ಸೋಲ್: ತನ್ನ ವಿರೋಧಿಗಳ ಹತ್ಯೆಗೆ ಉತ್ತರ ಕೊರಿಯಾ ಸುಂದರ ಮಹಿಳೆಯರನ್ನು ಬಳಸಿಕೊಳ್ಳುತ್ತಿದೆ ಎಂದು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ಟೀಕಾಕಾರ ಆನ್ ಚಾನ್ 2 ಹೇಳಿದ್ದಾರೆ.
ಶಸ್ತ್ರ ಮತ್ತು ವಿಷಯುಕ್ತ ಸಾಧನಗಳನ್ನು ಹೊಂದಿರುವ ಮಹಿಳಾ ಕೊಲೆಗಾರರು ಪುರುಷರಿಗಿಂತ ಹೆಚ್ಚು ಸುಲಭವಾಗಿ ತಮ್ಮ ಕೆಲಸ ಮಾಡಬಲ್ಲರು. ವಿಷ ಬಳಸಿ ಹತ್ಯೆ ಮಾಡುವುದಕ್ಕಾಗಿ ಯುವತಿಯರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮಲೇಷ್ಯಾದಲ್ಲಿ ಕಿಮ್ ಜಾಂಗ್ ಉನ್ ಮಲಸಹೋದರ ಕಿಮ್ ಜಾಂಗ್ ನಮ್ ಅವರ ಹತ್ಯೆ ನಡೆದ ಬೆನ್ನಲ್ಲೇ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.
ಉತ್ತರ ಕೊರಿಯಾ ಸೇನೆಯಲ್ಲಿ ಕಮಾಂಡೊ ಆಗಿದ್ದ ಆನ್ ಅವರನ್ನು ದೇಶದ್ರೋಹ ಆರೋಪದಲ್ಲಿ 1979ರಂದು ಗಡೀಪಾರು ಮಾಡಲಾಗಿತ್ತು.
ಮೃತದೇಹ ಹಸ್ತಾಂತರ: ಕಿಮ್ ಜಾಂಗ್ ನಮ್ ಅವರ ಮೃತದೇಹವನ್ನು ಉತ್ತರ ಕೊರಿಯಾಕ್ಕೆ ಹಸ್ತಾಂತರಿಸುವುದಾಗಿ ಮಲೇಷ್ಯಾ ಉಪಪ್ರಧಾನಿ ತಿಳಿಸಿದ್ದಾರೆ.
ಮೃತದೇಹ ಕಳುಹಿಸುವುದಕ್ಕೂ ಮುನ್ನ ಕೆಲವು ಪ್ರಕ್ರಿಯೆಗಳು ನಡೆಯಬೇಕಿದೆ ಎಂದು ಅವರು ಹೇಳಿದ್ದಾರೆ.
**
ಮತ್ತೊಬ್ಬ ಮಹಿಳೆ ಬಂಧನ
ಕ್ವಾಲಾಲಂಪುರ: ಕಿಮ್ ಜಾಂಗ್ ನಮ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೇಷ್ಯಾ ಪೊಲೀಸರು ಮತ್ತೊಬ್ಬ ಮಹಿಳೆಯನ್ನು ಗುರುವಾರ ಬಂಧಿಸಿದ್ದಾರೆ.