ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರದ್ದಾದ ಬುದ್ಧಿಮಾಂದ್ಯರ ಶಾಲೆಗೆ ₹27 ಲಕ್ಷ?

Published 14 ಮೇ 2024, 23:53 IST
Last Updated 14 ಮೇ 2024, 23:53 IST
ಅಕ್ಷರ ಗಾತ್ರ

ಬೆಂಗಳೂರು: ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆಯೊಂದರ ಮಾನ್ಯತೆ 2020ರಲ್ಲೇ ರದ್ದಾಗಿದ್ದರೂ, ₹27 ಲಕ್ಷ ಅನುದಾನ ಬಿಡುಗಡೆ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶನ ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ.

ಶಾರದಾ ಮಾತಾ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆ ಬೆಂಗಳೂರಿನ ಬೆನ್ಸನ್‌ ಟೌನ್‌ನ ಮುದ್ದಮ್ಮ ಗಾರ್ಡನ್‌ನಲ್ಲಿ 2000 ಇಸವಿಯಿಂದಲೂ ಬುದ್ಧಿಮಾಂದ್ಯ ಮಕ್ಕಳ ವಸತಿ ರಹಿತ ಶಾಲೆ ನಡೆಸುತ್ತಿದೆ. ಮಕ್ಕಳ ಸಂಖ್ಯೆ  ಕಡಿಮೆಯಾಗಿದ್ದರೂ, ಹಲವು ವರ್ಷಗಳು ಮಕ್ಕಳ ದಾಖಲಾತಿಯೇ ಇಲ್ಲದಿದ್ದರೂ ಸಂಸ್ಥೆ ಸುಳ್ಳು ಲೆಕ್ಕ ತೋರಿಸಿ ಅನುದಾನ ಪಡೆಯುತ್ತಿದೆ ಎಂಬ ದೂರುಗಳು ಬಂದಿದ್ದರಿಂದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ತನಿಖೆಗೆ ಆದೇಶಿಸಿತ್ತು. 

ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ, ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವ್ಯವಸ್ಥಾಪಕರನ್ನು ಒಳಗೊಂಡ ತಂಡ ತನಿಖೆ ನಡೆಸಿ, ನೀಡಿದ್ದ ವರದಿ ಆಧಾರದಲ್ಲಿ ಸಂಸ್ಥೆಗೆ ನೀಡಿದ್ದ ಮಾನ್ಯತೆಯನ್ನು ಸೆ.29, 2020ರಲ್ಲಿ ರದ್ದು ಮಾಡಲಾಗಿತ್ತು.

ಮಾನ್ಯತೆ ರದ್ದಾದ ಸಂಸ್ಥೆಗೆ 2019–20, 2020–21 ಹಾಗೂ 2021–22ನೇ ಸಾಲಿನ ಬಾಕಿ ಅನುದಾನವನ್ನು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಕಳೆದ ತಿಂಗಳು ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ನಿರ್ದೇಶಕರಿಗೆ ಆದೇಶ ನೀಡಿದ್ದು, ಇಲಾಖೆಯ ನಿರ್ದೇಶನದಂತೆ ಹಣ ಬಿಡುಗಡೆ ಮಾಡಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ವಿಕಲಚೇತನರ ರಕ್ಷಣಾ ಸಮಿತಿ ಆರೋಪಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT