ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಅಲುಗಾಡಿಸುವುದು ಅಸಾಧ್ಯ

Last Updated 10 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಗಂಡುಗಲಿ ಕುಮಾರರಾಮ ಪ್ರಧಾನ ವೇದಿಕೆ (ಗಂಗಾವತಿ): ಕನ್ನಡ ಸಾಹಿತ್ಯ, ಸಂಸ್ಕೃತಿಯ ಪೀಠದಂತಿರುವ ಕನ್ನಡ ಸಾಹಿತ್ಯ ಪರಿಷತ್ತನ್ನು ಯಾರಿಂದಲೂ ಅಲುಗಾಡಿಸಲು ಸಾಧ್ಯವಿಲ್ಲ ಎಂದು ಪರಿಷತ್ತಿನ ಮಾಜಿ ಅಧ್ಯಕ್ಷ ಪ್ರೊ.ಜಿ.ಎಸ್. ಸಿದ್ಧಲಿಂಗಯ್ಯ ಅಭಿಪ್ರಾಯಪಟ್ಟರು.

ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ದಿನವಾದ ಶನಿವಾರ ಹಮ್ಮಿಕೊಂಡಿದ್ದ `ಕನ್ನಡ ಸಾಹಿತ್ಯ ಸಮ್ಮೇಳನಗಳು: ಸಿಂಹಾವಲೋಕನ~ ಕುರಿತ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರಿಷತ್ತಿಗೆ ವೈಭವದ ಇತಿಹಾಸವಿದೆ. ಜ್ಞಾನವೃದ್ಧ, ವಯೋವೃದ್ಧವೂ ಆಗಿರುವ ಪರಿಷತ್ತು ಶತಮಾನೋತ್ಸವದ ಹೊಸ್ತಿಲಲ್ಲಿದೆ. ಪರಿಷತ್ತಿನ ಸಮ್ಮೇಳನಗಳಿಗೆ ಪರ್ಯಾಯ ಸಮ್ಮೇಳನ, ಬಂಡಾಯ ಸಮಾವೇಶದಂಥ ಪ್ರಯತ್ನಗಳು ನಡೆದವು. ಅದಾವುದಕ್ಕೂ ಪರಿಷತ್ತು ಜಗ್ಗಲಿಲ್ಲ. ಈಗಲೂ ಪರಿಷತ್ತು ನಾಡು ಕಟ್ಟುವ ಕೈಂಕರ್ಯದಲ್ಲಿ ಯಶಸ್ವಿಯಾಗಿ ತೊಡಗಿಸಿಕೊಂಡಿದೆ ಎಂದು ಹೇಳಿದರು.

ಕನ್ನಡ ಶಾಲೆಗಳನ್ನು ಮುಚ್ಚಿದರೆ ಕನ್ನಡದ ಬಾಯಿ ಮುಚ್ಚಿದಂತೆ. ಅದನ್ನು ಪರಿಷತ್ತು ವಿರೋಧಿಸುತ್ತದೆ. ಕನ್ನಡ ವಿರೋಧಿಯಾದ ಈ ಕೆಲಸದ ವಿರುದ್ಧ ಅನಿವಾರ್ಯವಾದರೆ ಪರಿಷತ್ತಿನ ಪದಾಧಿಕಾರಿಗಳಾದ ತಾವೆಲ್ಲ ಹೋರಾಡಲು ಸಿದ್ಧ ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನಗಳು ಜಾತ್ರೆಗಳಾಗುತ್ತಿವೆ ಎಂಬ ಸಾಮಾನ್ಯ ಆರೋಪವಿದೆ. ಆದರೆ ನೂರಾರು ಸಾಹಿತ್ಯಾಭಿಮಾನಿಗಳು ಪ್ರತಿನಿಧಿ ಶುಲ್ಕ ನೀಡಿ ಸಮ್ಮೇಳನಕ್ಕೆ ಬರುತ್ತಾರೆ. ಕನ್ನಡ ಶಾಲೆಗಳನ್ನು ಮುಚ್ಚಬೇಡಿ ಎಂಬ ಕೂಗು ಹಾಕುತ್ತಾರೆ. ಕೋಟ್ಯಂತರ ರೂ ಮೌಲ್ಯದ ಕನ್ನಡ ಪುಸ್ತಕಗಳ ವ್ಯಾಪಾರ ನಡೆಯುತ್ತದೆ. ಇದು ಕನ್ನಡಾಭಿಮಾನ ಅಲ್ಲವೆ ಎಂದು ಪ್ರಶ್ನಿಸಿದರು.

ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ.ವೀರಣ್ಣ ರಾಜೂರ ಅವರು `ಕನ್ನಡ ಚಾರಿತ್ರಿಕ ಕಾಲಘಟ್ಟ ಮತ್ತು ಸಾಹಿತ್ಯ ಸಮ್ಮೇಳನ~ ಕುರಿತು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತು ಅಸ್ತಿತ್ವಕ್ಕೆ ಬರುವ ಮುಂಚೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ ಮುಂತಾದ ಸಾಂಸ್ಕೃತಿಕ ಸಂಸ್ಥೆಗಳು ಕನ್ನಡದ ಕೆಲಸ ಮಾಡಿದವು. ಎಚ್.ವಿ. ನಂಜುಂಡಯ್ಯ ಅವರಿಂದ ನಲ್ಲೂರು ಪ್ರಸಾದ್‌ವರೆಗೆ 23 ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್‌ನ್ನು ಬೆಳೆಸಿದ್ದಾರೆ. 76 ವಿದ್ವಾಂಸರ ಅಧ್ಯಕ್ಷತೆಯಲ್ಲಿ ಸಮ್ಮೇಳನಗಳು ನಡೆದಿವೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಪರಿಷತ್ತು ತನ್ನ ವ್ಯಾಪ್ತಿ ವಿಸ್ತರಿಸಿಕೊಳ್ಳಬೇಕು. ಚಟುವಟಿಕೆಗಳು ತೀಕ್ಷ್ಣವಾಗಬೇಕು. ಸಂಸ್ಥೆ ಸರ್ಕಾರದ ಹಂಗಿಲ್ಲದೇ ತಲೆ ಎತ್ತಿ ನಿಲ್ಲಬೇಕು. ಕನ್ನಡಿಗರೂ ಧ್ವನಿಗೂಡಿಸಬೇಕು ಎಂದು ಸಲಹೆಯಿತ್ತರು.

ಜಾನಪದ ವಿದ್ವಾಂಸ ಮೇಟಿಕೆರೆ ಹಿರಿಯಣ್ಣ, `ಸಾಹಿತ್ಯ ಸಮ್ಮೇಳನಗಳು ಮತ್ತು ಶ್ರೀಸಾಮಾನ್ಯರ ಸಂಭ್ರಮ~ ವಿಷಯವಾಗಿ ಮಾತನಾಡಿ, ಪ್ರಾರಂಭದ ಸಮ್ಮೇಳನಗಳಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಕಡಿಮೆಯಿತ್ತು.

ಬಿಎಂಶ್ರೀ, ಅನಕೃ, ರಾಮಮೂರ್ತಿ ಮುಂತಾದ ಮಹನೀಯರು ಕರ್ನಾಟಕ ಪರಂಪರೆಯ ಕುರಿತು ಜನಸಾಮಾನ್ಯರಿಗೆ ಅರಿವು ಮೂಡಿಸಿದರು. ಕ್ರಮೇಣ ಪಂಡಿತ-ಪಾಮರರನ್ನೂ ಸಮ್ಮೇಳನಗಳು ಸೆಳೆದವು ಎಂದು ವಿವರಿಸಿದರು.

ಲೇಖಕ ಡಾ.ಎಂ.ಎಲ್. ಶಂಕರಲಿಂಗಪ್ಪ, `ಸಮ್ಮೇಳನಾಧ್ಯಕ್ಷರ ಭಾಷಣಗಳು~ ಕುರಿತು ಮಾತನಾಡಿ, ಸಮ್ಮೇಳನಾಧ್ಯಕ್ಷರು ಮಾತನಾಡದ ವಿಷಯಗಳೇ ಇಲ್ಲ. ಅವರು ಇತಿಹಾಸ ಕೆದಕಿದ್ದಾರೆ, ಗಡಿ ಸಮಸ್ಯೆಗಳ ಪ್ರಸ್ತಾಪವಾಗಿದೆ, ಸಾಹಿತಿಗಳ ಸಣ್ಣತನಗಳನ್ನೂ ಬಯಲಿಗೆ ಎಳೆದಿದ್ದಾರೆ. ಮಹಿಳೆಯರ ಸಮಸ್ಯೆ ಬಗ್ಗೆಯೂ ಪ್ರಸ್ತಾಪಿಸಿದ್ದಾರೆ ಎಂದು ವಿವರಿಸಿದರು.

ಸಮ್ಮೇಳನಾಧ್ಯಕ್ಷರ ಭಾಷಣಗಳು 6 ಪುಟದಿಂದ 98 ಪುಟಗಳವರೆಗೂ ಇವೆ. ಅವು ಒಂದೇ ಗತಿಯಲ್ಲಿಲ್ಲ. ಅವುಗಳಲ್ಲಲಿ ಸಾಕಷ್ಟು ಏರಿಳಿತಗಳನ್ನು ಕಾಣಬಹುದು. ಕೆಲವರ ಭಾಷಣ ಕಾವ್ಯಾತ್ಮಕವಾಗಿವೆ ಎಂದು ವಿಶ್ಲೇಷಿಸಿದರು.

ಆಶಯ ನುಡಿಗಳನ್ನಾಡಿದ ಲೇಖಕ `ಪುಸ್ತಕಮನೆ~ ಹರಿಹರಪ್ರಿಯ, ಕಸಾಪ ಅಡೆತಡೆಗಳ ನಡುವೆಯೇ ಬೆಳೆದು ಬಂದಿದೆ ಎಂದು ಹೇಳಿದರು. `ಆಳುವವರ ಸಂಬಂಧವಿಲ್ಲದೇ ಪರಿಷತ್ ಚಟುವಟಿಕೆ ನಡೆಯಬೇಕು ಎಂಬ ಆಶಯ ಇನ್ನೂ ಈಡೇರಿಲ್ಲ~ ಎಂದು ಅವರು ವಿಷಾದಿಸಿದರು. ಬಿ.ಎಂ. ಸದಾಶಿವಪ್ಪ ಶ್ಯಾಗಲೆ ಸ್ವಾಗತಿಸಿದರು. ಪ್ರೊ.ಡಿ. ಚಂದ್ರಪ್ಪ ವಂದಿಸಿದರು. ರಾಜಶೇಖರ ಅಂಗಡಿ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT