ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗಪುರ | ಭಾರತ ಮೂಲದ ಅಧಿಕಾರಿ ಸಾವು: ಜನಾಂಗೀಯ ನಿಂದನೆ ಆರೋಪ ಕುರಿತು ತನಿಖೆ

Published 6 ಫೆಬ್ರುವರಿ 2024, 10:03 IST
Last Updated 6 ಫೆಬ್ರುವರಿ 2024, 10:03 IST
ಅಕ್ಷರ ಗಾತ್ರ

ಸಿಂಗಪುರ: ‘ಭಾರತೀಯ ಮೂಲದ ಪೊಲೀಸ್ ಅಧಿಕಾರಿ ಸಾರ್ಜೆಂಟ್ ಯುವರಾಜ್ ಗೋಪಾಲ್ ಅವರ ಸಾವು ಹಾಗೂ ಅದಕ್ಕೂ ಮೊದಲು ಅವರು ಮಾಡಿರುವ ಜನಾಂಗೀಯ ನಿಂದನೆ ಮತ್ತು ವರ್ಣಭೇದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಿಂಗಪುರ ಸರ್ಕಾರ, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ವಿದೇಶಾಂಗ ಸಚಿವ ಕೆ.ಷಣ್ಮುಗಂ ಮಂಗಳವಾರ ಹೇಳಿದ್ದಾರೆ.

ಕಳೆದ ವರ್ಷ ಮೃತಪಟ್ಟ ಸರ್ಜೆಂಟ್ ಯುವರಾಜ್ ಗೋಪಾಲ್ ಎಂಬುವವರ ಸಾವಿನ ಕುರಿತು ಸಂಸತ್‌ನಲ್ಲಿ ಹೇಳಿಕೆ ನೀಡಿದ ಷಣ್ಮುಗಂ, ‘35 ವರ್ಷದ ಅಧಿಕಾರಿ ಕಳೆದ ಜುಲೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಂಗಪುರ ಪೊಲೀಸ್‌ನಲ್ಲಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು’ ಎಂದು ಮಾಹಿತಿ ನೀಡಿದ್ದಾರೆ.

ಯುವರಾಜ್ ಅವರು ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್ ಅನ್ನು ನಂತರ ಅಳಿಸಲಾಗಿದೆ. ಸಾರ್ಜೆಂಟ್ ಯುವರಾಜ್ ಅವರು ತಮ್ಮ ಮೇಲಧಿಕಾರಿಗಳಿಂದ ಕಿರುಕುಳ ಮತ್ತು ಸಹೋದ್ಯೋಗಿಗಳಿಂದ ಜನಾಂಗೀಯ ನಿಂದನೆ ಅನುಭವಿಸಿದ್ದನ್ನು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು. 

‘ಕೆಲ ಮೇಲಧಿಕಾರಿಗಳ ತಪ್ಪುಗಳನ್ನು ಮುಚ್ಚಿಹಾಕಲಾಗಿದೆ. ಕರ್ತವ್ಯದ ಮೌಲ್ಯಮಾಪನ ತನಗೆ ವಿರುದ್ಧವಾಗಿ ಮಾಡಲಾಗಿತ್ತು. ಜತೆಗೆ ಸಹೋದ್ಯೋಗಿಗಳು ತನ್ನನ್ನು ಬಹಿಷ್ಕರಿಸಿದ್ದರು’ ಎಂದು ಯುವರಾಜ್ ಆರೋಪಿಸಿದ್ದರು. 

‘ಮುಕ್ತ ಚರ್ಚೆ, ಉತ್ತಮ ಸಂಸ್ಕೃತಿಕ ಹಾಗೂ ಅಧಿಕಾರಿಗಳನ್ನು ನಿರಂತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಿಕೆಯಂತ ಕ್ರಮಗಳನ್ನು ಪೊಲೀಸರು ಕೈಗೊಂಡಿದ್ದಾರೆ. ಜನಾಂಗೀಯ ನಿಂದನೆ ಮತ್ತು ವರ್ಣಭೇದ ಕುರಿತು ನಿರಂತರ ಜಾಗೃತಿ ಕಾರ್ಯಕ್ರಮಗಳ ಮೂಲಕ ಅಧಿಕಾರಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

‘ಯುವರಾಜ್ ಅವರ ಸಾವಿನ ಕುರಿತು ಎಸ್‌ಪಿಎಫ್‌ ಮತ್ತೊಂದು ತನಿಖೆ ನಡೆಸಿದೆ. ಈ ಕುರಿತು ಅಟಾರ್ನಿ ಜನರಲ್ ಚೇಂಬರ್ಸ್‌ ಪರಿಶೀಲನೆ ನಡೆಸಲಿದೆ. ಈ ತನಿಖೆಯಲ್ಲಿ ಸಾರ್ಜೆಂಟ್ ಯುವರಾಜ್ ಅವರ ಸಾವಿಗೂ ಮೊದಲು ಹೇಳಿದ ಮಾಹಿತಿ ಸತ್ಯಕ್ಕೆ ಸಮೀಪವಿದೆ. ಹೀಗಾಗಿ ಇದರಲ್ಲಿ ಭಾಗಿಯಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಆದರೆ ಈ ಪ್ರಕರಣದಲ್ಲಿ ಯುವರಾಜ್ ಅವರ ಕುಟುಂಬದ ಹಿತವನ್ನು ಪರಿಗಣಿಸಿ ವಿಷಯದ ಹೆಚ್ಚಿನ ಆಳಕ್ಕೆ ಇಳಿಯಬಯಸುವುದಿಲ್ಲ. ಆದರೆ ಸಾರ್ವಜನಿಕ ವಿಷಯವಾದ್ದರಿಂದ ಇಷ್ಟು ಮಾಹಿತಿಯನ್ನು ನೀಡುತ್ತಿದ್ದೇನೆ’ ಎಂದು ಷಣ್ಮುಗಂ ಸದನಕ್ಕೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT