ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸೆಸ್, ಸರ್‌ಜಾರ್ಜ್‌ನಲ್ಲೂ ಪಾಲು ನೀಡಬೇಕು- ಮುಖ್ಯಮಂತ್ರಿ ಸಿದ್ದರಾಮಯ್ಯ

Published 14 ಫೆಬ್ರುವರಿ 2024, 16:19 IST
Last Updated 14 ಫೆಬ್ರುವರಿ 2024, 16:19 IST
ಅಕ್ಷರ ಗಾತ್ರ

ಬೆಂಗಳೂರು: ‘ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ, ಕೇಂದ್ರಕ್ಕೆ ನೀಡುವ  ಕರ್ನಾಟಕಕ್ಕೆ ಅನ್ಯಾಯ ಆಗುವುದನ್ನು ತಡೆಯಲು ಸಂವಿಧಾನ ತಿದ್ದುಪಡಿ ಮಾಡಿ ಸೆಸ್ ಮತ್ತು ಸರ್‌ಚಾರ್ಜ್‌ನಲ್ಲೂ ಪಾಲು ನೀಡಬೇಕು’ ಎಂದು ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದರು.

‘X’ನಲ್ಲಿ (ಟ್ವಿಟರ್) ನಡೆದ ‘ನಮ್ಮ ಹಕ್ಕು ನಮ್ಮ ತೆರಿಗೆ’ ಅಭಿಯಾನದ ಅಂಗವಾಗಿ ನೇರ ಸಂವಾದದಲ್ಲಿ ಬುಧವಾರ ಮಾತನಾಡಿದ ಮುಖ್ಯಮಂತ್ರಿ, ‘ನಾವು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಒಪ್ಪಿಕೊಂಡ ಮೇಲೆ ಚೀನಾ ಮಾದರಿಯ ಏಕಸ್ವಾಮ್ಯ ಸಹಿಸಲು, ಅಮೆರಿಕದ ಅಧ್ಯಕ್ಷೀಯ ಮಾದರಿ ಆಡಳಿತ ಒಪ್ಪಿಕೊಳ್ಳಲು ಸಾಧ್ಯವಿಲ್ಲ’ ಎಂದರು.

‘ಸೆಸ್ ಮತ್ತು ಸರ್‌ಚಾರ್ಜ್‌ನಿಂದ ಸಂಗ್ರಹ ಆಗಿದ್ದ ತೆರಿಗೆಯಲ್ಲಿ ಒಂದು ರೂಪಾಯಿಯನ್ನೂ ಕೇಂದ್ರ ಸರ್ಕಾರ ರಾಜ್ಯಗಳಿಗೆ ಕೊಡುವುದಿಲ್ಲ. ಆದ್ದರಿಂದ ಅದರಲ್ಲೂ ನಾವು (ರಾಜ್ಯಗಳು) ಪಾಲು ಕೇಳಬೇಕು ಎಂದು ತೀರ್ಮಾನಿಸಿದ್ದೇವೆ. ಇದಕ್ಕಾಗಿ ಸಂವಿಧಾನಕ್ಕೆ ತಿದ್ದುಪಡಿ ತರಬೇಕಿದೆ. ಇದೇ ಕಾರಣಕ್ಕೆ ನಾನು, ‘ನನ್ನ ತೆರಿಗೆ ನನ್ನ ಹಕ್ಕು’ ಎಂದು ಹೇಳುತ್ತಿದ್ದೇನೆ’ ಎಂದು ಸಮರ್ಥಿಸಿದರು.

‘ನಮ್ಮ ಸಂಸದರು, ಕೇಂದ್ರದಲ್ಲಿ ಮಂತ್ರಿಗಳಾಗಿರುವವರು ಯಾರೂ ದೆಹಲಿಯಲ್ಲಿ ಈ ಅನ್ಯಾಯವನ್ನು ಪ್ರಶ್ನಿಸುವುದೇ ಇಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಟ ಮಾಡುತ್ತಲೇ ಒಕ್ಕೂಟ ವ್ಯವಸ್ಥೆಯಲ್ಲಿ ಇದ್ದುಕೊಂಡು, ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುತ್ತೇವೆ’ ಎಂದರು.

‘ಕನ್ನಡ ಬಾವುಟ ಮತ್ತು ದ್ವಿಭಾಷಾ ನೀತಿಯ ವಿಚಾರದಲ್ಲೂ ಜನ ಎಚ್ಚೆತ್ತುಕೊಂಡು ಹೋರಾಟ ಮಾಡುವ ಅಗತ್ಯವಿದೆ. ಭಾಷೆಯಾಗಿ ಯಾವ ಭಾಷೆಯನ್ನಾದರೂ ಕಲಿಯಬಹುದು. ಆದರೆ, ಕನ್ನಡದ ಮೇಲೆ ಹಿಂದಿ ಅಥವಾ ಇತರೆ ಭಾಷೆಯ ಹೇರಿಕೆ, ಸಾಂಸ್ಕೃತಿಕ ಹೇರಿಕೆಯನ್ನು ಸಹಿಸಲು ಸಾಧ್ಯವಿಲ್ಲ’ ಎಂದೂ ಹೇಳಿದರು.

‘ಸಾಮಾನ್ಯ ಜನರ ಖರ್ಚಿನ ಮೇಲೆ ಹಾಕುವ ಜಿಎಸ್‌ಟಿ ಪ್ರಮಾಣ ಕಡಿಮೆ ಆಗಿ, ಶ್ರೀಮಂತರು ಬಳಸುವ ಐಷಾರಾಮಿ ವಸ್ತುಗಳ ಮೇಲೆ ಜಿಎಸ್‌ಟಿ ಹೆಚ್ಚಿಸಲೇಬೇಕು’ ಎಂದರು.

‘ತೆರಿಗೆ ಹಂಚಿಕೆಯಲ್ಲಿ ರಾಜ್ಯಕ್ಕೆ ಐದು ವರ್ಷದಲ್ಲಿ ದೊಡ್ಡ ಹೊಡೆತ ಬಿದ್ದು, ₹1.87 ಲಕ್ಷ ಕೋಟಿ ನಷ್ಟ ಆಗಿದೆ. ನಾವು ಕೊಡುವ ತೆರಿಗೆಯ  ₹100ರಲ್ಲಿ ನಮಗೆ ವಾಪಸ್ ಬರುವುದು ₹12ರಿಂದ ₹13 ಮಾತ್ರ. ಬೆಂಗಳೂರು ಫೆರಿಫೆರಲ್ ರಸ್ತೆ ನಿರ್ಮಾಣ ಮತ್ತು ಕೆರೆಗಳ ಅಭಿವೃದ್ದಿಗೆ ₹6 ಸಾವಿರ ಕೋಟಿ ಸೇರಿ ಒಟ್ಟು  ₹11,495 ಕೋಟಿ ವಿಶೇಷ ಅನುದಾನ ಕೊಡಲು ಹಣಕಾಸು ಆಯೋಗ ಶಿಫಾರಸು  ಮಾಡಿತ್ತು. ರಾಜ್ಯದಿಂದ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಇದನ್ನು ಕೊಡಬಾರದು ಎಂದು ತೀರ್ಮಾನಿಸಿ ದೊಡ್ಡ ಅನ್ಯಾಯ ಮಾಡಿಬಿಟ್ಟರು’ ಎಂದರು ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT