ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ, ಸಚಿವರ ಸಮಸ್ಯೆಗಳಿಗೆ ಕೊನೆ ಇಲ್ಲ: ಸಚಿವ ಸತೀಶ ಜಾರಕಿಹೊಳಿ

Published 30 ನವೆಂಬರ್ 2023, 15:56 IST
Last Updated 30 ನವೆಂಬರ್ 2023, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ಶಾಸಕರು ಮತ್ತು ಸಚಿವರ ಸಮಸ್ಯೆಗಳಿಗೆ ಕೊನೆ ಇಲ್ಲ. ಒಮ್ಮೆಗೆ ಬಗೆಹರಿಯಲೂ ಸಾಧ್ಯವೂ ಇಲ್ಲ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. 

ಸುದ್ದಿಗಾರರ ಜೊತೆ ಗುರುವಾರ ಮಾತನಾಡಿದ ಅವರು, ‘ಶಾಸಕ ಬಿ.ಆರ್‌. ಪಾಟೀಲ ಅವರಿಗೆ ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇರಬಹುದು. ಆ ಉದ್ದೇಶದಿಂದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದಾರೆ’ ಎಂದರು.

‘ಸರ್ಕಾರ ಇದ್ದಾಗ ನಿತ್ಯ ಹೊಸ ಸಮಸ್ಯೆಗಳು ಸೃಷ್ಟಿ ಆಗಿಯೇ ಆಗುತ್ತವೆ. ಇವತ್ತು ಒಂದನ್ನು ಪರಿಹರಿಸಿದರೆ, ನಾಳೆ ಮತ್ತೊಂದು ಹುಟ್ಟಿಕೊಳ್ಳುತ್ತದೆ. ಅಧಿಕಾರದ ಕುರ್ಚಿ ಮೇಲೆ ಕುಳಿತಾಗ ಕೆಲವು ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಕೆಲವು ಬಗೆಹರಿಯುವುದಿಲ್ಲ’ ಎಂದರು.

ಗುತ್ತಿಗೆದಾರರಿಗೆ ಬಾಕಿ ಬಿಲ್ ಪಾವತಿ ವಿಷಯದಲ್ಲಿ ಹೈಕೋರ್ಟ್ ಚಾಟಿ ಬೀಸಿದ ಬಗ್ಗೆ ಕೇಳಿದ ಪ್ರಶ್ನೆಗೆ, ‘ನಮ್ಮ ಇಲಾಖೆಗೆ ಸಂಬಂಧಿಸಿ ಹೈಕೋರ್ಟ್ ತನ್ನ ಅಭಿಪ್ರಾಯ ನೀಡಿಲ್ಲ. ಬಿಬಿಎಂಪಿಯವರು ಯಾರೋ ಕೋರ್ಟ್‌ಗೆ ಹೋಗಿದ್ದಾರೆ. ನಮ್ಮ ಇಲಾಖೆಯಲ್ಲಿ ಎಲ್ಲರಿಗೂ ಸರಿಯಾಗಿ ಬಿಲ್ ಪಾವತಿ ಮಾಡಲು ಪ್ರಯತ್ನಿಸುತ್ತಿದ್ದೇವೆ’ ಎಂದರು.

ನಿಗಮ– ಮಂಡಳಿ ನೇಮಕ ವೇಳೆ ಹಿರಿಯ ನಾಯಕರ ಅಭಿಪ್ರಾಯ ಪಡೆಯದ ವಿಚಾರದಲ್ಲಿ ಸಚಿವ ಜಿ. ಪರಮೇಶ್ವರ ಮಾತಿಗೆ ದನಿಗೂಡಿಸಿದ ಸತೀಶ, ‘ಪರಮೇಶ್ವರ ಅವರ ಅಭಿಪ್ರಾಯ ಕೇಳಬೇಕಿತ್ತು. ಎಂಟು ವರ್ಷ ಅವರು ಪಕ್ಷದ ಅಧ್ಯಕ್ಷರಾಗಿದ್ದವರು’ ಎಂದರು.

‘ನಿಗಮ– ಮಂಡಳಿಗಳಲ್ಲಿ ಹೊಸಬರಿಗೆ ಅವಕಾಶ ಇಲ್ಲವೆಂದು ಮೊದಲೇ ಹೇಳಿದ್ದಾರೆ. 3–4 ಬಾರಿ ಗೆದ್ದವರಿಗೆ ಅವಕಾಶ ನೀಡಲು ಪಕ್ಷ ಬದ್ದವಾಗಿದೆ. ನಮ್ಮ ಜಿಲ್ಲೆಯಲ್ಲೂ (ಬೆಳಗಾವಿ) ಹಿರಿಯ ಶಾಸಕರು ಇದ್ದಾರೆ. ಅವರಿಗೂ ನಿಗಮ ಮಂಡಳಿಗಳಲ್ಲಿ ಸ್ಥಾನ ಕೊಟ್ಟೇ ಕೊಡ್ತಾರೆ. ಆದಷ್ಟು ಬೇಗ ನೇಮಕಾತಿಯಾದರೆ ಒಳ್ಳೆಯದು’ ಎಂದರು.

‘ಬೆಳಗಾವಿ ಅಧಿವೇಶನದಲ್ಲಿ ಎಂದೂ ಕೂಡ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಚರ್ಚೆ ಆಗಿಲ್ಲ. ಈ ಬಾರಿಯಾದರೂ ಚರ್ಚೆ ಆಗುತ್ತದೆಯೇ ಎಂದು ನೋಡಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT