ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೈಬರ್ ಅಪರಾಧ | ರಾಜ್ಯದಲ್ಲಿ ಜಾತ್ಯತೀತ ಸಂರಚನೆ ಗಟ್ಟಿಯಾಗಿದೆ: ಅಡ್ವೊಕೇಟ್ ಜನರಲ್

Published 30 ಮೇ 2024, 14:39 IST
Last Updated 30 ಮೇ 2024, 14:39 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಜಾತ್ಯತೀತ ಸಂರಚನೆಗೆ ಎಳ್ಳಷ್ಟೂ ಮುಕ್ಕಾದಂತೆ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸುತ್ತಿದೆ’ ಎಂದು ಅಡ್ವೊಕೇಟ್‌ ಜನರಲ್‌ ಹೈಕೋರ್ಟ್‌ಗೆ ಅರುಹಿದರು.

ತಮ್ಮ ವಿರುದ್ಧ ದಾಖಲಾಗಿರುವ ಸೈಬರ್‌ ಅಪರಾಧ ಪ್ರಕರಣ ರದ್ದುಗೊಳಿಸುವಂತೆ ಕೋರಿ ಮುಂಬೈನ ಥಾಣೆಯ ನಿವಾಸಿ ಪ್ರಾಧ್ಯಾಪಕ ವಿನಿತ್‌ ನಾರಾಯಣ ನಾಯಕ್‌ ಸಲ್ಲಿಸಿರುವ ಕ್ರಿಮಿನಲ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯ‍ಪೀಠ ಗುರುವಾರ ವಿಚಾರಣೆ ನಡೆಸಿತು. 

ವಿಚಾರಣೆ ವೇಳೆ ಅರ್ಜಿದಾರ ನಡೆಯನ್ನು ಬಲವಾಗಿ ಆಕ್ಷೇಪಿಸಿದ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ, ‘ಅರ್ಜಿದಾರ ವಿನಿತ್ ನಾರಾಯಣ ನಾಯಕ್‌ ಅವರು, ಹಿಂದೂ–ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತುವ ರೀತಿಯಲ್ಲಿ ತಮ್ಮ ಎಕ್ಸ್‌ ಖಾತೆಯಲ್ಲಿ ಟ್ವೀಟ್‌ ಮಾಡಿದ್ದಾರೆ’ ಎಂದು ಬಲವಾಗಿ ಆಕ್ಷೇಪಿಸಿದರು.

ಇದಕ್ಕೆ ಪ್ರತಿಯಾಗಿ ಅರ್ಜಿದಾರರ ಪರ ವಾದ ಮಂಡಿಸಿದ ಹೈಕೋರ್ಟ್‌ನ ಹಿರಿಯ ವಕೀಲ ಎಂ.ಅರುಣ್‌ ಶ್ಯಾಮ್‌, ‘ಅರ್ಜಿದಾರರು ಯಾವುದೇ ಸ್ವಯಂ ಹೇಳಿಕೆಯನ್ನು ನೀಡಿಲ್ಲ. ಕೇವಲ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದ ಹೇಳಿಕೆಗೆ ಪ್ರತಿಯಾಗಿ ಟ್ವೀಟ್‌ ಮಾಡಿದ್ದಾರೆ ಅಷ್ಟೇ. ಇದೆಲ್ಲವೂ ಟಿ.ವಿ.ಚಾನೆಲ್‌ಗಳಲ್ಲಿ ಅದಾಗಲೇ ವಿಸ್ತೃತವಾಗಿ ಬಿತ್ತರಗೊಂಡಿದೆ’ಎಂದರು.

’ಅರ್ಜಿದಾರರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಬಂಧಿಸಲಾಗಿ‌ತ್ತು. ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಪ್ರಕರಣದಲ್ಲಿ ಯಾವುದೇ ಹುರಳಿಲ್ಲ. ಆದ್ದರಿಂದ, ಎಫ್‌ಐಆರ್‌ ರದ್ದುಗೊಳಿಸಬೇಕು ಎಂದು ಕೋರಿದರು.

ಇದನ್ನು ಅಲ್ಲಗಳೆದ ಶಶಿಕಿರಣ ಶೆಟ್ಟಿ, ‘ಅರ್ಜಿದಾರರು ಟ್ವೀಟ್‌ ಎರಡು ಸಮುದಾಯಗಳ ನಡುವೆ ದ್ವೇಷ ಮೂಡಿಸುವಂತಿದೆ’ ಎಂದು ಬಾರಿ ಬಾರಿಗೂ ಪುನರುಚ್ಚರಿಸಿದರು.

ಆದರೆ, ಇದನ್ನು ಒಪ್ಪದ ನ್ಯಾಯಪೀಠ, ’ಹಿಂದೂ ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತಿರುವ ಘಟನೆ ಎಲ್ಲಿದೆ ತೋರಿಸಿ’ ಎಂದು ಪ್ರಶ್ನಿಸಿತಲ್ಲದೆ, ‘ರಾಜ್ಯದ ಇಡೀ ಆಡಳಿತ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಮುಗಿಬೀಳಬಾರದು. ಇಂತಹ ಸಂದರ್ಭದಲ್ಲಿ ಅವರಿಗೆ ರಕ್ಷಣೆ ನೀಡಬೇಕಾಗುತ್ತದೆ’ ಎಂದು ಅಡ್ವೊಕೇಟ್‌ ಜನರಲ್‌ ಅವರನ್ನು ಉದ್ದೇಶಿಸಿ ಹೇಳಿತು. ‘ಅರ್ಜಿದಾರರ ವಿರುದ್ಧ ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದು’ ಎಂದು ಆದೇಶಿಸಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ಎಂದು ಸೂಚಿಸಿತು. ವಿಚಾರಣೆಯನ್ನು ಜೂನ್‌ 12ಕ್ಕೆ ಮುಂದೂಡಲಾಗಿದೆ.

ಪ್ರಕರಣವೇನು?: ‘ದೇಶದ ಸಂಪತ್ತನ್ನು ಮುಸ್ಲಿಮರಿಗೆ ಹಂಚುತ್ತೇನೆ’ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯವರ ಹೇಳಿಕೆ ಟಿ.ವಿ.ಚಾನೆಲ್‌ಗಳಲ್ಲಿ ಬಿತ್ತರಗೊಂಡಿತ್ತು. ಈ ಹೇಳಿಕೆಯನ್ನು ಗುರಿಯಾಗಿಸಿಕೊಂಡು ವಿನಿತ್‌ ನಾರಾಯಣ ನಾಯಕ್‌ ತಮ್ಮ ಎಕ್ಸ್‌ ಐಡಿ ‘ಭಿಕುಮಾತ್ರೆ (ಮೋದಿಯವರ ಕುಟುಂಬ) ಮುಂಬೈಚ ಡಾನ್‌’ ಖಾತೆಯಲ್ಲಿ ಸಿದ್ದರಾಮಯ್ಯ ಭಾಷಣ ಮಾಡುವ ಭಾವಚಿತ್ರವನ್ನು ಪೋಸ್ಟ್‌ ಮಾಡಿ ಪ್ರತಿಕ್ರಿಯಿಸಿದ್ದರು.‌

ಅದರಲ್ಲಿ, ‘ಯಾವ ಉದಾರವಾದಿ ಮತ್ತು ರೂಢಿವಾದಿಗಳು ಕಾಂಗ್ರೆಸ್‌ ಪ್ರಣಾಳಿಕೆಯನ್ನು ಪ್ರತಿಪಾದಿಸುತ್ತಾರೆಯೋ ಅಂಥವರ ಮುಖಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯವರ ಈ ಹೇಳಿಕೆಯನ್ನು ಎಸೆಯಿರಿ. ಹಿಂದೂಗಳು ಎಂದರೆ ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡಗಳನ್ನೂ (ಎಸ್‌ಟಿ) ಒಳಗೊಂಡಿರುತ್ತದೆ. ಹಿಂದೂಗಳ ಸಂಪತ್ತು ಕಸಿದುಕೊಂಡು ಮುಸ್ಲಿಮರಿಗೆ ಹಂಚುವುದಾಗಿ ಕಾಂಗ್ರೆಸ್ ನೀಡಿರುವ ಹೇಳಿಕೆಯ ಹಿಂದೆ ಎಸ್‌ಸಿ ಮತ್ತು ಎಸ್‌ಟಿಗಳ ಸಂಪತ್ತು ಕೂಡಾ ಒಳಗೊಂಡಿದೆ’ ಎಂದು ವಿವರಿಸಿದ್ದರು.

ಇದರ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್‌ ಠಾಣೆಯಲ್ಲಿ 2024ರ ಏಪ್ರಿಲ್‌ 29ರಂದು ದೂರು ದಾಖಲಾಗಿತ್ತು. ‘ಈ ಸಂದೇಶದಿಂದ ಸಾರ್ವಜನಿಕರಲ್ಲಿ ಹಿಂದೂ ಮುಸ್ಲಿಮ್‌ ಸಮುದಾಯದಲ್ಲಿ ದ್ವೇಷವನ್ನು ಉಂಟು ಮಾಡುವ ದುರುದ್ದೇಶವನ್ನು ಇಟ್ಟುಕೊಂಡು ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿ ಪಕ್ಷಕ್ಕೆ ಕೆಟ್ಟ ಹೆಸರು ಬರುವ ರೀತಿಯಲ್ಲಿ ಕೃತ್ಯ ಎಸಗಲಾಗಿದೆ’ ಎಂದು ಆರೋಪಿಸಲಾಗಿತ್ತು. ಈ ಸಂಬಂಧ ಮಾಹಿತಿ ತಂತ್ರಜ್ಞಾನ ಕಾಯ್ದೆ–2000ದ ಕಲಂ 66ಸಿ ಮತ್ತು ಭಾರತೀಯ ದಂಡ ಸಂಹಿತೆ–1860ರ ಕಲಂ 153ಎ ಉಲ್ಲಂಘನೆ ಅಡಿಯಲ್ಲಿ 45ನೇ ಎಸಿಎಂಎಂ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT