ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1985- ಸುವರ್ಣ ವರ್ಷ

Last Updated 22 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ
1985 ನನ್ನ ಬದುಕಿನಲ್ಲಿಯೇ ಅತ್ಯಂತ ಹೆಚ್ಚು ಸಂತೋಷ ನೀಡಿದ ವರ್ಷ. ಮತ್ತೆ ಅಂಥ ಒಂದು ವರ್ಷವನ್ನು ನೋಡಲೇ ಇಲ್ಲ. `ನೀ ಬರೆದ ಕಾದಂಬರಿ' ಸಿನಿಮಾ ಮೂಲಕ ನಾನು ನಿರ್ದೇಶಕ ಆದದ್ದು, ಆ ಚಿತ್ರ ನಿರೀಕ್ಷೆಯಂತೆಯೇ ಚೆನ್ನಾಗಿ ಓಡಿದ್ದು 1985ರಲ್ಲಿ. ಅದೇ ಚಿತ್ರವನ್ನು ತಮಿಳಿನಲ್ಲಿ ರೀಮೇಕ್ ಮಾಡಲು ಪ್ರೇರಣೆ ನೀಡಿದ ರಜನೀಕಾಂತ್, ಶ್ರೀದೇವಿ ಮದ್ರಾಸ್‌ನಲ್ಲಿ ಅದು ದೊಡ್ಡ ಸುದ್ದಿಯಾಗಲು ಕಾರಣರಾದದ್ದು ಅದೇ ವರ್ಷ. ರಜನೀಕಾಂತ್ ಬಲವಂತಕ್ಕೆ ಮಣಿದು ಆ ಚಿತ್ರವನ್ನೂ ನಾನೇ ನಿರ್ದೇಶಿಸಿದೆ. ಊಟಿಯಲ್ಲಿ ಚಿತ್ರೀಕರಣ ನಡೆಯುವ ಸಂದರ್ಭದಲ್ಲಿ `ನನ್ನ ಮುಂದಿನ ಚಿತ್ರ ನೀವೇ ಮಾಡಬೇಕು ದ್ವಾರಕೀಶ್ ಸಾರ್' ಎಂದು ರಜನಿ ಹೇಳಿದ್ದ. 
 
ನಟ-ನಟಿಯಾಗಿ ರಜನಿ-ಶ್ರೀದೇವಿಗೆ ಇದ್ದ ಶಿಸ್ತನ್ನು ಮೆಚ್ಚಲೇಬೇಕು. ಊಟಿಯ ಚಳಿಯಲ್ಲಿ ಬೆಳಿಗ್ಗೆ ಏಳು ಗಂಟೆಗೇ ಚಿತ್ರೀಕರಣ ಇರುತ್ತಿತ್ತು. ಘಾಟ್ ಸೆಕ್ಷನ್‌ನಲ್ಲಿ ಲೊಕೇಷನ್. ತಂಗಿದ್ದ ಹೋಟೆಲ್‌ನಿಂದ 15-16 ಕಿ.ಮೀ. ದೂರದಲ್ಲಿ ಲೊಕೇಷನ್ ಇದ್ದದ್ದು. ಹಾಗಾಗಿ ಬೆಳಿಗ್ಗೆ 4.30ಕ್ಕೇ ಎದ್ದು ಸಿದ್ಧರಾಗಬೇಕಿತ್ತು. ರಜನಿ ಆಗಲೀ, ಶ್ರೀದೇವಿ ಆಗಲೀ ಒಂದು ದಿನವೂ ಬೇಸರ ಮಾಡಿಕೊಳ್ಳದೆ ಶಿಸ್ತಿನಿಂದ ಶೂಟಿಂಗ್ ಲೊಕೇಷನ್‌ಗೆ ಬರುತ್ತಿದ್ದರು. 
 
ಊಟಿಯಲ್ಲೇ ವಿಸಿಆರ್‌ನಲ್ಲಿ `ಉತ್ಸವ್' ಸಿನಿಮಾ ನೋಡಿದೆ. ಅದರಲ್ಲಿ ರೇಖಾ ಕಣ್ಣುಕೋರೈಸುವ ಬಟ್ಟೆ ಧರಿಸಿದ್ದರು. ನನ್ನ ಸಿನಿಮಾದಲ್ಲಿ ಶ್ರೀದೇವಿ ಕೂಡ ಅದೇ ರೀತಿಯ ಬಟ್ಟೆ ತೊಟ್ಟರೆ ಹಾಡಿನಲ್ಲಿ ಇನ್ನೂ ಚೆನ್ನಾಗಿ ಕಾಣುತ್ತಾರೆ ಎನಿಸಿತು. 
 
ರಾತ್ರಿ 10- 10.30 ಗಂಟೆಯ ಸಮಯ. ಆಗಲೇ ಶ್ರೀದೇವಿಯವರಿಗೆ ಫೋನ್ ಮಾಡಿದೆ. ಅಷ್ಟು ಹೊತ್ತಿನಲ್ಲಿ ಯಾರೋ ಫೋನ್ ಮಾಡಿದರೆ ಮಾತನಾಡುವವರ ಪೈಕಿ ಅಲ್ಲ ಶ್ರೀದೇವಿ. ಆದರೆ ನಾನು ಮುಖ್ಯವಾದ ವಿಷಯ ಹೇಳಲು ಫೋನ್ ಮಾಡಿದ್ದೇನೆ ಎಂಬುದು ಅವರಿಗೆ ಗೊತ್ತಿತ್ತು. ಹಾಗಾಗಿ ಕರೆಗೆ ಉತ್ತರಿಸಿದರು. `ಉತ್ಸವ್' ಸಿನಿಮಾ ಪ್ರಸ್ತಾಪ ಮಾಡಿದ ಮೇಲೆ ಅವರೂ ಆ ಚಿತ್ರದಲ್ಲಿ ರೇಖಾ ತೊಟ್ಟಿದ್ದ ಉಡುಗೆಯನ್ನು ನೋಡಿದರು.

ಅದೇ ರೀತಿಯ ಉಡುಗೆ ಎರಡೇ ದಿನದಲ್ಲಿ ಸಿದ್ಧವಾಗಿ ಲೊಕೇಷನ್‌ಗೆ ಬಂತು. ಶ್ರೀದೇವಿ ಅದನ್ನು ತೊಟ್ಟ ಮೇಲೆ ಇನ್ನೂ ಸುಂದರವಾಗಿ ಕಂಡರು. ಹಾಡಿನ ಒಂದು ಶಾಟ್‌ನಲ್ಲಿ ಅದು ಬಳಕೆಯಾಯಿತು. ಅದೇ ಸಂಜೆ ಉಡುಗೆಯ ಬಿಲ್ ನನ್ನ ಟೇಬಲ್ ಮೇಲೆ ಇತ್ತು. 1985ರಲ್ಲಿ ಆ ಉಡುಗೆಯ ಬಿಲ್ 75 ಸಾವಿರ ರೂಪಾಯಿ. ಅರ್ಧ ಸೆಕೆಂಡ್ ಶಾಟ್‌ಗೆ ನಾನು ಅಂಥ ದುಬಾರಿ ವಸ್ತ್ರವನ್ನು ತರಿಸಿದ್ದೆ. 
 
ಒಂದು ದಿನವೂ ರಜನಿ-ಶ್ರೀದೇವಿ ಯಾರನ್ನೂ ಕಾಯಿಸಲಿಲ್ಲ. ಒಮ್ಮೆ ಬೆಳಗಿನ ಜಾವ ಆರು ಗಂಟೆಗೆ ಟ್ರಾಲಿ ಶಾಟ್ ತೆಗೆಯಲು ಸಜ್ಜಾಗಿದ್ದೆವು. ಟ್ರಾಲಿಯಿಂದ ಒಂದು ಕ್ಯಾಮೆರಾ ಬಿದ್ದು, ಅದರ ಕವರ್ ಮುರಿದುಹೋಗಿ, ಕ್ಯಾಮೆರಾ ಜಖಂ ಆಯಿತು. ಇನ್ನೊಂದು ಕ್ಯಾಮೆರಾ ತರಿಸಲು ಒಂದು ದಿನ ಬೇಕಾಯಿತು. ಆಗಲೂ ಇಬ್ಬರೂ ಬೇಸರ ಪಟ್ಟುಕೊಳ್ಳಲಿಲ್ಲ. ಅವರಿಬ್ಬರನ್ನು ಶಿಸ್ತು ಹಾಗೂ ಬದ್ಧತೆಯ ವಿಷಯದಲ್ಲಿ ಎಷ್ಟು ಹೊಗಳಿದರೂ ಸಾಲದು. 
 
ಎವಿಎಂ ಸ್ಟುಡಿಯೋದಲ್ಲಿ ಅದೇ ಚಿತ್ರಕ್ಕೆಂದು ದೊಡ್ಡ ಮನೆಯ ಸೆಟ್ ಹಾಕಿಸಿದೆ. ಅದರ ನಿರ್ಮಾಣಕ್ಕೆ ತರಿಸಿದ ಪ್ರತಿ ವಸ್ತುವೂ ಹೊಸತು. ಹತ್ತು ವರ್ಷ ಆ ಸೆಟ್ ಅಲ್ಲಿ ಹಾಗೆಯೇ ಉಳಿದಿತ್ತು. ಎಷ್ಟೋ ಜನ ಆ ಸೆಟ್ ನೋಡಲೆಂದೇ ಅಲ್ಲಿಗೆ ಬರುತ್ತಿದ್ದರು. ಒಂದು ವಿಧದಲ್ಲಿ ಆ ಸೆಟ್ ಪ್ರವಾಸಿ ಆಕರ್ಷಣೆಯಾಗಿತ್ತು. 
 
ಅದೇ 1985ರಲ್ಲಿ `ನೀ ತಂದ ಕಾಣಿಕೆ' ಸಿನಿಮಾ ಮಾಡಿದೆ. ಮೈಸೂರಿನ ಲಲಿತಮಹಲ್ ಅರಮನೆಯಲ್ಲಿ ಮುಹೂರ್ತ ಸಮಾರಂಭ ಆಯೋಜಿಸಿದೆ. ವಿಷ್ಣುವರ್ಧನ್-ಜಯಸುಧಾ ಜೋಡಿ. ಗಿರೀಶ್ ಕಾರ್ನಾಡ್, ಸಿ.ಆರ್.ಸಿಂಹ ಮುಖ್ಯ ಪಾತ್ರದಲ್ಲಿದ್ದರು. ಅವರೆಲ್ಲಾ ಮುಹೂರ್ತದಲ್ಲಿದ್ದರು. ಬೆಂಗಳೂರಿನಿಂದ ಮೈಸೂರಿಗೆ ಪತ್ರಕರ್ತರನ್ನು ಕರೆದುಕೊಂಡು ಬರುವ ವ್ಯವಸ್ಥೆ ಮಾಡಲಾಗಿತ್ತು. ಒಂದೇ ವರ್ಷದಲ್ಲಿ ಏಕಕಾಲದಲ್ಲಿ ಮೂರು ನಾಲ್ಕು ಸಿನಿಮಾಗಳ ಯೋಚನೆಯನ್ನು ಆಗ ನಾನು ಮಾಡಿದ್ದೆ. ಲಕ್ಷ ಲಕ್ಷ ರೂಪಾಯಿಗಳ ಚೆಕ್‌ಗಳಿಗೆ ಸಹಿ ಹಾಕುತ್ತಿದ್ದೆ. ಮನೆ ಮುಂದೆ ಹತ್ತಾರು ಕಾರುಗಳು ನಿಲ್ಲುತ್ತಿದ್ದವು. 
 
ಆ ವರ್ಷದ ಕೊನೆಯ ದಿನ ಒಂದು ಪಾರ್ಟಿ ಕೊಟ್ಟೆ. ಮದ್ರಾಸ್‌ನ ಮೆಲೋನಿ ರಸ್ತೆಯ ನನ್ನ ಮನೆಯಲ್ಲಿ ಆ ದಿನ ತಮಿಳುಚಿತ್ರರಂಗದ ದಿಗ್ಗಜರೆಲ್ಲಾ ನೆರೆದಿದ್ದರು. ನಟ-ನಟಿಯರಷ್ಟೇ ಅಲ್ಲದೆ ವಿತರಕ, ನಿರ್ಮಾಪಕರ ದಂಡೇ ಅಲ್ಲಿತ್ತು. ಅಂಬುಜಾ ಆ ದಿನ ದೊಡ್ಡ ಪಾತ್ರೆಯಲ್ಲಿ ಬಿಸಿಬೇಳೆ ಭಾತ್ ಮಾಡಿದ್ದಳು. ಮಾರನೇ ದಿನ ಪತ್ರಿಕೆಗಳಲ್ಲಿ `ತಮಿಳ್ ನಡಿಗರೆಲ್ಲ ಕನ್ನಡ ನಡಿಗರ್ ವೀಟಿಲೆ ಪುದುವರ್ಷಂ'  ಎಂದು ಸುದ್ದಿ ಬಂತು.

ಆ ದಿನ ಪಾರ್ಟಿ ನಡೆಯುವಾಗ ರಾತ್ರಿ 12.30-12.45 ಸುಮಾರಿಗೆ ಮನೆಯ ಮೇಲಿನಿಂದ ಕೆಳಗೆ ಇಣುಕಿ ನೋಡಿದೆ. ಒಂದಿಷ್ಟು `ಗುಂಡು' ಹಾಕಿದ್ದ ನನಗೆ ಮನೆಯ ಕಾಂಪೌಂಡ್ ಹಾಗೂ ರಸ್ತೆಯಲ್ಲಿ ಎಣಿಸುವುದು ಕಷ್ಟ ಎನ್ನಿವಷ್ಟು ಸಂಖ್ಯೆಯ ಕಾರುಗಳು ಕಂಡವು. ಆ ಕಾರುಗಳೆಲ್ಲಾ ನನ್ನ ಮನೆಗೇ ಬಂದಿದ್ದವು. ಆ ದಿನ ನನ್ನ ಮನೆಯಲ್ಲಿ ಸಂತೋಷದಿಂದ ಓಡಾಡಿದ್ದ ಕೆಲವು ಮಕ್ಕಳೆಲ್ಲಾ ಈಗ ತಮಿಳುನಾಡಿನಲ್ಲಿ ಸಿನಿಮಾ ಸ್ಟಾರ್‌ಗಳಾಗಿದ್ದಾರೆ. ವಿ.ಕೆ.ರೆಡ್ಡಿಯವರ ಮಗ ವಿಶಾಲ್ ಅದಕ್ಕೆ ಒಬ್ಬ ಉದಾಹರಣೆ. 
 
ಪಾರ್ಟಿ ಮುಗಿದ ಮೇಲೆ ಎಲ್ಲರೂ ಹೊರಟರು. ರಾತ್ರಿ 2.30-3 ಗಂಟೆ ಹೊತ್ತಿಗೆ ಮೇಲಿನಿಂದ ಕೆಳಗೆ ಇಳಿದು ಬಂದೆ. ಹಠಾತ್ತನೆ ಮನಸ್ಸಿಗೆ ಏನೋ ಒಂದು ಶಾಕ್. `ಇದು ನಿನ್ನ ಜೀವನದ ಕೊನೆ ಪಾರ್ಟಿ ಆಗಬಹುದು' ಎಂದು ಯಾಕೋ ನನ್ನ ಮನಸ್ಸು ಚುಚ್ಚುವಂತೆ ಹೇಳಿತು. ಅದೇಕೆ ಹಾಗೆ ಅನ್ನಿಸಿತೋ ಗೊತ್ತಿಲ್ಲ. ನನಗೆ ದೃಷ್ಟಿ ಆಗಿತ್ತಾ? ದೇವರು ಸಿಗ್ನಲ್ ಕೊಟ್ಟನಾ? ಎಂದೆಲ್ಲಾ ಕಾಡಿತು. ಆ ದಿನ ವಿಷ್ಣುವರ್ಧನ್, ನಾನು, ರಜನೀಕಾಂತ್ ಕಳೆದ ಕ್ಷಣಗಳನ್ನು ಮರೆಯಲು ಸಾಧ್ಯವೇ ಇಲ್ಲ. 
 
ನನಗೆ ಪ್ರಹ್ಲಾದ್ ಎಂಬ ಇನ್ನೊಬ್ಬ ಒಳ್ಳೆಯ ಸ್ನೇಹಿತರಿದ್ದರು. ಕಷ್ಟಕಾಲದಲ್ಲಿ ಎಷ್ಟೋ ಸಲ ಅವರು ನನಗೆ ಆರ್ಥಿಕ ಸಹಾಯ ಮಾಡಿದ್ದಾರೆ. ಒಮ್ಮೆ ನಾನು, ಅವರು ಹಾಗೂ ವಿಷ್ಣು ಕಾಳಹಸ್ತಿಗೆ ಎರಡು ಕಾರುಗಳಲ್ಲಿ ಹೊರಟೆವು. ನಾನು ಇಂಪೋರ್ಟೆಡ್ ಕಾರ್ ಖರೀದಿಸಿದ ಮೇಲೆ ವಿಷ್ಣು ಕೂಡ ಒಂದು ಇಂಪೋರ್ಟೆಡ್ ಕಾರ್ ಖರೀದಿಸಿದ್ದ. ಒಂದಿಷ್ಟು ದೂರ ನಾನು ಅವನ ಕಾರನ್ನು ಓಡಿಸುತ್ತಿದ್ದೆ, ಅವನು ನನ್ನ ಕಾರನ್ನು ಓಡಿಸುತ್ತಿದ್ದ. ಪ್ರವಾಸದುದ್ದಕ್ಕೂ ಮಜವಾಗಿದ್ದೆವು. ನಮ್ಮ ನಡುವೆ ಅಷ್ಟರ ಮಟ್ಟಿನ ಸ್ನೇಹವಿತ್ತು. 
 
ಒಂದು ದಿನ ನಾನು ಬೇಸರದಿಂದ ಕುಳಿತಿದ್ದೆ. ಮನೆಗೆ ವಿಷ್ಣು ಬಂದ. `ಏನೋ ಪ್ರಾಬ್ಲಂ?' ಎಂದು ಕೇಳಿದ. ಸ್ವಲ್ಪ ಹೊತ್ತು ತಡೆದು, `ಫೈನಾನ್ಶಿಯಲ್ ಪ್ರಾಬ್ಲಮ್ಮಾ, ಎಷ್ಟು ಬೇಕು?' ಎಂದ. ನನಗೆ ತಕ್ಷಣಕ್ಕೆ ಎರಡು ಲಕ್ಷ ರೂಪಾಯಿ ಬೇಕಿತ್ತು. ಮದ್ರಾಸ್‌ನ ಸಿಐಟಿ ಕಾಲನಿಯಲ್ಲಿದ್ದ ತನ್ನ ಮನೆಗೆ ಫೋನ್ ಮಾಡಿ ತಕ್ಷಣವೇ ಎರಡು ಲಕ್ಷ ರೂಪಾಯಿ ತರಿಸಿ ಕೊಟ್ಟ. ಆ ಹಣವನ್ನು ನಾನು ಸರಿಯಾದ ಸಮಯಕ್ಕೆ ವಾಪಸ್ ಕೊಡಲಿಲ್ಲ. 
 
ನಾನು ವಿಷ್ಣು, ರಜನಿ ಮನೆಗೆ ಆಗಾಗ ಹೋಗುತ್ತಿದ್ದೆ. ವಿಷ್ಣು ಮನೆಯಲ್ಲಿ ಅಡುಗೆ ಮಾಡುವ ಶ್ರೀಧರ್ ಕೈರುಚಿಯ ಸಾರನ್ನು ಇನ್ನೂ ಮರೆತಿಲ್ಲ. ಚಾಲಕ ರಾಧಾ ಕೂಡ ನನಗೆ ಚೆನ್ನಾಗಿ ಗೊತ್ತು. ಅಷ್ಟೇಕೆ, ವಿಷ್ಣು ಸ್ನೇಹಿತರಾದ ನಿತ್ಯಾನಂದ, ವಿಠೋಬಾ ಇಂದಿಗೂ ನನ್ನ ಹೃದಯದಲ್ಲಿದ್ದಾರೆ. ನನ್ನಲ್ಲಿ ಇದ್ದ ಅರಸು ಎಂಬ ಚಾಲಕ ವಿಷ್ಣು ಹತ್ತಿರ ಕೆಲಸಕ್ಕೆ ಹೋಗಿದ್ದ. ನನ್ನ ಮ್ಯಾನೇಜರ್ ರಾಮದೊರೈ ಅವರನ್ನು ಅವನಲ್ಲಿಗೆ ನಾನೇ ಕಳಿಸಿಕೊಟ್ಟಿದ್ದೆ. `ವಿಷ್ಣು, ಜಗಳ ಆಡಬೇಡ' ಎಂದು ನಾನು ಪದೇಪದೇ ಹೇಳುತ್ತಿದ್ದೆ.

ದ್ವಾರಕೀಶ್-ವಿಷ್ಣು ಇನ್ನೂ ಏನೇನೋ ಮಾಡುತ್ತಾರೆ ಎಂದು ಜನ ಮಾತನಾಡಿಕೊಳ್ಳುವ ಹೊತ್ತಿನಲ್ಲೇ ಕ್ಲೈಮ್ಯಾಕ್ಸ್ ಬೇರೆಯೇ ಆಯಿತು. ನಮ್ಮಿಬ್ಬರ ಜೋಡಿಯನ್ನು ಬೇರ್ಪಡಿಸಲು ಕೆಲವು ಮನಸ್ಸುಗಳು ಕಾಯುತ್ತಿದ್ದವು. 
 
ಅಂಥ ಸಂದರ್ಭದಲ್ಲಿ ವಿಷ್ಣು ನನ್ನ ಮನೆಗೆ ಬಂದ. ಆಗ ನಾನು ಅವನ ಜೊತೆ ಸರಿಯಾಗಿ ಮಾತನಾಡಲಿಲ್ಲ; ನೋಯಿಸಿದೆ. ಆ ದೊಡ್ಡ ತಪ್ಪನ್ನು ಮಾಡಬಾರದಿತ್ತು. ಸ್ಟಾರ್ ಆಗಿದ್ದ ಅವನ ಜೊತೆ ಹಾಗೆ ವರ್ತಿಸಿದ್ದು ಸಲ್ಲದು. ಅಂಬುಜಾ ಕೂಡ ಆ ದಿನ ನನ್ನನ್ನು ಬಾಯಿಗೆ ಬಂದಂತೆ ಬೈದಳು.

ವಿಷ್ಣುಗೆ ಅವತ್ತು ನಾನು ನೋವು ಉಂಟುಮಾಡಿದ್ದೇ ಬದುಕಿನಲ್ಲಿ ಮೇಲಿಂದ ಮೇಲೆ ಕಷ್ಟಗಳನ್ನು ಅನುಭವಿಸಲು ಕಾರಣವಾಯಿತೋ ಏನೋ? `ವಿನಾಶ  ಕಾಲೇ ವಿಪರೀತ ಬುದ್ಧಿ' ಎನ್ನುತ್ತಾರಲ್ಲ; ಹಾಗೆ ನಾನು ವರ್ತಿಸಿದ್ದೆ. ಅದು ಕೆಟ್ಟ ದಿನ. ಈಗಲೂ ಭಾರತಿಯವರಿಗೆ ಆ ದಿನ ನಾನು ಮಾಡಿದ ತಪ್ಪನ್ನು ಕ್ಷಮಿಸುವ ಮನಸ್ಸನ್ನು ದೇವರು ಕೊಡಲಿ ಎಂದು ಪ್ರಾರ್ಥಿಸುತ್ತಿರುತ್ತೇನೆ. 

ಮುಂದಿನ ವಾರ: ರಜನಿ ಕೂಡ ದೂರವಾದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT