಕಡತಗಳ ಮುಖಾಂತರ ಅನಗತ್ಯ ಒತ್ತಡ‌ ಹೇರಲಾಗಿದೆ. ಈ ಎಲ್ಲ ಅಂಶಗಳನ್ನು ಪರಿಶೀಲಿಸಿ ಎಚ್‌ಸಿಎಲ್‌ ಹುದ್ದೆಯ ನೇಮಕಾತಿಗೆ ಮರು ಅಧಿಸೂಚನೆ ಹೊರಡಿಸಲಾಗಿದೆ’ ಎಂದು ಕೆಪಿಎಸ್‌ಸಿ ಮೂಲಗಳು ಹೇಳಿವೆ.

ಕಾನೂನು ಕೋಶದ ಮುಖ್ಯಸ್ಥರ ಹುದ್ದೆಗೆ ಪಾರದರ್ಶಕವಾಗಿ ಮತ್ತು ನಿಯಮಾನುಸಾರವಾಗಿ ನೇಮಕಾತಿ ನಡೆಸಲು ಹೊಸತಾಗಿ ಅಧಿಸೂಚನೆ ಹೊರಡಿಸಲಾಗಿದೆ.

–ಕೆ.ಎಸ್‌. ಲತಾಕುಮಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT