ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಎಸ್‌ಎಸ್‌ಎಲ್‌ಸಿ | ಉತ್ತರ ಪತ್ರಿಕೆ ಛಾಯಾಪ್ರತಿಗೆ ಭಾರಿ ಬೇಡಿಕೆ

ಸಕಾಲಕ್ಕೆ ಒದಗಿಸಲು ಹೊರಗುತ್ತಿಗೆ ಸಿಬ್ಬಂದಿಯಿಂದ ಹಗಲು – ರಾತ್ರಿ ಕೆಲಸ
Published 22 ಮೇ 2024, 23:30 IST
Last Updated 22 ಮೇ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: 2023–24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಗಣನೀಯವಾಗಿ ಕುಸಿದ ಬೆನ್ನಲ್ಲೇ ಉತ್ತರ ಪತ್ರಿಕೆಗಳ ಛಾಯಾಪ್ರತಿ (ಸ್ಕ್ಯಾನ್ಡ್‌ ಕಾಪಿ) ಪಡೆಯಲು 62 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಪ್ರತಿಗಳನ್ನು ಸಕಾಲಕ್ಕೆ ಒದಗಿಸಲು ಹೊರಗುತ್ತಿಗೆ ಸಿಬ್ಬಂದಿ ಹಗಲು–ರಾತ್ರಿ ಕೆಲಸ ಮಾಡುತ್ತಿದ್ದಾರೆ.

ಎಸ್‌ಎಸ್‌ಎಲ್‌ಸಿ ಮೌಲ್ಯಮಾಪನದ ನಂತರ ಫಲಿತಾಂಶ ಶೇ 53ರಷ್ಟಿತ್ತು. ಕಡಿಮೆ ಫಲಿತಾಂಶ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಮನಗಂಡ ಶಾಲಾ ಶಿಕ್ಷಣ ಇಲಾಖೆ, ಕೃಪಾಂಕದ  ನಿಯಮದಲ್ಲಿ ಸಡಿಲಿಕೆ ಮಾಡಲು ಪರೀಕ್ಷಾ ಮಂಡಳಿಗೆ ಸೂಚಿಸಿತ್ತು. 

ಹಿಂದೆ ಮೂರು ವಿಷಯಗಳಲ್ಲಿ 35 ಅಂಕ ಪಡೆದಿದ್ದು, ಉಳಿದ ಮೂರು ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದರೆ ಪ್ರತಿ ವಿಷಯದಲ್ಲೂ ಗರಿಷ್ಠ 10 ಕೃಪಾಂಕ ನೀಡಿ ತೇರ್ಗಡೆ ಮಾಡಲಾಗುತ್ತಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೃಪಾಂಕ ಪಡೆಯಲು ಇದ್ದ ಶೇ 35 ಅರ್ಹ ಅಂಕಗಳನ್ನು 25ಕ್ಕೆ ಇಳಿಸಿ, ಗರಿಷ್ಠ 20 ಕೃಪಾಂಕ ನೀಡಲಾಗಿದೆ. ಇದರಿಂದ ಒಟ್ಟಾರೆ ಫಲಿತಾಂಶ ಶೇ 73.40ಕ್ಕೆ ಹಿಗ್ಗಿದೆ. ಪರೀಕ್ಷೆ ಬರೆದಿದ್ದ 8.59 ಲಕ್ಷ ವಿದ್ಯಾರ್ಥಿಗಳಲ್ಲಿ 1.69 ಲಕ್ಷ ವಿದ್ಯಾರ್ಥಿಗಳು ಕೃಪಾಂಕದ ಆಧಾರದಲ್ಲಿ ತೇರ್ಗಡೆ
ಯಾಗಿದ್ದಾರೆ. ಹೀಗೆ ತೇರ್ಗಡೆಯಾದ ವಿದ್ಯಾರ್ಥಿಗಳ ಕಳಪೆ ಫಲಿತಾಂಶಕ್ಕೆ ಕಾರಣಗಳನ್ನು ಕಂಡುಕೊಳ್ಳಲು ಆಯಾ ಶಾಲೆಗಳ ಶಿಕ್ಷಕರು ಹಾಗೂ ಪೋಷಕರ ಸಲಹೆಯಂತೆ ಅಧಿಕ ಸಂಖ್ಯೆಯ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಗಳ ಛಾಯಾಪ್ರತಿಗಳಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಪ್ರತಿಯೊಬ್ಬ ವಿದ್ಯಾರ್ಥಿಯೂ ಈ ಬಾರಿ ಕನಿಷ್ಠ 4 ವಿಷಯಗಳಲ್ಲಿ ಛಾಯಾಪ್ರತಿ ಪಡೆಯುತ್ತಿದ್ದಾರೆ.

ಉತ್ತರ ಪತ್ರಿಕೆಗಳ ಛಾಯಾಪ್ರತಿ ಪಡೆಯಲು ಮೇ 9ರಿಂದ 16ರವರೆಗೆ, ಚಲನ್‌ ಡೌನ್‌ಲೋಡ್‌ ಮಾಡಿಕೊಂಡು ಶುಲ್ಕ ಭರಿಸಲು ಮೇ 17ರವರೆಗೆ ಅವಕಾಶ ನೀಡಲಾಗಿತ್ತು. ಛಾಯಾಪ್ರತಿ ಡೌನ್‌ಲೋಡ್‌ ಮಾಡಿಕೊಳ್ಳಲು 19ರವರೆಗೂ ಸಮಯ ನೀಡಲಾಗಿತ್ತು. ಸಮಯ ಮುಗಿದ ನಂತರವೂ ಹಲವು ವಿದ್ಯಾರ್ಥಿಗಳಿಗೆ ಪ್ರತಿಗಳನ್ನು ತಲುಪಿಸುವ ಕೆಲಸ ನಡೆಯುತ್ತಿದೆ.

ಮಂಡಳಿಯಲ್ಲೇ ಪ್ರತ್ಯೇಕ ಕೊಠಡಿ:  ಉತ್ತರ ಪತ್ರಿಕೆಗಳನ್ನು ಸ್ಕ್ಯಾನ್‌ ಮಾಡಿ, ಅಪ್‌ಲೋಡ್‌ ಮಾಡಲು ಹೊರಗುತ್ತಿಗೆ ನೀಡಲಾಗಿದೆ. ಹೊರಗುತ್ತಿಗೆ ನಿಯೋಜಿಸಿರುವ ಸಿಬ್ಬಂದಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಕಟ್ಟಡದ ಒಂದು ಕೊಠಡಿಯಲ್ಲೇ ಕೆಲಸ ಮಾಡುತ್ತಿದ್ದಾರೆ. 15ಕ್ಕೂ ಹೆಚ್ಚು ಯಂತ್ರಗಳ ಸಹಾಯದಿಂದ ಹಗಲು–ರಾತ್ರಿ ಮೂರು ಪಾಳಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

‘ಹಿಂದೆಯೂ ಛಾಯಾ ಪ್ರತಿ ಪಡೆಯಲು ಅಧಿಕ ಸಂಖ್ಯೆಯ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ವಿದ್ಯಾರ್ಥಿಗಳು ಒಂದು ಅಥವಾ ಎರಡು ವಿಷಯಗಳ ಪ್ರತಿ ಪಡೆಯುತ್ತಿದ್ದರು. ಈ ಬಾರಿ ಕನಿಷ್ಠ ನಾಲ್ಕು ವಿಷಯಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಇದರಿಂದ ಒತ್ತಡ ಹೆಚ್ಚಾಗಿದೆ’ ಎನ್ನುತ್ತಾರೆ ಮಂಡಳಿ ಅಧಿಕಾರಿಗಳು.

₹10 ಕೋಟಿಗೂ ಅಧಿಕ ಆದಾಯ
ಪ್ರತಿ ವಿಷಯದ ಛಾಯಾ ಪ್ರತಿ ಪಡೆಯಲು ₹530 ನಿಗದಿ ಮಾಡಲಾಗಿದೆ. 62 ಸಾವಿರ ಅರ್ಜಿಗಳಲ್ಲಿ ಬಹುತೇಕರು ಕನಿಷ್ಠ ನಾಲ್ಕು ವಿಷಯಗಳ ಪ್ರತಿ ಪಡೆಯುತ್ತಿದ್ದಾರೆ. ಇದರಿಂದ ಮಂಡಳಿಗೆ ₹10 ಕೋಟಿಗೂ ಅಧಿಕ ಶುಲ್ಕ ಹರಿದು ಬಂದಿದೆ. ಎಸ್‌ಎಸ್‌ಎಲ್‌ಸಿ ಛಾಯಾ ಪ್ರತಿಗೆ ಅರ್ಜಿ ಸಲ್ಲಿಸುವ ಅವಧಿ ಮುಗಿದ ಬೆನ್ನಲ್ಲೇ
ಪಿಯು ಎರಡನೇ ಪರೀಕ್ಷೆಯ ಉತ್ತರ ಪತ್ರಿಕೆಗಳ ಛಾಯಾಪ್ರತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.  ಮೇ 21ರಿಂದ ಮೇ 23ರವರೆಗೆ ಅವಕಾಶ ಕಲ್ಪಿಸಲಾಗಿದೆ. 22ರಿಂದ 24ರ ಒಳಗೆ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

62,033 - ಸಲ್ಲಿಕೆಯಾದ ಅರ್ಜಿಗಳು

61,999 - ಇತ್ಯರ್ಥವಾದ ಅರ್ಜಿಗಳು

34 - ಬಾಕಿ ಇರುವ ಅರ್ಜಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT