ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಪುನರ್‌ರಚನೆ ಪ್ರಸ್ತಾವ ಇಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ

Published 20 ಮೇ 2024, 10:06 IST
Last Updated 20 ಮೇ 2024, 10:06 IST
ಅಕ್ಷರ ಗಾತ್ರ

ಬೆಂಗಳೂರು: ಸಂಪುಟ ಪುನರ್‌ರಚನೆ ಪ್ರಸ್ತಾವ ಸದ್ಯ ತಮ್ಮ ಮುಂದಿಲ್ಲ. ಆ ರೀತಿ ಯಾವುದೇ ಚರ್ಚೆಯೂ ನಡೆದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರು ಪ್ರೆಸ್‌ ಕ್ಲಬ್‌ನಲ್ಲಿ ಸೋಮವಾರ ನಡೆದ ಮಾಧ್ಯಮ ಸಂವಾದದಲ್ಲಿ, ‘ಲೋಕಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ಬಳಿಕ ಸಂಪುಟ ಪುನರ್‌ರಚನೆ ಆಗಲಿದೆಯೆ’ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಆ ರೀತಿಯ ಆಲೋಚನೆ ಇಲ್ಲ. ನಮ್ಮದು ಹೈಕಮಾಂಡ್‌ ನಿರ್ಧಾರದಂತೆ ನಡೆಯುವ ಪಕ್ಷ. ಹೈಕಮಾಂಡ್‌ ಯಾವ ಸೂಚನೆ ನೀಡುತ್ತದೆಯೊ ಆ ರೀತಿ ಮಾಡುತ್ತೇವೆ’ ಎಂದರು.

‘ಭ್ರಷ್ಟಾಚಾರ ತೊಲಗಿದೆ ಎನ್ನುವುದಿಲ್ಲ’

‘ಬಿಜೆಪಿ ನೇತೃತ್ವದ ಹಿಂದಿನ ಸರ್ಕಾರದ ವಿರುದ್ಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಶೇಕಡ 40ರಷ್ಟು ಕಮಿಷನ್‌ ಆರೋಪ ಮಾಡಿದ್ದರು. ಆ ಬಗ್ಗೆ ತನಿಖೆಗೆ ಆಯೋಗ ನೇಮಿಸಿದ್ದೇವೆ. ನಮ್ಮ ಸರ್ಕಾರದಲ್ಲಿ ಭ್ರಷ್ಟಾಚಾರ ಸಂಪೂರ್ಣ ತೊಲಗಿದೆ ಎಂದು ನಾನು ಹೇಳುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

'ಭ್ರಷ್ಟಾಚಾರವನ್ನು ತಗ್ಗಿಸುವ ಪ್ರಯತ್ನವನ್ನು ತಮ್ಮ ಸರ್ಕಾರ ಮಾಡುತ್ತಿದೆ. ಒಂದೇ ಬಾರಿಗೆ ಭ್ರಷ್ಟಾಚಾರ ನಿರ್ಮೂಲನೆ ಸಾಧ್ಯವಿಲ್ಲ. ಹಂತ ಹಂತವಾಗಿ ಆ ಕೆಲಸ ಆಗಬೇಕು" ಎಂದರು.

‘ಪ್ರಜ್ವಲ್‌ಗೆ ಟಿಕೆಟ್‌ ಕೊಟ್ಟಿದ್ದೇ ತಪ್ಪು’

‘ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಹಲವು ಮಹಿಳೆಯರ ಮೇಲೆ ಅತ್ಯಾಚಾರ ನಡೆಸಿ, ವಿಡಿಯೊ ಚಿತ್ರೀಕರಿಸಿದ್ದಾರೆ ಎಂಬ ಮಾಹಿತಿ ಜೆಡಿಎಸ್‌ ನಾಯಕರಿಗೆ ಆರು ತಿಂಗಳ ಹಿಂದೆಯೇ ಇತ್ತು. ಅಂತಹ ವ್ಯಕ್ತಿಗೆ ಮತ್ತೆ ಟಿಕೆಟ್‌ ನೀಡಿದ್ದು ಜೆಡಿಎಸ್‌ ಪಕ್ಷದ ತಪ್ಪು’ ಎಂದು ಸಿದ್ದರಾಮಯ್ಯ ಹೇಳಿದರು.

ಕಾಂಗ್ರೆಸ್‌ ಸರ್ಕಾರ ತಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಮಾಡುತ್ತಿದೆ ಎಂಬ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಅತ್ಯಾಚಾರ ಮಾಡಿದ್ದು ಪ್ರಜ್ವಲ್‌ ರೇವಣ್ಣ, ದೂರು ಕೊಟ್ಟಿರುವುದು ಸಂತ್ರಸ್ತ ಮಹಿಳೆಯರು. ಬಿಜೆಪಿ ವರಿಷ್ಠರಿಗೆ ಆರು ತಿಂಗಳ ಹಿಂದೆಯೇ ಪತ್ರ ಬರೆದು ಮಾಹಿತಿ ನೀಡಿದ್ದವರು ದೇವರಾಜೇಗೌಡ. ಸರ್ಕಾರ ಕಾನೂನಿನ ಪ್ರಕಾರ ತನಿಖೆ ನಡೆಸುತ್ತಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT