ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಾರಣ್ಣನ ಪೆನ್‌ಡ್ರೈವ್‌ನಲ್ಲಿ ಏನಿತ್ತು ಅಂತ ಗೊತ್ತಾಯ್ತು: ಡಿ.ಕೆ.ಶಿವಕುಮಾರ್‌

Published 27 ಏಪ್ರಿಲ್ 2024, 15:57 IST
Last Updated 27 ಏಪ್ರಿಲ್ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಮಾರಸ್ವಾಮಿ ಅವರು ಮಾಧ್ಯಮಗಳ ಮುಂದೆ ತೋರಿಸಿ, ತಮ್ಮ ಜೇಬಿನಲ್ಲಿ ಇಟ್ಟುಕೊಂಡಿದ್ದ ಪೆನ್ ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಗೊತ್ತಾಯಿತು’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವ್ಯಂಗ್ಯವಾಗಿ ಹೇಳಿದರು.

‘ಹಾಸನದ ಪ್ರಭಾವಿ ನಾಯಕರೊಬ್ಬರ ಲೈಂಗಿಕ ಹಗರಣ ಆರೋಪ ಹೊರ ಬರುತ್ತಿದ್ದು, ಈ ಪ್ರಕರಣವನ್ನು ಎಸ್ಐಟಿಗೆ ವಹಿಸುವಂತೆ ಮುಖ್ಯಮಂತ್ರಿಗೆ ರಾಜ್ಯ ಮಹಿಳಾ ಆಯೋಗ ಪತ್ರ ಬರೆದಿರುವ ಬಗ್ಗೆ’ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಪೆನ್ ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಚೆನ್ನಾಗಿ ಗೊತ್ತು. ಉತ್ತರಿಸಲು ಅವರೇ ಸೂಕ್ತ ವ್ಯಕ್ತಿ’ ಎಂದರು.

‘ಮಾಧ್ಯಮಗಳು ಈ ಹಗರಣದ ವಿಚಾರದಲ್ಲಿ ಸುಳ್ಳು ಹೇಳುತ್ತಿವೆ. ಅದು ಕೇವಲ ಹಾಸನದ ನಾಯಕನದಲ್ಲ. ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಕೂಟದ ಅಭ್ಯರ್ಥಿಯದ್ದು, ಸಂಸದನದ್ದು. ಹೀಗಾಗಿ ಈ ವಿಚಾರವಾಗಿ ಪ್ರಧಾನಿ, ವಿಜಯೇಂದ್ರ, ಶೋಭಕ್ಕ, ಅಶೋಕ, ಕುಮಾರಣ್ಣ, ಗಂಡಸ್ಥನದ ಬಗ್ಗೆ ಮಾತನಾಡುತ್ತಿದ್ದ ಅಶ್ವತ್ಥನಾರಾಯಣ ಉತ್ತರಿಸಬೇಕು. ತಮ್ಮ ಹೆಸರಿಗೆ ಮಸಿ ಬಳಿಯಲು ಈ ರೀತಿ ಮಾತನಾಡುತ್ತಿದ್ದಾರೆ ಎಂದು ಅವರೇ ದೂರು ಕೊಟ್ಟಿದ್ದಾರೆ. ಇದೆಲ್ಲವನ್ನು ಗಮನಿಸಿ ಮುಖ್ಯಮಂತ್ರಿ ಮತ್ತು ಗೃಹ ಸಚಿವರಿಗೆ ಮಹಿಳಾ ಆಯೋಗದ ಅಧ್ಯಕ್ಷರು ಪತ್ರ ಬರೆದಿದ್ದಾರೆ. ಈ ವಿಚಾರದಲ್ಲಿ ನೀವು (ಮಾಧ್ಯಮದವರು) ಬೆಳಕು ಚೆಲ್ಲಬೇಕು’ ಎಂದರು.

‘ಎಸ್ಐಟಿ ತನಿಖೆ ಬಗ್ಗೆ ಸರ್ಕಾರದ ನಿಲುವೇನು’ ಎಂದು ಕೇಳಿದಾಗ, ‘ಮುಖ್ಯಮಂತ್ರಿ, ಗೃಹ ಸಚಿವರನ್ನು ಈ ಬಗ್ಗೆ ಕೇಳಬೇಕು’ ಎಂದರು.

‘ಸಂತ್ರಸ್ತ ಮಹಿಳೆಯರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆಯೇ’ ಎಂಬ ಪ್ರಶ್ನೆಗೆ, ‘ನಮ್ಮ ಆತ್ಮಸಾಕ್ಷಿಗಾದರೂ ನಾವು ಕೆಲಸ ಮಾಡಬೇಕಲ್ಲವೇ. ಇಬ್ಬರು ಸಂತ್ರಸ್ತೆಯರು ಡಿ.ಜಿ ಅವರಿಗೆ ದೂರು ನೀಡಿರುವ ಮಾಹಿತಿ ನನಗೆ ಇಲ್ಲ’ ಎಂದೂ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT