ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಡವರ ವ್ಯಾಜ್ಯ ತ್ವರಿತ ಇತ್ಯರ್ಥ: ಮಸೂದೆಗೆ ರಾಷ್ಟ್ರಪತಿ ಅಂಕಿತ

Published 24 ಫೆಬ್ರುವರಿ 2024, 14:40 IST
Last Updated 24 ಫೆಬ್ರುವರಿ 2024, 14:40 IST
ಅಕ್ಷರ ಗಾತ್ರ

ಬೆಂಗಳೂರು: ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲರಾಗಿರುವವರು ದಾಖಲಿಸಿರುವ ಅಥವಾ ಪ್ರತಿವಾದಿಗಳಾಗಿರುವ ವ್ಯಾಜ್ಯಗಳನ್ನು ದಿನದ ವಿಚಾರಣಾ ಪಟ್ಟಿಯಲ್ಲಿ ಆದ್ಯತೆ ಮೇಲೆ ತೆಗೆದುಕೊಳ್ಳಲು ಅವಕಾಶ ಕಲ್ಪಿಸುವ ‘ಸಿವಿಲ್‌ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ಮಸೂದೆ–2023’ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ ಹಾಕಿದ್ದಾರೆ.

ರಾಜ್ಯ ಸರ್ಕಾರ ಕಳೆದ ಜುಲೈನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದಲ್ಲಿ ಈ ಮಸೂದೆಯನ್ನು ಮಂಡಿಸಿತ್ತು. ಉಭಯ ಸದನಗಳು ಅನುಮೋದಿಸಿದ್ದ ಮಸೂದೆಯನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಅವರು ರಾಷ್ಟ್ರಪತಿಯ ಅಂಕಿತಕ್ಕೆ ಕಳುಹಿಸಿದ್ದರು. ಫೆಬ್ರುವರಿ 21ರಂದು ಮಸೂದೆಗೆ ರಾಷ್ಟ್ರಪತಿ ಸಹಿ ಹಾಕಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಕಾನೂನು ಮತ್ತು ಸಂಸದೀಯ‌ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ‘ವ್ಯಾಜ್ಯಗಳ ವಿರುದ್ಧ ಹೋರಾಡಲು ಬಲವಿಲ್ಲದ ಬಡವರು ಹಾಗೂ ಇತರ ವ್ಯಕ್ತಿಗಳನ್ನು ಒಳಗೊಂಡಿರುವ ಪ್ರಕರಣಗಳನ್ನು ಆರು ತಿಂಗಳಲ್ಲಿ ಇತ್ಯರ್ಥಪಡಿಸಲು ಈ ತಿದ್ದುಪಡಿಯು ಸಹಕಾರಿ ಆಗಲಿದೆ. ಇದೊಂದು ಕ್ರಾಂತಿಕಾರಕ ಕಾನೂನು ಆಗಿದೆ. ದೇಶದಲ್ಲಿಯೇ ಮೊದಲು ಎನಿಸಿರುವ ಈ ಮಸೂದೆಗೆ ರಾಷ್ಟ್ರಪತಿ ಅಂಕಿತ ಹಾಕಿರುವುದರಿಂದ, ಜಾರಿಗೊಳಿಸಲಾಗುವುದು’ ಎಂದರು.

‘ಸಣ್ಣ ಅಥವಾ ಅತಿಸಣ್ಣ ರೈತರು ಹಾಗೂ ಆರ್ಥಿಕವಾಗಿ ದುರ್ಬಲವಾದ ವರ್ಗಗಳ ವ್ಯಕ್ತಿಗಳು, ಅಂದರೆ ಎಲ್ಲ ಮೂಲಗಳಿಂದ ಬರುವ ವಾರ್ಷಿಕ ಆದಾಯವು ₹ 50 ಸಾವಿರ ಮೀರದ, ದೀರ್ಘಕಾಲದಿಂದ ನ್ಯಾಯಾಲಯಗಳಲ್ಲಿ ಬಾಕಿ ಇರುವ ವ್ಯಾಜ್ಯದ ವಿರುದ್ಧ ಹೋರಾಡಲು ಶಕ್ತಿ ಇಲ್ಲದ ವ್ಯಕ್ತಿಗಳಿಗೆ ಸೇರಿದ ಪ್ರಕರಣಗಳನ್ನು ಆದ್ಯತೆಯ ಮೇಲೆ ವಿಲೇವಾರಿ ಮಾಡಲು ಈ ತಿದ್ದುಪಡಿ ಮೂಲಕ ಕಾಲಮಿತಿ ನಿಗದಿಪಡಿಸಲಾಗಿದೆ’ ಎಂದೂ ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT