ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ ಪರಿಹಾರ ವಿಚಾರದಲ್ಲಿ ಕಾಂಗ್ರೆಸ್‌ನ ಸಂಭ್ರಮಾಚರಣೆ ಹುಸಿ: ಅಶೋಕ ಕುಟುಕು

Published 23 ಏಪ್ರಿಲ್ 2024, 14:25 IST
Last Updated 23 ಏಪ್ರಿಲ್ 2024, 14:25 IST
ಅಕ್ಷರ ಗಾತ್ರ

ಬೆಂಗಳೂರು: ಬರ ಪರಿಹಾರ ಬಿಡುಗಡೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಯಾವುದೇ ನಿರ್ದೇಶನ ನೀಡಿಲ್ಲ. ಕೇಂದ್ರ ಸರ್ಕಾರವೇ ಚುನಾವಣಾ ಆಯೋಗದ ಅನುಮತಿ ಕೇಳಿದ್ದು, ಅದಕ್ಕೆ ಆಯೋಗ ಅನುಮತಿ ನೀಡಿದೆ. ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತಂದಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಈ ವಿಚಾರವನ್ನೇ ಕಾಂಗ್ರೆಸ್‌ ಪಕ್ಷ ತಮಗೆ ಸಿಕ್ಕ ಜಯ ಎಂಬಂತೆ ಬಿಂಬಿಸಿಕೊಳ್ಳುತ್ತಿದೆ. ಜಯ ಸಿಗಲು ಕಾಂಗ್ರೆಸ್‌ನ ವಕೀಲರು ಏನೂ ವಾದ ಮಾಡಿಲ್ಲ. ಇದು ಹತಾಶೆಯ ವಿಜಯೋತ್ಸವ ಎಂದು ಅವರು ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.

ಕಾಂಗ್ರೆಸ್‌ ಸರ್ಕಾರ ಬರ ಪರಿಹಾರಕ್ಕೆ ಕೋರಿ ಮೂರು ತಿಂಗಳು ತಡವಾಗಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಚುನಾವಣೆ ದಿನಾಂಕ ಪ್ರಕಟವಾದ ಕಾರಣ ಚುನಾವಣಾ ಆಯೋಗ ಪರಿಹಾರ ಬಿಡುಗಡೆಗೆ ತಡೆ ನೀಡಿತ್ತು. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಈ ವಿಷಯ ತಿಳಿಸಿದ್ದರು ಎಂದರು.

ಹಿಂದೆ ಸಿದ್ದರಾಮಯ್ಯ ಅವಧಿಯಲ್ಲಿ ನಿರಂತರ ಬರ ಇತ್ತು. ಆಗ ಕೇಂದ್ರದಲ್ಲಿದ್ದ ಮನಮೋಹನ್‌ ಸಿಂಗ್ ಸರ್ಕಾರ ಬರ ಪರಿಹಾರ ನೀಡಲು 8 ರಿಂದ 9 ತಿಂಗಳು ತಡ ಮಾಡಿತ್ತು. ಈ ಬಗ್ಗೆ ತುಟಿ ಬಿಚ್ಚಿರಲಿಲ್ಲ
ಆರ್‌.ಅಶೋಕ, ವಿರೋಧ ಪಕ್ಷದ ನಾಯಕ

ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಛೀಮಾರಿ ಹಾಕಿಲ್ಲ, ನಿರ್ದೇಶನವನ್ನೂ ನೀಡಿಲ್ಲ. ಆದರೆ, ಹುಸಿ ಸಂಭ್ರಮಾಚರಣೆಯಲ್ಲಿ ಕಾಂಗ್ರೆಸ್‌  ತೊಡಗಿದೆ. ಚುನಾವಣಾ ಆಯೋಗದ ತಡೆ ಇದ್ದ ಕಾರಣಕ್ಕೆ ಕೇಂದ್ರ ಪರಿಹಾರ ಬಿಡುಗಡೆ ಮಾಡಿರಲಿಲ್ಲ. ಸುಪ್ರೀಂ ಕೋರ್ಟ್‌ನಲ್ಲಿ ಈ ವಿಚಾರ ಬಂದಾಗ ಕೇಂದ್ರ ಸರ್ಕಾರವು ಚುನಾವಣಾ ಆಯೋಗದ ಅನುಮತಿ ಕೇಳುತ್ತೇವೆ ಎಂದು ಹೇಳಿತ್ತು. ಆ ಬಳಿಕ ಅನುಮತಿ ಕೇಳಿತ್ತು. ಇದರಲ್ಲಿ ಕಾಂಗ್ರೆಸ್‌ ಪಕ್ಷದ್ದು ಒಂದು ಕಾಳಿನಷ್ಟು ಪ್ರಯತ್ನವೂ ಇಲ್ಲ ಎಂದರು.

ಕರ್ನಾಟಕದಲ್ಲಿ ಆರ್ಥಿಕ ದಿವಾಳಿತನ ಎದ್ದಿದೆ. ತನ್ನ ತಪ್ಪನ್ನು ಮುಚ್ಚಿಕೊಳ್ಳಲು ಇಲ್ಲಸಲ್ಲದ ಆರೋಪ ಮಾಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬ್ಯುಸಿಯಾಗಿದ್ದಾರೆ. ಇವರು ಅತ್ಯಂತ ಅಸಮರ್ಥ ಮುಖ್ಯಮಂತ್ರಿ.
ಪಿ.ರಾಜೀವ್‌, ಪ್ರಧಾನ ಕಾರ್ಯದರ್ಶಿ ಬಿಜೆಪಿ

ಕೇಂದ್ರ ಸರ್ಕಾರ ಎಸ್‌ಡಿಆರ್‌ಎಫ್‌ ಅಡಿ ಈಗಾಗಲೇ ₹700 ಕೋಟಿ ಬಿಡುಗಡೆ ಮಾಡಿದೆ. ಆ ಹಣದಲ್ಲೇ ₹2,000 ಪರಿಹಾರವನ್ನೂ ನೀಡುತ್ತಿದೆ. ಆದರೆ, ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣದ ಬಗ್ಗೆ ಎಲ್ಲೂ ಪ್ರಸ್ತಾಪ ಮಾಡುತ್ತಿಲ್ಲ. ಈ ₹700 ಕೋಟಿಯಲ್ಲಿ ಶೇ 25ರಷ್ಟು ಹಣವನ್ನು ರಾಜ್ಯ ಸರ್ಕಾರ ನೀಡಬೇಕು ಎಂದರು.

ಸಾಮಾನ್ಯವಾಗಿ ಬರಕ್ಕೆ ಸಂಬಂಧಿಸಿದಂತೆ ಎಲ್ಲ ರಾಜ್ಯಗಳಿಂದ ವರದಿ ಬಂದ ಬಳಿಕವೇ ಪರಿಹಾರವನ್ನು ಕೊಡುವ ವ್ಯವಸ್ಥೆ ಮಾಡಲಾಗುತ್ತದೆ. ಹಿಂದಿನಿಂದಲೂ ಇದೇ ಪರಂಪರೆ ನಡೆದುಕೊಂಡು ಬಂದಿದೆ. ಆದರೆ, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಐದು ಗ್ಯಾರಂಟಿಗಳನ್ನು ಜಾರಿ ತಂದಿತು. ಅದಕ್ಕೆ ಯಾವುದೇ ತಯಾರಿ ಮಾಡಿಕೊಂಡಿರಲಿಲ್ಲ. ಇದರಿಂದಾಗಿ ಸರ್ಕಾರದ ಖಜಾನೆ ಖಾಲಿ ಆಗಿದೆ. ಜನ ರೊಚ್ಚಿಗೆದ್ದಿದ್ದಾರೆ ಎಂದರು.

ಕಾಂಗ್ರೆಸ್‌ ಸರ್ಕಾರ ಸರಿಯಾದ ಸಮಯಕ್ಕೆ ದಾಖಲೆ ಸಮೇತ ಪರಿಹಾರಕ್ಕೆ ಕೋರಿಕೆ ಪತ್ರ ಕಳಿಸಲಿಲ್ಲ. ರಾಜ್ಯ ತನ್ನ ಬೊಕ್ಕಸದಿಂದ ಒಂದು ಪೈಸೆಯನ್ನೂ ಕೊಟ್ಟಿಲ್ಲ. ಕೊನೆಗೆ ಕೇಂದ್ರವೇ ನೆರವಿಗೆ ಬಂತು.
ಬಸವರಾಜ ಬೊಮ್ಮಾಯಿ, ಹಾವೇರಿ ಬಿಜೆಪಿ ಅಭ್ಯರ್ಥಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಈ ಕೆಲಸಗಳಿಗೆ ನೀಡಲು ಸರ್ಕಾರದ ಬಳಿ ಹಣವೂ ಇಲ್ಲ. ತೆರಿಗೆ ಸಂಗ್ರಹಣೆ ಪ್ರಮಾಣವೂ ಕಡಿಮೆ ಆಗಿದೆ. ಜನ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಹಾಲಿನ ಸಬ್ಸಿಡಿ ₹700 ಕೋಟಿಯನ್ನು ರೈತರಿಗೆ ಕೊಟ್ಟಿಲ್ಲ. ಚುನಾವಣೆ ಮುಗಿದ ಬಳಿಕ ನೌಕರರಿಗೆ ಸಂಬಳ ಪಾವತಿ ಮಾಡಲು ಹಣವಿಲ್ಲ, ನೌಕರರು ಸಂಕಷ್ಟಕ್ಕೆ ಸಿಲುಕುವುದು ನಿಶ್ಚಿತ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT