ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಠ, ದೇಗುಲಗಳಿಗೆ ಸಿದ್ದರಾಮಯ್ಯ ಅನುದಾನ

Published 27 ಜುಲೈ 2023, 0:08 IST
Last Updated 27 ಜುಲೈ 2023, 0:08 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ಮುಖ್ಯಮಂತ್ರಿ ವಿಶೇಷ ಅನುದಾನ’ದ ಅಡಿ 2023–24 ನೇ ಸಾಲಿಗೆ ವಿವಿಧ ಮಠಗಳು ಮತ್ತು ದೇವಸ್ಥಾನಗಳಿಗೆ ₹20 ಕೋಟಿ ಸಹಾಯಾನುದಾನ ಪ್ರಕಟಿಸಿದ್ದಾರೆ.

ಬಿಜೆಪಿ ಸರ್ಕಾರ ಇದ್ದಾಗ ಅದರಲ್ಲೂ ಬಿ.ಎಸ್‌.ಯಡಿಯೂರಪ್ಪ ಅವರು ಎಲ್ಲ ಸಮುದಾಯಗಳ ಮಠಗಳಿಗೂ ಪ್ರತಿ ಬಜೆಟ್‌ನಲ್ಲೂ ಅನುದಾನ ನೀಡುತ್ತಲೇ ಬಂದಿದ್ದರು. ಈ ಕ್ರಮ ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಆದರೆ, ಸಿದ್ದರಾಮಯ್ಯ ಇದೇ ಮೊದಲ ಬಾರಿಗೆ ಮಠಗಳಿಗೂ ಅನುದಾನ ನೀಡಲು ಮುಂದಾಗಿದ್ದಾರೆ. ತಮ್ಮ ಹಿಂದಿನ ಅವಧಿಯಲ್ಲಿ ಮಠಗಳಿಗೆ ಅನುದಾನ ನೀಡಿರಲಿಲ್ಲ.

2013–2018 ರ ಅವಧಿಯ ಬಜೆಟ್‌ಗಳ ವೆಚ್ಚ ಅಂದಾಜಿನ ದಾಖಲೆಗಳನ್ನು ಪರಿಶೀಲಿಸಿದಾಗ ಸಿದ್ದರಾಮಯ್ಯ ಅವರು ಮಠಗಳಿಗೆ ಅನುದಾನ ನೀಡಿರುವುದಕ್ಕೆ ಎಲ್ಲಿಯೂ ಉಲ್ಲೇಖವಿಲ್ಲ. ಆದರೆ, ಕೆಲವು ದೇವಸ್ಥಾನಗಳಿಗೆ ಅನುದಾನ ನೀಡಿರುವ ಮಾಹಿತಿ ಸಿಗುತ್ತದೆ. ವಿಶೇಷ ಅನುದಾನದಡಿ ನೀಡುವ ಮೊಬಲಗು, ಮುಖ್ಯಮಂತ್ರಿಯವರ ವಿವೇಚನಾ ಅಧಿಕಾರವನ್ನು ಒಳಗೊಂಡಿರುತ್ತದೆ.

ಬಸವರಾಜ ಬೊಮ್ಮಾಯಿ ಅವರು ಫೆಬ್ರುವರಿಯಲ್ಲಿ ಮಂಡಿಸಿದ್ದ ಚುನಾವಣಾ ಪೂರ್ವ ಬಜೆಟ್‌ನಲ್ಲಿ ವಿವಿಧ ಮಠಗಳು ಮತ್ತು ದೇವಸ್ಥಾನಗಳಿಗೆ ₹200 ಕೋಟಿ ನಿಗದಿ ಮಾಡಿದ್ದರು.  ಕಾಂಗ್ರೆಸ್ ಸರ್ಕಾರ ಬಂದ ಬಳಿಕ ಹೊಸ ಬಜೆಟ್ ಮಂಡಿಸಿದ ಸಿದ್ದರಾಮಯ್ಯ, ಇಷ್ಟು ಬೃಹತ್ ಮೊತ್ತದ ಅನುದಾನವನ್ನು  ಕಡಿತ ಮಾಡಿದ್ದಾರೆ. 

ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದರೆ, 2008–2013 ಮತ್ತು 2020– 2023(ಬೊಮ್ಮಾಯಿ ಬಜೆಟ್‌ವರೆಗೆ) ರಲ್ಲಿ ಮಠ ಮಂದಿರಗಳಿಗೆ ಸಾಕಷ್ಟು ಅನುದಾನ ನೀಡಲಾಗಿದೆ. 

ರಾಜ್ಯದ ಪ್ರಮುಖ ಮಠಗಳಾದ ಆದಿಚುಂಚನಗಿರಿ, ಸಿದ್ದಗಂಗಾ ಹಾಗೂ ಕಾಗಿನೆಲೆ ಕನಕ ಗುರುಪೀಠ, ಕೂಡಲಸಂಗಮದ ಪಂಚಮಸಾಲಿ ಪೀಠ ಸೇರಿದಂತೆ ಹಲವು ಮಠಗಳು ಸರ್ಕಾರದ ಅನುದಾನ ಪಡೆಯುತ್ತಿವೆ. 2020–21 ರಲ್ಲಿ ಯಡಿಯೂರಪ್ಪ ಅವರು ಕೋವಿಡ್‌ ಸಮಸ್ಯೆ ಇದ್ದರೂ ₹47.37 ಕೋಟಿ ವಿಶೇಷ ಅನುದಾನ ನೀಡಿದ್ದರು. 2021–22 ರಲ್ಲಿ ₹21.18, 2022–23 ರಲ್ಲಿ ₹20 ಕೋಟಿ ನಿಗದಿ ಮಾಡಿದ್ದರು.

ಜಾತಿ ಆಧಾರಿತ ಮಠಗಳಿಗೆ ಅನುದಾನ ನೀಡುವ ಪದ್ಧತಿ ಆರಂಭಿಸಿದ್ದ ಬಿ.ಎಸ್‌. ಯಡಿಯೂರಪ್ಪ ಅವರು ಮಠಗಳ ಮೂಲಕ ಆ ಸಮುದಾಯದ ಒಲವು ಗಳಿಸಲು ಪ್ರಯತ್ನಿಸಿದ್ದರು. ಆಗ 2009–10 ರಲ್ಲಿ ವಿಶೇಷ ಅನುದಾನದಡಿ ಮಠಗಳಿಗೆ ₹20 ಕೋಟಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT