ಸೋಮವಾರ, 17 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC ಮೌಲ್ಯಮಾಪನ ಎಡವಟ್ಟು: ಅಂಕಪಟ್ಟಿಯಲ್ಲಿ 30, ಛಾಯಾಪ್ರತಿಯಲ್ಲಿ 75 ಅಂಕ!

ಮೌಲ್ಯಮಾಪಕರ ಎಡವಟ್ಟು ಈಗ ಬಹಿರಂಗ
Published 25 ಮೇ 2024, 23:30 IST
Last Updated 25 ಮೇ 2024, 23:30 IST
ಅಕ್ಷರ ಗಾತ್ರ

ಕವಿತಾಳ: ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಯ ಛಾಯಾ ಪ್ರತಿಯಲ್ಲಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಮೌಲ್ಯಮಾಪನ ಎಡವಟ್ಟು ಬಯಲಾಗಿದೆ.

ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮಹಿಮೂದಾ ಅವರ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಯಲ್ಲಿ ಕನ್ನಡಕ್ಕೆ 30 ಅಂಕ ನಮೂದಿಸಲಾಗಿದೆ. ಆದರೆ, ಉತ್ತರ ಪತ್ರಿಕೆಯ ಛಾಯಾಪ್ರತಿಯಲ್ಲಿ 75 ಅಂಕ ಇರುವುದು ಈಗ ಬಹಿರಂಗಗೊಂಡಿದೆ.

ಮಹಿಮೂದಾ

ಮಹಿಮೂದಾ

ಇಂಗ್ಲಿಷ್ (60), ಹಿಂದಿ (75), ಗಣಿತ (45), ವಿಜ್ಞಾನ (48), ಸಮಾಜ ವಿಜ್ಞಾನ (45) ಮತ್ತು ಕನ್ನಡ ವಿಷಯದಲ್ಲಿ (30) ಅಂಕ ಪಡೆದ ಮಹಿಮೂದಾ ಕಡಿಮೆ ಅಂಕ ಬಂದಿದ್ದಕ್ಕೆ ಬೇಸರಗೊಂಡಿದ್ದಳು. ಪಾಲಕರು, ವಿದ್ಯಾರ್ಥಿನಿಯ ಶಿಕ್ಷಕರ ಸಲಹೆಯಂತೆ ಉತ್ತರ ಪತ್ರಿಕೆಯ ಛಾಯಾಪ್ರತಿ ತರಿಸಿದ್ದಾರೆ. ಛಾಯಾಪ್ರತಿಯಲ್ಲಿ 75 ಅಂಕ ನಮೂದಿಸಿದ್ದು ಆಂತರಿಕ ಅಂಕ ಸೇರಿಸಿದಲ್ಲಿ ಬಾಲಕಿ ಒಟ್ಟು 100 ಅಂಕ ಪಡೆದಿದ್ದಾಳೆ. 

ಉತ್ತರ ಪತ್ರಿಕೆಯ 16 ಪುಟಗಳಲ್ಲಿ ಸರಿ ಉತ್ತರಕ್ಕೆ ಅಂಕ ನೀಡಿದ ಮೌಲ್ಯಮಾಪಕರು ಆಯಾ ಪುಟದ ಕೊನೆಯಲ್ಲಿ ಅಂಕ ಒಟ್ಟುಗೂಡಿಸಿದ್ದಾರೆ.


ಮೌಲ್ಯಮಾಪಕರ ಉಪಯೋಗಕ್ಕೆ ಇರುವ ಮೊದಲ ಪುಟದಲ್ಲಿ ಪ್ರಶ್ನೆಗಳ ಕ್ರಮ ಸಂಖ್ಯೆ ಮುಂದೆ ಕೆಂಪು ಶಾಹಿಯಲ್ಲಿ ಅಂಕ ಹಾಕಿದ್ದು ಕೊನೆ ಸಾಲಿನಲ್ಲಿ ಒಟ್ಟು 13 ಅಂಕದ ಬದಲಿಗೆ 11 ಅಂಕ ಎಂದು ನಮೂದಿಸಿದ್ದಾರೆ. ಒಟ್ಟು 76 ಅಂಕ ಎಂದು ಅಂಕಿ ಹಾಗೂ ಅಕ್ಷರದಲ್ಲಿ ಬರೆದು ಬಳಿಕ ಅದನ್ನು ಹೊಡೆದುಹಾಕಿ 75 ಎಂದು ಸರಿಯಾಗಿ ಒಟ್ಟುಗೂಡಿಸಿದ್ದಾರೆ. ಪ್ರಕಟಿತ ಫಲಿತಾಂಶದಲ್ಲಿ ಬಾಲಕಿಗೆ 30 ಅಂಕ ಮಾತ್ರ ದಕ್ಕಿವೆ.

‘ಮೌಲ್ಯಮಾಪನದ ಬಳಿಕ ಎರಡು ಹಂತದ ಪರಿಶೀಲನೆ ನಡೆಯುತ್ತದೆ. 3ನೇ ಹಂತದಲ್ಲಿ 10 ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳನ್ನು ಒಟ್ಟಾಗಿಸಿ ಒಂದು ಒಎಂಆರ್‌ ಶೀಟ್‌ ಲಗತ್ತಿಸಲಾಗುತ್ತದೆ. ಅದರಲ್ಲಿ ಹತ್ತು ಮಕ್ಕಳ ಅಂಕಗಳನ್ನು ಹಾಕಲಾಗುತ್ತದೆ. ಮತ್ತೆ ಎರಡು ಹಂತದ ಪರಿಶೀಲನೆ ನಡೆದ ಬಳಿಕ ಕಂಪ್ಯೂಟರ್‌ಗೆ ಎಂಟ್ರಿ ಮಾಡಲಾಗುವುದು. ಈ ಹಂತದಲ್ಲಿ ಅಂಕದಲ್ಲಿ ವ್ಯತ್ಯಾಸ ಕಂಡು ಬಂದರೆ ಸರಿಹೊಂದುತ್ತಿಲ್ಲ ಎಂದು ಕಂಪ್ಯೂಟರ್‌ ತೋರಿಸುತ್ತದೆ. ಆಗ ಹಿರಿಯ ಅಧಿಕಾರಿಯ ಲಾಗಿನ್‌ ಬಳಸಿ ಒಟ್ಟಾರೆ ತಪ್ಪುಗಳನ್ನು ಸರಿಪಡಿಸಲಾಗುವುದು. ಈ ಪ್ರಕರಣದಲ್ಲಿ ಮೌಲ್ಯಮಾಪಕ ಸರಿಯಾಗಿ ಅಂಕ ಒಟ್ಟುಗೂಡಿಸಿದ್ದರೂ ಕೊನೆಯಲ್ಲಿ ಕಡಿಮೆ ಅಂಕ ನಮೂದು ಮಾಡಿದ್ದು ಅದೇ ಮುಂದುವರಿದಂತೆ ಕಂಡು ಬರುತ್ತಿದೆ’ ಎಂದು 25 ವರ್ಷಗಳಿಂದ ಮೌಲ್ಯಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರೊಬ್ಬರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT