ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಚಿವ ಶಿವರಾಜ ತಂಗಡಗಿಗೆ ಜನರೇ ಹೊಡೆಯುತ್ತಾರೆ: ಆರ್‌.ಅಶೋಕ

Published 27 ಮಾರ್ಚ್ 2024, 14:44 IST
Last Updated 27 ಮಾರ್ಚ್ 2024, 14:44 IST
ಅಕ್ಷರ ಗಾತ್ರ

ಬೆಂಗಳೂರು: ‘ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದಾಗ ಸೋನಿಯಾ ಗಾಂಧಿಗೆ ಹೊಡೆಯಿರಿ ಎನ್ನುತ್ತಿದ್ದರು. ಕಾಂಗ್ರೆಸ್‌ಗೆ ಹೋದ ಮೇಲೆ ಮೋದಿಗೆ ಹೊಡೆಯಿರಿ ಎನ್ನುತ್ತಿದ್ದಾರೆ. ಈ ರೀತಿ ಮಾತನಾಡುವ ಅವರಿಗೆ ಒಂದು ದಿನ ಜನರೇ ಹೊಡೆಯುತ್ತಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಹೇಳಿದರು.

ಲೋಕಸಭೆ ಚುನಾವಣೆಯಲ್ಲಿ ಸೋಲುವ ಹತಾಶೆಯಿಂದ ಕಾಂಗ್ರೆಸ್‌ ನಾಯಕರು ಬುದ್ಧಿಭ್ರಮಣೆಯಿಂದ ಪ್ರಧಾನಿ ಮೋದಿಯವರ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ನಾಡಿನ ಸಂಸ್ಕೃತಿ ಎತ್ತಿಹಿಡಿಯಬೇಕಾದ ಅವರು ತಮ್ಮ ಸಂಸ್ಕೃತಿ ತೋರಿಸುತ್ತಿದ್ದಾರೆ. ಅವರನ್ನು ಸಮರ್ಥಿಸುವವರು ಹಳ್ಳಿ ಭಾಷೆ ಬಳಕೆ ಎಂದು ಹೇಳುತ್ತಿದ್ದಾರೆ. ಇವರ ‘ಗುರು’ ಸಿದ್ದರಾಮಯ್ಯ ಪ್ರಧಾನಿ ಮೋದಿಯವರನ್ನು ಏಕವಚನದಲ್ಲಿ ‘ಅವನು– ಇವನು’ ಎನ್ನುತ್ತಾ ಮಾತನಾಡುತ್ತಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಏಕವಚನದಲ್ಲಿ ಕರೆಯುತ್ತಾರೆ. ರಾಜ್ಯದಲ್ಲಿ ಸಂಸ್ಕಾರವೇ ಇಲ್ಲದ ಸರ್ಕಾರವಿದೆ’ ಎಂದು ಅಶೋಕ ಕಿಡಿಕಾರಿದರು.

ಸಚಿವ ತಂಗಡಗಿ ನಿರುದ್ಯೋಗದ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ ಪಕ್ಷ 50 ವರ್ಷಕ್ಕೂ ಹೆಚ್ಚು ಕಾಲ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಕಾಂಗ್ರೆಸ್‌ ಅವಧಿಯಲ್ಲಿ ಇಡೀ ದೇಶ ಜನರೆಲ್ಲರಿಗೂ ಉದ್ಯೋಗ ನೀಡಿದ್ದರೆ? ನಿರುದ್ಯೋಗ ಸಮಸ್ಯೆಯೇ ಇಲ್ಲದೇ ದೇಶ ಸುಭಿಕ್ಷವಾಗಿತ್ತೆ ಎಂಬುದಕ್ಕೆ ಉತ್ತರ ನೀಡಲಿ. ಮೋದಿಯವರು ಕಳೆದ 10 ವರ್ಷಗಳಿಂದ ಅಧಿಕಾರದಲ್ಲಿದ್ದಾರೆ. ಕೇಂದ್ರ ಸರ್ಕಾರದ ರೋಜ್‌ಗಾರ್‌ ಮೇಳ ಯೋಜನೆಯಡಿ 2024ರ ಫೆಬ್ರುವರಿ 13ರಂದು ಒಂದೇ ದಿನ 1 ಲಕ್ಷ ಜನರಿಗೆ ನೇಮಕಾತಿ ಪತ್ರ ನೀಡಲಾಗಿದೆ. ಈವರೆಗೆ 10 ರೋಜ್‌ಗಾರ್‌ ಮೇಳ ನಡೆಸಿದ್ದು, 6.5 ಲಕ್ಷ ಯುವ ಜನರಿಗೆ ಉದ್ಯೋಗ ದೊರೆತಿದೆ. ಕಾಂಗ್ರೆಸ್‌ ಸರ್ಕಾರ ರಾಜ್ಯದಲ್ಲಿ ಎಷ್ಟು ನಿರುದ್ಯೋಗಿಗಳಿಗೆ ಈವರೆಗೆ ಯುವನಿಧಿ ನೀಡಿದೆ ಎಂದು ತಿಳಿಸಲಿ’ ಎಂದು ಅವರು ಪ್ರಶ್ನಿಸಿದರು.

ಬ್ರ್ಯಾಂಡ್‌ ಬೆಂಗಳೂರು ಎಂದು ಡಿ.ಕೆ.ಶಿವಕುಮಾರ್‌ ಹೇಳುತ್ತಾರೆ. ಆದರೆ, ಅಪಾರ್ಟ್‌ಮೆಂಟ್‌ಗಳಿಗೆ ಟ್ಯಾಂಕರ್‌ಗಳ ಮೂಲಕ ಕೊಳಚೆ ನೀರು ಪೂರೈಕೆ ಮಾಡಿದ್ದಾರೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT