ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೂರುಗಳಿದ್ದರೆ ಪರಿಹರಿಸಲು ಸಿದ್ಧ: ಸತೀಶ ಜಾರಕಿಹೊಳಿ

Published 16 ಫೆಬ್ರುವರಿ 2024, 23:03 IST
Last Updated 16 ಫೆಬ್ರುವರಿ 2024, 23:03 IST
ಅಕ್ಷರ ಗಾತ್ರ

ಬೆಂಗಳೂರು: ‘ಲೋಕೋಪಯೋಗಿ ಇಲಾಖೆಯನ್ನು ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲೇ ಮಾದರಿ ಇಲಾಖೆಯನ್ನಾಗಿ ರೂಪಿಸುವ ಗುರಿ ಹೊಂದಿದ್ದೇನೆ. ಇಲಾಖೆಯೊಳಗೆ ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನನ್ನ ಗಮನಕ್ಕೆ ತನ್ನಿ. ಪರಿಹರಿಸಲು ಸಿದ್ಧನಿದ್ದೇನೆ’ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಸಣ್ಣ ಗುತ್ತಿಗೆದಾರರ ಬಾಕಿ ಬಿಲ್‌ಗಳನ್ನು ಒಂದೇ ಬಾರಿಗೆ ಪಾವತಿಸಿರುವ ನಿರ್ಧಾರಕ್ಕಾಗಿ ರಾಜ್ಯ ಗುತ್ತಿಗೆದಾರರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ‘ಲೋಕೋಪಯೋಗಿ ಇಲಾಖೆಗೆ ಹೊಸ ರೂಪ ನೀಡುವ ಪ್ರಕ್ರಿಯೆ ಆರಂಭವಾಗಿದೆ. ಅದಕ್ಕೆ ಬೇಕಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗುವುದು’ ಎಂದರು.

‘ಸಚಿವನಾಗಿರುವ ಕಾರಣಕ್ಕೆ ನಾನು ಬೇಕಾಬಿಟ್ಟಿ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ನನ್ನ ಇತಿಮಿತಿ ಅರಿತು ನಿರ್ಧಾರ ಕೈಗೊಳ್ಳಬೇಕು. ಇಲಾಖೆಯಲ್ಲಿ ಗುತ್ತಿಗೆದಾರರಿಗೆ ಇನ್ನೂ ₹ 4,000 ಕೋಟಿಯಷ್ಟು ಬಿಲ್‌ ಬಾಕಿ ಇದೆ. ಈ ತಿಂಗಳ ಅಂತ್ಯದೊಳಗೆ ₹ 2,000 ಕೋಟಿ ಬಿಲ್‌ ಪಾವತಿಸಲಾಗುವುದು’ ಎಂದರು.

ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇದ್ದರೆ ಗುತ್ತಿಗೆದಾರರು ಮೊದಲು ತಮ್ಮ ಗಮನಕ್ಕೆ ತರಬೇಕು. ತಮ್ಮಿಂದ ಪರಿಹಾರ ದೊರಕದಿದ್ದರೆ ಎಲ್ಲಿ ಬೇಕಾದರೂ ಅಹವಾಲು ಸಲ್ಲಿಸಬಹುದು. ಇಲಾಖೆಯ ಸಮಸ್ಯೆಗಳ ಕುರಿತು ಮುಕ್ತ ಮನಸ್ಸಿನಿಂದ ಅಹವಾಲು ಆಲಿಸಿ, ಪರಿಹಾರ ಕ್ರಮ ಕೈಗೊಳ್ಳಲು ತಾವು ಸಿದ್ಧ ಎಂದು ಹೇಳಿದರು.

ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಮಾತನಾಡಿ, ‘ಗುತ್ತಿಗೆದಾರರಿಗೆ ಬಾಕಿ ಇರುವ ₹ 4,000 ಕೋಟಿ ಮೊತ್ತದ ಬಾಕಿ ಬಿಲ್‌ಗಳನ್ನು ಆದಷ್ಟು ಬೇಗ ಬಿಡುಗಡೆ ಮಾಡಿ’ ಎಂದು ಮನವಿ ಮಾಡಿದರು.

ಲೋಕೋಪಯೋಗಿ ಇಲಾಖೆಯ ಕಾರ್ಯದರ್ಶಿ ಸಿ. ಸತ್ಯನಾರಾಯಣ, ಮುಖ್ಯ ಇಂಜಿನಿಯರ್ ದುರ್ಗಪ್ಪ, ಆಂತರಿಕ ಆರ್ಥಿಕ ಸಲಹೆಗಾರ ಸೋಮನಾಥ್, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮುಖ್ಯ ಯೋಜನಾಧಿಕಾರಿ ಶಿವಯೋಗಿ ಹಿರೇಮಠ್, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳಾದ ಜಿ. ಎಂ. ರವೀಂದ್ರ, ಆರ್, ಮಂಜುನಾಥ್, ಬಿ.ಸಿ.ದಿನೇಶ್, ಬಿ. ಎನ್ . ಕೃಷ್ಣೇಗೌಡ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT