ಬುಧವಾರ, 6 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ಕೊಳ್ಳದಲ್ಲಿ ಕೇವಲ 60 ಟಿಎಂಸಿ ಅಡಿ ನೀರು! 4 ಜಲಾಶಯಗಳ ಸ್ಥಿತಿ ಶೋಚನೀಯ

ಕುಡಿಯುವ ನೀರು ಅವಲಂಬಿತರಿಗೂ ಸಂಕಷ್ಟ
Published 22 ಸೆಪ್ಟೆಂಬರ್ 2023, 23:30 IST
Last Updated 22 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಕಾವೇರಿ ಪ್ರಾಧಿಕಾರದ ಸೂಚನೆಯಂತೆ ಕಾವೇರಿ ನದಿಯಿಂದ ತಮಿಳುನಾಡಿಗೆ ಪ್ರತಿದಿನ 5 ಸಾವಿರ ಕ್ಯೂಸೆಕ್‌ ನೀರು ಹರಿಸಲಾಗುತ್ತಿದ್ದು, ಕಾವೇರಿಕೊಳ್ಳದ ಜಲಾಶಯಗಳ ಸ್ಥಿತಿ ಬೇಸಿಗೆಗೆ ಮುನ್ನ ಶೋಚನೀಯವಾಗಿದೆ. ನಾಲ್ಕು ಜಲಾಶಯಗಳಲ್ಲಿ ಒಟ್ಟು 60.62 ಟಿಎಂಸಿ ಅಡಿಯಷ್ಟೇ ನೀರಿನ ಸಂಗ್ರಹವಿದೆ.

ಜಲಾಶಯದಲ್ಲಿ ಸದ್ಯ ಸಂಗ್ರಹವಿರುವ ನೀರಿನ ಪ್ರಮಾಣ ಗಮನಿಸಿದರೆ ಬೆಳೆಗೆ ಮಾತ್ರವಲ್ಲ, ಕುಡಿಯುವ ನೀರಿಗಾಗಿ ಕಾವೇರಿ ಆಶ್ರಯಿಸಿರುವ ನಗರ, ಪಟ್ಟಣ ಪ್ರದೇಶಗಳ ಜನರಿಗೆ ಹಾಗೂ ಜಾನುವಾರುಗಳಿಗೆ ಬೇಸಿಗೆಯಲ್ಲಿ ತೀವ್ರ ಸಮಸ್ಯೆ ಎದುರಾಗುವ ಸಾಧ್ಯತೆಯಿದೆ.

ಕಾವೇರಿ ಜಲಾನಯನ ಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಕೇರಳದ ವೈಯನಾಡು ಪ್ರದೇಶದಲ್ಲಿ ಸೆಪ್ಟೆಂಬರ್‌ನಲ್ಲೂ ವಾಡಿಕೆಯಷ್ಟು ಮಳೆ ಸುರಿದಿಲ್ಲ. ಇದರ ಪರಿಣಾಮ ಕಾವೇರಿ ಕೊಳ್ಳದ ಜಲಾಶಯಕ್ಕೆ ಒಳಹರಿವು ನಿರೀಕ್ಷೆಯಷ್ಟು ಬರುತ್ತಿಲ್ಲ. ಹಿಂದಿನ ಮೂರು ವರ್ಷಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಸೆಪ್ಟೆಂಬರ್‌ನಲ್ಲಿ ಭಾರಿ ಮಳೆಯಾಗಿತ್ತು. ಪರಿಣಾಮವಾಗಿ ಈ ಜಲಾನಯನ ಪ್ರದೇಶಗಳನ್ನು ಅವಲಂಬಿಸಿದ ಹಾರಂಗಿ, ಹೇಮಾವತಿ, ಕೆಆರ್‌ಎಸ್‌, ಕಬಿನಿ ಜಲಾಶಯಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹವಿತ್ತು. ಈ ವರ್ಷ ಪರಿಸ್ಥಿತಿ ಭಿನ್ನವಾಗಿದ್ದು ಸಮಸ್ಯೆ ಉದ್ಭವಿಸಿದೆ.

ಈ ನಾಲ್ಕು ಜಲಾಶಯಗಳ ಸಾಮರ್ಥ್ಯ 114.57 ಟಿಎಂಸಿ ಅಡಿ. ಕಳೆದ ವರ್ಷ ಇದೇ ಅವಧಿಯಲ್ಲಿ ಈ ಜಲಾಶಯಗಳಲ್ಲಿ ಒಟ್ಟು 112.87 ಟಿಎಂಸಿ ಅಡಿಯಷ್ಟು ನೀರಿನ ಸಂಗ್ರಹವಿತ್ತು. ಈ ಬಾರಿ ನಾಲ್ಕು ಜಲಾಶಯಗಳಲ್ಲಿ ಕೇವಲ 60.62 ಅಡಿಯಷ್ಟೇ ನೀರಿನ ಸಂಗ್ರಹವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ 52.25 ಟಿಎಂಸಿ ಅಡಿ ನೀರು ಕಡಿಮೆಯಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳು ಮಾಹಿತಿ ನೀಡಿದರು.

ಕಳೆದ ಆಗಸ್ಟ್‌ 31ರ ವೇಳೆಗೆ ಜಲಾಶಯಗಳಲ್ಲಿ 69.63 ಟಿಎಂಸಿ ಅಡಿ ನೀರಿತ್ತು. ತಮಿಳುನಾಡಿಗೆ ನೀರು ಹರಿಸಲು ಆರಂಭಿಸಿದ ಮೇಲೆ 9 ಟಿಎಂಸಿ ಅಡಿ ನೀರು ಖಾಲಿಯಾಗಿದೆ.

ಮಲೆನಾಡು ವ್ಯಾಪ್ತಿಯ ಜಿಲ್ಲೆಗಳಲ್ಲಿ ಒಂದು ವಾರದಿಂದ ಈಚೆಗೆ ಮಳೆಯಾಗುತ್ತಿದ್ದು ಜಲಾಶಯಗಳ ಒಳಹರಿವು ಕೊಂಚ ಏರಿಕೆಯಾಗಿದೆ. ಆಗಸ್ಟ್‌ 31ಕ್ಕೆ ನಾಲ್ಕು ಜಲಾಶಯಗಳಿಗೆ ಒಟ್ಟು 2,679 ಕ್ಯೂಸೆಕ್‌ ನೀರು ಹರಿದುಬರುತ್ತಿತ್ತು. ಈಗ 8,751 ಕ್ಯೂಸೆಕ್‌ಗೆ ಏರಿಕೆಯಾಗಿದೆ. ಮುಂದಿನ ಒಂದು ವಾರ ಬಿರುಸಿನ ಮಳೆಯಾಗುವ ಸಾಧ್ಯತೆಯಿದ್ದು, ಮಳೆಯ ಕೊರತೆ ಪ್ರಮಾಣ ಸ್ವಲ್ಪ ತಗ್ಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT